ನ್ಯೂಯಾರ್ಕ್: ನಾಲ್ಕು ಬಾರಿಯ ಚಾಂಪಿಯನ್ ನೊವಾಕ್ ಜೋಕೊವಿಕ್, 2ನೇ ಶ್ರೇಯಾಂಕಿತ ಕಾಲೋರ್ಸ್ ಅಲ್ಕರಾಜ್, ಆತಿಥೇಯ ಅಮೆರಿಕದ ತಾರೆಯರಾದ ಟೇಲರ್ ಫ್ರಿಟ್ಜ್, ಜೆಸ್ಸಿಕಾ ಪೆಗುಲಾ, ಟೇಲರ್ ಟೌನ್ಸೆಂಡ್, ಮಹಿಳಾ ಸಿಂಗಲ್ಸ್ ಹಾಲಿ ಚಾಂಪಿಯನ್ ಬೆಲಾರಸ್ ಬೆಡಗಿ ಅರಿನಾ ಸಬಲೆಂಕಾ, ಕಜಾಕ್ಸ್ತಾನದ ಎಲಿನಾ ರೈಬಕಿನಾ, ಇಟಲಿಯ ಜಾಸ್ಮಿನ್ ಪಾವೊಲಿನಿ ಮತ್ತು ಜೆಕ್ ತಾರೆ ಬಾರ್ಬೊರಾ ಕ್ರೆಜ್ಸಿಕೋವಾ ವರ್ಷದ ಕೊನೇ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಯುಎಸ್ ಓಪನ್ನಲ್ಲಿ ಪ್ರಿ ಕ್ವಾರ್ಟರ್ಫೈನಲ್ ಹಂತಕ್ಕೇರಿದ್ದಾರೆ. ಮೂರು ಬಾರಿಯ ರನ್ನರ್ಅಪ್ ವಿಕ್ಟೋರಿಯಾ ಅಜರೆಂಕಾ, ಮಾಜಿ ಚಾಂಪಿಯನ್ ಎಮ್ಮಾ ರಾಡುಕಾನು, 5ನೇ ಶ್ರೇಯಾಂಕಿತೆ ಮಿರಾ ಆಂಡ್ರೀವಾ ಮತ್ತು ಆತಿಥೇಯ ಅಮೆರಿಕದ ತಾರೆ ಬೆನ್ ಶೆಲ್ಟನ್ ಮೂರನೇ ಸುತ್ತಿನಲ್ಲೇ ಮುಗ್ಗರಿಸಿದ್ದಾರೆ.
25ನೇ ಗ್ರಾಂಡ್ ಸ್ಲಾಂ ಪ್ರಶಸ್ತಿಯ ಕನಸಿನಲ್ಲಿರುವ ಸೆರ್ಬಿಯಾ ತಾರೆ ಜೋಕೊವಿಕ್ ಶುಕ್ರವಾರ ನಡೆದ 3ನೇ ಸುತ್ತಿನ ಕಾದಾಟದಲ್ಲಿ ಬ್ರಿಟನ್ನ ಕ್ಯಾಮರಾನ್ ನೋರಿ ವಿರುದ್ಧ 6-4, 6-7, 6-2, 6-3 ಸೆಟ್ಗಳಿಂದ ಎರಡು ಗಂಟೆ 50 ನಿಮಿಷಗಳಲ್ಲಿ ಗೆಲುವು ಸಾಧಿಸಿದರು. 38 ವರ್ಷದ ಜೋಕೊವಿಕ್ ಪಂದ್ಯದ ಆರಂಭದಲ್ಲಿ ಬೆನ್ನು ನೋವಿನ ಸಮಸ್ಯೆ ಎದುರಿಸಿದರು ಮತ್ತು ವೈದ್ಯಕಿಯ ವಿರಾಮವನ್ನೂ ಪಡೆದರು. ಆದರೆ ನಂತರ ಒಟ್ಟಾರೆ 18 ಏಸ್ಗಳನ್ನು ಸಿಡಿಸುವ ಮೂಲಕ 1991ರ ಬಳಿಕ ಟೂರ್ನಿಯ 4ನೇ ಸುತ್ತಿಗೇರಿದ ಅತ್ಯಂತ ಹಿರಿಯ ಆಟಗಾರ ಎನಿಸಿದರು. ಜೋಕೋ 69ನೇ ಬಾರಿ ಗ್ರಾಂಡ್ ಸ್ಲಾಂ ಟೂರ್ನಿಯ ಅಂತಿಮ 16ರ ಘಟ್ಟಕ್ಕೇರಿ ಸ್ವಿಸ್ ದಿಗ್ಗಜ ರೋಜರ್ ಫೆಡರರ್ ದಾಖಲೆ ಸರಿಗಟ್ಟಿದರು. 7ನೇ ಶ್ರೇಯಾಂಕಿತ ಜೋಕೋಗೆ ಜರ್ಮನಿಯ ಅರ್ಹತಾ ಸುತ್ತಿನ ಅಟಗಾರ ಜಾನ್ ಲೆನಾರ್ಡ್ ಮುಂದಿನ ಎದುರಾಳಿಯಾಗಿದ್ದಾರೆ.
