ಕ್ರೀಡೆ

ಟಿ20 ಟೂರ್ನಿ ಪರ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಬ್ಯಾಟಿಂಗ್

ನವದೆಹಲಿ: ಕರೊನಾದಿಂದಾಗಿ ವಿಳಂಬಗೊಂಡಿರುವ ದೇಶೀಯ ಕ್ರಿಕೆಟ್ ಋತುವಿನ ಆರಂಭಕ್ಕೆ ಬಿಸಿಸಿಐ ಈಗಾಗಲೆ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಮುಂದೆ 4 ಆಯ್ಕೆಗಳನ್ನು ಇಟ್ಟಿದೆ. ಇದಕ್ಕೆ ಬುಧವಾರದೊಳಗೆ ಉತ್ತರವನ್ನೂ ನೀಡಬೇಕಾಗಿದೆ. ಹೆಚ್ಚಿನ ರಾಜ್ಯ ಕ್ರಿಕೆಟ್ ಸಂಸ್ಥೆಗಳು 2020-21ರ ಸಾಲಿನ ದೇಶೀಯ ಕ್ರಿಕೆಟ್ ಋತುವಿನಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯನ್ನು ನಡೆಸಲೇಬೇಕೆಂದು ಒಲವು ತೋರಿವೆ ಎನ್ನಲಾಗಿದೆ.

ದೇಶೀಯ ಕ್ರಿಕೆಟ್ ಋತುವಿನ ಆರಂಭದಲ್ಲಿ ಟಿ20 ಟೂರ್ನಿಯನ್ನೇ ನಡೆಸಬೇಕು. ಅದರ ಯಶಸ್ಸನ್ನು ಗಮನಿಸಿ ರಣಜಿ ಟ್ರೋಫಿ ಆಯೋಜಿಸಬಹುದು ಎಂದು ಕೆಲ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ. ಟಿ20 ಟೂರ್ನಿ ಜತೆಗೆ ರಣಜಿ ಟ್ರೋಫಿಯೂ ಬೇಕೆಂದು ಕೆಲ ಸಂಸ್ಥೆಗಳು ಕೇಳಿಕೊಂಡಿದ್ದರೆ, ಇನ್ನು ಕೆಲವು ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಗೆ ಒಲವು ತೋರಿವೆ ಎನ್ನಲಾಗಿದೆ.

ಈ ಬಾರಿ ಪೂರ್ಣಪ್ರಮಾಣದ ರಣಜಿ ಟ್ರೋಫಿ ಅಥವಾ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಮಾತ್ರ ಅಥವಾ ರಣಜಿ ಮತ್ತು ಮುಷ್ತಾಕ್ ಅಲಿ ಟ್ರೋಫಿ ಅಥವಾ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿ ಆಯೋಜಿಸುವ 4 ಆಯ್ಕೆಗಳನ್ನು ಬಿಸಿಸಿಐ ಮುಂದಿಟ್ಟಿದೆ. ಇದಕ್ಕಾಗಿ 38 ತಂಡಗಳನ್ನು ತಲಾ 6ರಂತೆ 5 ಎಲೈಟ್ ಗ್ರೂಪ್ ಮತ್ತು 8 ತಂಡಗಳ ಪ್ಲೇಟ್ ಗುಂಪಿನಲ್ಲಿ ವಿಭಾಗಿಸುವ ಮತ್ತು 6 ಬಯೋ-ಬಬಲ್ ವಲಯಗಳಲ್ಲಿ ಪಂದ್ಯ ಆಯೋಜಿಸುವ ಯೋಜನೆಯನ್ನೂ ರೂಪಿಸಿದೆ. ಈ ಬಯೋ-ಬಬಲ್ ವಲಯಗಳಲ್ಲಿ ತಲಾ 3 ತಾಣಗಳು ಇರುತ್ತವೆ.