ಕ್ರೀಡೆ

ನಿನಗೆ ಬುದ್ಧಿ ಇದೆಯೇ? ಯುವ ವೇಗಿ ಆಕಾಶ್ ವಿರುದ್ಧ ಮೈದಾನದಲ್ಲೇ ನಾಯಕ ರೋಹಿತ್​ ಶರ್ಮ ಆಕ್ರೋಶ | Rohit Sharma

Rohit Sharma: ಟೀಮ್​ ಇಂಡಿಯಾದ ನಾಯಕ ರೋಹಿತ್ ಶರ್ಮ ತಾಳ್ಮೆ ಕಳೆದುಕೊಂಡು ಯುವ ವೇಗಿ ಆಕಾಶ್ ದೀಪ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ. ಆಕಾಶ್​ ಉದ್ದೇಶಿಸಿ ನಿನಗೆ ಬುದ್ಧಿ ಇದೆಯೇ? ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಪ್ರಸ್ತುತ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಎರಡೂ ತಂಡಗಳು ಈಗಾಗಲೇ ತಲಾ ಒಂದೊಂದು ಪಂದ್ಯ ಗೆದ್ದು 1-1ರಲ್ಲಿ ಸಮಬಲ ಸಾಧಿಸಿವೆ. ಈ ಅನುಕ್ರಮದಲ್ಲಿ ಶನಿವಾರ ಆರಂಭವಾದ ಭಾರತ ಮತ್ತು ಆಸೀಸ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ತಂಡ ಬಲಿಷ್ಠ ಸ್ಥಿತಿಯಲ್ಲೇ ಮುಂದುವರಿದಿದೆ.

ಬ್ರಿಸ್ಬೇನ್​ನ ಗಬ್ಬಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ರೋಹಿತ್ ಸೇನೆಗೆ ಕಹಿ ಅನುಭವವಾಗಿದೆ. ಮೊದಲ ದಿನದಿಂದಲೇ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಆಸ್ಟ್ರೇಲಿಯಾ, ಎರಡನೇ ದಿನದಾಟದ ಅಂತ್ಯಕ್ಕೆ ಏಳು ವಿಕೆಟ್ ನಷ್ಟಕ್ಕೆ 405 ರನ್ ಗಳಿಸಿತು. ಸೋಮವಾರದ ಮೂರನೇ ದಿನದ ಆಟ ಆರಂಭಿಸಿದ ಆಸಿಸ್​ ಪಡೆ 445 ರನ್ ಗಳಿಸಿ ಆಲೌಟ್​ ಆಯಿತು. ಭಾರತದ ಬೌಲರ್‌ಗಳಲ್ಲಿ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ 6 ವಿಕೆಟ್ ಪಡೆದರೆ, ಸಿರಾಜ್ ಎರಡು ವಿಕೆಟ್​ ಪಡೆದರು. ನಿತೀಶ್ ಕುಮಾರ್ ರೆಡ್ಡಿ ಹಾಗೂ ಆಕಾಶ್​ ದೀಪ್​ ತಲಾ ಒಂದು ವಿಕೆಟ್ ಗಳಿಸಿದರು.

ಸೋಮವಾರ ಆಸೀಸ್ ಇನಿಂಗ್ಸ್​ನ 114ನೇ ಓವರ್​ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮ ಅವರು ಆಕಾಶ್ ದೀಪ್ ಎಸೆತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆಸೀಸ್ ಕೀಪರ್ ಅಲೆಕ್ಸ್ ಕ್ಯಾರಿ ಕ್ರೀಸ್‌ನಲ್ಲಿದ್ದಾಗ 28ರ ಹರೆಯದ ಆಕಾಶ್​ ದೀಪ್​ ವೈಡ್ ಬಾಲ್ ಎಸೆದರು. ಆ ಎಸೆತವನ್ನು ತಡೆಯಲು ವಿಕೆಟ್ ಕೀಪರ್ ರಿಷಭ್​ ಪಂತ್ ಪ್ರಯತ್ನ ಮಾಡಿದರೂ ಆಸೀಸ್ ಖಾತೆಗೆ ಹೆಚ್ಚುವರಿ ರನ್ (2) ಸೇರಿತು. ಇದರಿಂದ ತಾಳ್ಮೆ ಕಳೆದುಕೊಂಡ ರೋಹಿತ್ ಶರ್ಮ ಆಕಾಶ್​ಗೆ ನಿನಗೇನಾದರೂ ಬುದ್ಧಿ ಇದೆಯೇ? ಎಂದು ಆಕ್ರೋಶ ಹೊರಹಾಕಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮೂರನೇ ದಿನದಂದು ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ ಭಾರತ ದಿನದ ಅಂತ್ಯಕ್ಕೆ 5 ವಿಕೆಟ್​ ಕಳೆದುಕೊಂಡು ಕೇವಲ 116 ರನ್​ ಗಳಿಸಿ, ಸಂಕಷ್ಟಕ್ಕೆ ಸಿಲುಕಿದೆ. ಸದ್ಯ ಕೆ.ಎಲ್​. ರಾಹುಲ್​ ಮತ್ತು ರವೀಂದ್ರ ಜಡೇಜಾ ಕ್ರೀಸ್​ನಲ್ಲಿದ್ದಾರೆ. (ಏಜೆನ್ಸೀಸ್​)