ಕ್ರೀಡೆ

ಆತ ಯಾರೆಂಬುದೇ ನನಗೆ ತಿಳಿದಿಲ್ಲ; ಭಾರತದ ಆಟಗಾರನ ಕುರಿತು ಯೂಟ್ಯೂಬರ್​ನ ಪ್ರಶ್ನೆಗೆ ದಿಗ್ಗಜ ಫುಟ್ಬಾಲ್​ ಆಟಗಾರನ ಉತ್ತರ ವೈರಲ್​

ನವದೆಹಲಿ: ಟೀಮ್​ ಇಂಡಿಯಾದ ಮಾಜಿ ನಾಯಕ, ರನ್​ ಮೆಷಿನ್, ಚೇಸಿಂಗ್​ ಮಾಸ್ಟರ್​​ ಎಂದೇ ಖ್ಯಾತಿ ಪಡೆದಿರುವ ವಿರಾಟ್​ ಕೊಹ್ಲಿ ಕ್ರೀಡಾ ಲೋಕದಲ್ಲಿ ತಮ್ಮದೇ ಆದ ಫ್ಯಾನ್​ ಬೇಸ್​ ಹೊಂದಿದ್ದಾರೆ. ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ವಿರಾಟ್​ ಕೊಹ್ಲಿ ಎಲ್ಲರಿಗೂ ತಿಳಿದಿರುವ ಚಿರಪರಿಚಿತ ವ್ಯಕ್ತಿ ಎಂದು ಹೇಳಬಹುದಾಗಿದೆ. ಆದರೆ, ಇಲ್ಲೊಬ್ಬ ಕ್ರೀಡಾಪಟುವಿಗೆ ವಿರಾಟ್​ ಕೊಹ್ಲಿ ಯಾರೆಂಬುದು ತಿಳಿದಿಲ್ಲವಂತೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್​ ಆಗುತ್ತಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಡ್ಯಾರೆನ್ ಜೇಸನ್ ವಾಟ್ಕಿನ್ಸ್ ಜೂನಿಯರ್​ IShowSpeed ಎಂದೇ ಖ್ಯಾತಿ ಪಡೆದಿರುವ ಯೂಟ್ಯೂಬರ್ ದಿಗ್ಗಜ ಫುಟ್​ಬಾಲ್​ ಆಟಗಾರ ಝ್ಲಾಟನ್ ಇಬ್ರಾಹಿಮೊವಿಕ್ ಅವರ ಸಂದರ್ಶನ ಮಾಡುತ್ತಾರೆ. ಈ ವೇಳೆ ವಿರಾಟ್​ ಕೊಹ್ಲಿ ಕುರಿತು ಪ್ರಶ್ನೆ ಕೇಳಲಾಗುತ್ತದೆ. ಇದಕ್ಕೆ ಉತ್ತರಿಸುವ ಇಬ್ರಾಹಿಮೊವಿಕ್ ನಾನು ಕ್ರಿಕೆಟ್​ ನೋಡುವುದಿಲ್ಲ ಹಾಗಾಗಿ ಆತ ಯಾರೆಂಬುದು ನನಗೆ ಗೊತ್ತಿಲ್ಲಾ ಎಂದು ಉತ್ತರಿಸುತ್ತಾರೆ.

ಈ ಬಗ್ಗೆ ಪುನಃ ಪ್ರಶ್ನೆ ಕೇಳಿದಾಗ ಇಲ್ಲ ಆತ ಯಾರೆಂಬುದು ನನಗೆ ನಿಜವಾಗಿಯೂ ತಿಳಿದಿಲ್ಲ. ಅಗೌರವ ತೋರುತ್ತಿದ್ದೇನೆ ಎಂದಲ್ಲಾ. ಆತನ ಬಗ್ಗೆ ನನಗೆ ತಿಳಿದಿಲ್ಲ ಎಂದು ವೈರಲ್​ ಆಗಿರುವ ವಿಡಿಯೋದಲ್ಲಿ ಹೇಳುತ್ತಾರೆ. ಯೂಟ್ಯೂಬರ್ ಡ್ಯಾರೆನ್ ಜೇಸನ್ ವಾಟ್ಕಿನ್ಸ್ ಕೊಹ್ಲಿ ಕುರಿತು ಪ್ರಶ್ನೆ ಕೇಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಫುಟ್​ಬಾಲ್​ ಆಟಗಾರ ರೊನಾಲ್ಡೊ ಅವರ ಬಳಿ ವಿರಾಟ್​ ಕೊಹ್ಲಿ ಕುರಿತು ಪ್ರಶ್ನೆ ಕೇಳಿದ್ದರು. ಇದಕ್ಕೆ ರೊನಾಲ್ಡೊ ನೀಡಿದ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.