ಮುಂಬೈ: ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ( Hardik Pandya ) ಮತ್ತು ಜನಪ್ರಿಯ ಮಾಡೆಲ್ ನತಾಶಾ ಸ್ಟಾಂಕೋವಿಕ್ ( Natasa Stankovic ) ತಮ್ಮ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಪೂರ್ಣ ವಿರಾಮ ಘೋಷಿಸಿದ್ದಾರೆ. ಜುಲೈ 18ರಂದು ಸಾಮಾಜಿಕ ಜಾಲತಾಣದ ಮೂಲಕ ಇಬ್ಬರು ತಮ್ಮ ವಿಚ್ಛೇದನವನ್ನು ಖಚಿತಪಡಿಸುವ ಮೂಲಕ ಡಿವೋರ್ಸ್ ವದಂತಿಗಳು ನಿಜ ಎಂದು ಒಪ್ಪಿಕೊಂಡರು. ಡಿವೋರ್ಸ್ ಬೆನ್ನಲ್ಲೇ ನತಾಶಾ ದೇಶ ತೊರೆದಿದ್ದಾರೆ ಎಂಬ ಸುದ್ದಿಯಾಯಿತು. ಇತ್ತ ಹಾರ್ದಿಕ್ ಪಾಂಡ್ಯ ಕೂಡ ಕ್ರಿಕೆಟ್ನಲ್ಲಿ ಬಿಜಿಯಾದರು. ಇದರ ನಡುವೆ ಹಾರ್ದಿಕ್ ಪಾಂಡ್ಯ ಅವರು ಬ್ರಿಟಿಷ್ ಗಾಯಕಿ ಮತ್ತು ನಟಿ ಜಾಸ್ಮಿನ್ ವಾಲಿಯಾ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹರದಾಡಿತು ಮತ್ತು ಆ ಸುದ್ದಿ ತಣ್ಣಗಾಯಿತು.
ತಾಜಾ ಸುದ್ದಿ ಏನೆಂದರೆ, ಪಾಂಡ್ಯ ಮಾಜಿ ಪತ್ನಿ ನತಾಶಾಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸರ್ಬಿಯಾ ದೇಶದಿಂದ ಹಿಂದಿರುಗಿದ ನಂತರ ಫಿಟ್ನೆಶ್ ಕೋಚ್, ನಟ ಹಾಗೂ ಮಾಡೆಲ್ ಅಲೆಕ್ಸಾಂಡರ್ ಅಲೆಕ್ಸ್ ಜೊತೆ ನತಾಶಾ ಸಮಯ ಕಳೆಯುತ್ತಿದ್ದಾರೆ. ಕೆಲವೊಮ್ಮೆ ಜಿಮ್‌ನಲ್ಲಿ ಮತ್ತು ಕೆಲವೊಮ್ಮೆ ಈಜುಕೊಳದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅಲೆಕ್ಸಾಂಡರ್ ಇತ್ತೀಚೆಗಷ್ಟೇ ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ನತಾಶಾ ಈಜುಕೊಳದಲ್ಲಿ ತೇಲುವ ಗೊಂಬೆಯ ಮೇಲೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಅಲೆಕ್ಸಾ ಹಿಂದಿನಿಂದ ಬಂದು ನತಾಶಾಳನ್ನು ನೀರಿಗೆ ಕೆಡವುತ್ತಾರೆ. ಇದ್ದಕ್ಕಿದ್ದಂತೆ ನೀರಿಗೆ ಬಿದ್ದ ನತಾಶಾ ಶಾಕ್ಗೆ ಒಳಗಾಗಿರುವ ದೃಶ್ಯ ವಿಡಿಯೋದಲ್ಲಿದೆ.
ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ನತಾಶಾ ನಗುತ್ತಿರುವ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ. ಅಲೆಕ್ಸಾರನ್ನು ತನ್ನ ಸಹೋದರನೆಂದು ಭಾವಿಸುತ್ತೇನೆಂದು ನತಾಶಾ ಅನೇಕ ಸಂದರ್ಭದಲ್ಲಿ ಹೇಳಿದ್ದಾರೆ. ಅಲೆಕ್ಸಾ ಕೂಡ ಸೆರ್ಬಿಯಾದವರು. ಅವರು ಭಾರತದಲ್ಲಿ ಫಿಟ್ನೆಸ್ ತರಬೇತುದಾರ ಮತ್ತು ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದಾರೆ.
ವಿಡಿಯೋ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್ಗಳ ಮೂಲಕ ಹಾರ್ದಿಕ್ ಪಾಂಡ್ಯ ಕಾಲೆಳೆಯುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಮತ್ತೊಂದು ಅಕೌಂಟ್ನಿಂದ ಈ ವಿಡಿಯೋ ನೋಡುತ್ತಿರುತ್ತಾರೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಂದು ಮೂಲೆಯಲ್ಲಿ ಕುಳಿತು ಹಾರ್ದಿಕ್ ಅಳುತ್ತಿರುತ್ತಾರೆ, ನತಾಶಾ ನಡೆ ಸರಿಯಿಲ್ಲ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ನತಾಶಾ ಬೆಂಬಲಕ್ಕೆ ನಿಂತಿದ್ದು, ಆತ ಆಕೆಯ ಸಹೋದರ ಏನೇನೋ ಕಾಮೆಂಟ್ ಮಾಡಬೇಡಿ ಎಂದಿದ್ದಾರೆ. (ಏಜೆನ್ಸೀಸ್)