ಕ್ರೀಡೆ

ಪ್ಯಾರಿಸ್​ ಒಲಿಂಪಿಕ್ಸ್ ಚಿನ್ನ ಗೆದ್ದ ಅರ್ಷದ್​ ನದೀಂಗೆ ಪಾಕಿಸ್ತಾನದಲ್ಲಿ ಸಿಕ್ಕ ಒಟ್ಟು ಬಹುಮಾನ ಮೊತ್ತವೆಷ್ಟು ಗೊತ್ತೇ?

ಇಸ್ಲಾಮಾಬಾದ್​: ಪ್ಯಾರಿಸ್​ನಲ್ಲಿ ಒಲಿಂಪಿಕ್ಸ್​ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಜಾವೆಲಿನ್​ ಥ್ರೋ ತಾರೆ ಅರ್ಷದ್​ ನದೀಂ ತವರೂರು ಪಾಕಿಸ್ತಾನದಲ್ಲಿ ಒಟ್ಟು 7.52 ಕೋಟಿ ರೂಪಾಯಿ (25 ಕೋಟಿ ರೂ. ಪಾಕಿಸ್ತಾನಿ ರೂಪಾಯಿ) ಬಹುಮಾನ ಮೊತ್ತ ಪಡೆದಿದ್ದಾರೆ.

ಪಾಕ್​ ಪಂಜಾಬ್​ ಪ್ರಾಂತ್ಯದ ಮುಖ್ಯಮಂತ್ರಿ ಮರಿಯಮ್​ ನವಾಜ್​ ಶರೀಫ್​ ಮಂಗಳವಾರವಷ್ಟೇ ನದೀಂಗೆ 3.01 ಕೋಟಿ ರೂ. (10 ಕೋಟಿ ಪಾಕಿಸ್ತಾನಿ ರೂ.) ನೀಡಿದ್ದರೆ, ಬುಧವಾರ ಪಾಕ್​ ಪ್ರಧಾನಿ ಶೆಹಬಾಜ್​ ಶರೀಫ್​ 4.51 ಕೋಟಿ ರೂ. (15 ಕೋಟಿ ಪಾಕಿಸ್ತಾನಿ ರೂ.) ಬಹುಮಾನ ಮೊತ್ತ ನೀಡಿ ಗೌರವಿಸಿದರು.

ಮುಂದೊಂದು ದಿನ ವಿಶ್ವದಾಖಲೆ ಮುರಿಯುವುದು ನನ್ನ ಗುರಿ ಎಂದು 27 ವರ್ಷದ ಅರ್ಷದ್​ ನದೀಂ ಇದೇ ವೇಳೆ ಹೇಳಿದ್ದಾರೆ. ಜೆಕ್​ ಗಣರಾಜ್ಯದ ಜಾನ್​ ಝೆಲೆಜ್ನಿ 1996ರಲ್ಲಿ 98.48 ಮೀ. ದೂರ ಜಾವೆಲಿನ್​ ಎಸೆದಿರುವುದು ವಿಶ್ವದಾಖಲೆಯಾಗಿದೆ.