ಕರ್ನಾಟಕ 2014-15ರಲ್ಲಿ ರಣಜಿ ಟ್ರೋಫಿ ಗೆದ್ದ ಸಂಭ್ರಮ. ಸಂಗ್ರಹ ಚಿತ್ರ
ಕ್ರೀಡೆ

Ranji Trophy 2026-27: ರಣಜಿ ಪಂದ್ಯ ಆಡುವ ಆಟಗಾರರಿಗೆ ಸಿಗುವ ವೇತನವೆಷ್ಟು ಗೊತ್ತೇ?

ಎಲ್ಲ 10 ಪಂದ್ಯ ಆಡಿದರೆ 1 ಕೋಟಿ ರೂ. ಬೋನಸ್​!

ಬೆಂಗಳೂರು: ರಣಜಿ ಟ್ರೋಫಿಯಲ್ಲಿ ಆಟಗಾರರಿಗೆ ಪ್ರತಿ ಪಂದ್ಯಕ್ಕೆ ಕನಿಷ್ಠ 1.6 ಲಕ್ಷ ರೂ. (ಪ್ರತಿ ದಿನಕ್ಕೆ 40 ಸಾವಿರ ರೂ.) ವೇತನ ನೀಡಲಾಗುತ್ತದೆ. 21ರಿಂದ 40 ಪಂದ್ಯ ಆಡಿರುವ ಅನುಭವಿಗಳಿಗೆ 2 ಲಕ್ಷ ರೂ. (ಪ್ರತಿ ದಿನಕ್ಕೆ 50 ಸಾವಿರ ರೂ.) ಮತ್ತು 40ಕ್ಕಿಂತ ಅಧಿಕ ಪಂದ್ಯ ಆಡಿರುವ ಅನುಭವಿಗಳಿಗೆ 2.4 ಲಕ್ಷ ರೂ. (ಪ್ರತಿ ದಿನಕ್ಕೆ 60 ಸಾವಿರ ರೂ.) ವೇತನ ನೀಡಲಾಗುತ್ತದೆ. ಮೀಸಲು ಆಟಗಾರರಿಗೆ ಇದರ ಶೇ.50 ಮೊತ್ತ ವೇತನವಾಗಿ ಸಿಗುತ್ತದೆ. ಇದರ ಜತೆಗೆ ಫೈನಲ್​ವರೆಗೆ ಎಲ್ಲ 10 ಪಂದ್ಯಗಳಲ್ಲಿ ಆಡುವ ಆಟಗಾರರಿಗೆ 75 ಲಕ್ಷದಿಂದ 1 ಕೋಟಿ ರೂ. ತನಕ ಬೋನಸ್​ ಸಿಗಲಿದೆ. ದೇಶೀಯ ಕ್ರಿಕೆಟಿಗರಿಗೆ ಹೆಚ್ಚಿನ ಆರ್ಥಿಕ ಬಲ ತುಂಬಲು ಬಿಸಿಸಿಐ ಕಳೆದ ವರ್ಷ ಈ ಯೋಜನೆಯನ್ನು ಜಾರಿಗೆ ತಂದಿತ್ತು. 1997ರಲ್ಲಿ ಮೊದಲ ಬಾರಿ ರಣಜಿ ಆಡಿದಾಗ ತನಗೆ ಇಡೀ ಪಂದ್ಯಕ್ಕೆ 1,700 ವೇತನ ಲಭಿಸಿತ್ತು ಎಂದು ಆಕಾಶ್​ ಚೋಪ್ರಾ ತಿಳಿಸಿದ್ದು, ರಣಜಿ ಕೂಡ ಈಗ ಎಷ್ಟು ಶ್ರೀಮಂತವಾಗಿ ಬೆಳೆದಿದೆ ಎಂಬುದು ಇದಕ್ಕೆ ಸಾಯಾಗಿದೆ.

5 ಕೋಟಿ ರೂ. ಬಹುಮಾನ

ರಣಜಿ ಟ್ರೋಫಿಯ ವಿಜೇತ ತಂಡ 5 ಕೋಟಿ ರೂ. ಪಡೆದರೆ, ರನ್ನರ್​ಅಪ್​ ತಂಡ 3 ಕೋಟಿ ರೂ. ಗಳಿಸಲಿದೆ. ಸೆಮೀಸ್​ನಲ್ಲಿ ಸೋತ 2 ತಂಡಗಳು ತಲಾ 1 ಕೋಟಿ ರೂ. ಪಡೆಯಲಿವೆ.

*42: ರಣಜಿಯಲ್ಲಿ ಮುಂಬೈ ದಾಖಲೆಯ 42 ಬಾರಿ ಚಾಂಪಿಯನ್​ ಪಟ್ಟವೇರಿದೆ. ಕರ್ನಾಟಕ 8 ಬಾರಿ ಗೆದ್ದಿರುವುದು ನಂತರದ ಗರಿಷ್ಠ. ದೆಹಲಿ (7), ಮಧ್ಯಪ್ರದೇಶ (5), ಬರೋಡ (5), ಸೌರಾಷ್ಟ್ರ (4), ವಿದರ್ಭ (3), ಬಂಗಾಳ (2), ತಮಿಳುನಾಡು (2), ರಾಜಸ್ಥಾನ (2), ಹೈದರಾಬಾದ್​ (2), ಮಹಾರಾಷ್ಟ್ರ (2), ರೈಲ್ವೇಸ್​ (2) ನಂತರದ ಸ್ಥಾನದಲ್ಲಿವೆ.

ಅರುಣಾಚಲ ತಂಡ ಆಡುವುದು ಅನುಮಾನ

ಅರುಣಾಚಲ ಪ್ರದೇಶ ಕ್ರಿಕೆಟ್​ ಸಂಸ್ಥೆಯ ಎರಡು ಬಣಗಳ ಕಾನೂನು ಹೋರಾಟದ ತಿಕ್ಕಾಟದಿಂದಾಗಿ ಈ ಬಾರಿ ಆ ರಾಜ್ಯದ ತಂಡ ರಣಜಿಯಲ್ಲಿ ಆಡುವುದೇ ಅನುಮಾನವೆನಿಸಿದೆ. ಅರುಣಾಚಲ ತಂಡ ಪ್ಲೇಟ್​ ಗುಂಪಿನ ಮೊದಲ ಪಂದ್ಯದಲ್ಲಿ ನಾಗಾಲ್ಯಾಂಡ್​ ವಿರುದ್ಧ ಅಹಮದಾಬಾದ್​ನಲ್ಲಿ ಆಡಬೇಕಿದೆ. ಆಂತರಿಕ ಆಡಳಿತಾತ್ಮಕ ತಿಕ್ಕಾಟದಿಂದಾಗಿ ತಂಡ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯದಿದ್ದರೆ, ಬಿಸಿಸಿಐ ನಿಯಮದನ್ವಯ ಸಂಪೂರ್ಣ ಟೂರ್ನಿಯಿಂದಲೇ ಹೊರಬೀಳಲಿದೆ. ಈ ಮುನ್ನ ಅರುಣಾಚಲ ತಂಡ 19 ವಯೋಮಿತಿಯ ವಿನೂ ಮಂಕಡ್​ ಟ್ರೋಫಿಯಿಂದ ಹೊರಗುಳಿದಿತ್ತು.