ಅಲ್ಕರಾಜ್ಗೂ ಗಾಯದ ಸಮಸ್ಯೆ: ಸ್ಪೇನ್ ಯುವತಾರೆ ಅಲ್ಕರಾಜ್ ಕೂಡ 3ನೇ ಸುತ್ತಿನ ಪಂದ್ಯದ ವೇಳೆ ಗಾಯದ ಸಮಸ್ಯೆ ಎದುರಿಸಿದರೂ, ಇಟಲಿಯ ಲುಸಿಯಾನೊ ಡಾರ್ಡೆರಿ ವಿರುದ್ಧ 6-2, 6-4, 6-0 ನೇರಸೆಟ್ಗಳಿಂದ ಒಂದು ಗಂಟೆ 44 ನಿಮಿಷಗಳಲ್ಲೇ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು. 5 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡೆಯ ಅಲ್ಕರಾಜ್ ಮೊದಲ 14 ಗೇಮ್ಗಳಲ್ಲಿ 10ರಲ್ಲಿ ಗೆದ್ದ ಬಳಿಕ ಮೊಣಕಾಲು ನೋವು ಎದುರಿಸಿದರು. 22 ವರ್ಷದ ಅಲ್ಕರಾಜ್ ಮೆಡಿಕಲ್ ಟೈಮ್ ಔಟ್ ಬಳಿಕವೂ ಲಯ ಕಾಯ್ದುಕೊಂಡರು. ಇದು ಗ್ರಾಂಡ್ ಸ್ಲಾಂನಲ್ಲಿ ಅವರಿಗೆ 80ನೇ ಪಂದ್ಯ ಗೆಲುವಾಗಿದೆ.
ಸಬಲೆಂಕಾ, ಪೆಗುಲಾಗೆ ಜಯ
ಅಗ್ರ ಶ್ರೇಯಾಂಕಿತೆ ಸಬಲೆಂಕಾ ಕೆನಡಾದ ಲೈಲಾ ಫೆರ್ನಾಂಡೆಜ್ ಎದುರು 6-3, 7-6 ನೇರಸೆಟ್ಗಳಿಂದ ಗೆದ್ದರೆ, 4ನೇ ಶ್ರೇಯಾಂಕಿತೆ ಪೆಗುಲಾ 6-1, 7-5ರಿಂದ ಅನುಭವಿ ಆಟಗಾರ್ತಿ ಅಜರೆಂಕಾ ಎದುರು ಜಯಿಸಿದರು. ಕಳೆದ ಪಂದ್ಯದ ಬಳಿಕ ಒಸ್ತಾಪೆಂಕೊ ಜತೆ ವಾಗ್ವಾದ ನಡೆಸಿ ಸುದ್ದಿಯಾಗಿದ್ದ ಅಮೆರಿಕದ ಟೇಲರ್ ಟೌನ್ಸೆಂಡ್ ಈ ಬಾರಿ ರಷ್ಯಾದ 19 ವರ್ಷದ ತಾರೆ ಆಂಡ್ರೀವಾಗೆ 7-5, 6-2ರಿಂದ ಆಘಾತ ನೀಡಿ ಗಮನಸೆಳೆದರು. 9ನೇ ಶ್ರೇಯಾಂಕಿತೆ ರೈಬಕಿನಾ ಬ್ರಿಟನ್ನ ರಾಡುಕಾನು ವಿರುದ್ಧ 6-1, 6-2 ನೇರಸೆಟ್ಗಳಿಂದ ಸುಲಭ ಗೆಲುವು ಸಾಧಿಸಿದರು. 7ನೇ ಶ್ರೇಯಾಂಕಿತೆ ಪಾವೊಲಿನಿ ಜೆಕ್ ಗಣರಾಜ್ಯದ ವೊಂಡ್ರೌಸೋವಾ ಎದುರು 6-7, 1-6ರಿಂದ ಆಘಾತ ಎದುರಿಸಿದರು.
ಶೆಲ್ಟನ್ಗೆ ಶಾಕ್
ಆರನೇ ಶ್ರೇಯಾಂಕಿತ ಬೆನ್ ಶೆಲ್ಟನ್ 3ನೇ ಸುತ್ತಿನಲ್ಲಿ 6-3, 3-6, 6-4, 4-6ರಿಂದ ಸಮಬಲದ ಹೋರಾಟ ನಡೆಸುತ್ತಿದ್ದಾಗ ಕಾಡಿದ ಎಡ ಭುಜ ನೋವಿನಿಂದಾಗಿ ಪಂದ್ಯ ತ್ಯಜಿಸಿದರು. ಇದರಿಂದ ಫ್ರಾನ್ಸ್ನ 37 ವರ್ಷದ ಆಡ್ರಿಯನ್ ಮ್ಯಾನರಿನೊ ಯುಎಸ್ ಓಪನ್ನಲ್ಲಿ 15ನೇ ಯತ್ನದಲ್ಲಿ ಮೊದಲ ಬಾರಿ 4ನೇ ಸುತ್ತು ಪ್ರವೇಶಿಸುವಲ್ಲಿ ಯಶಸ್ವಿಯಾದರು. ಅಮೆರಿಕದ ಮತ್ತೋರ್ವ ಆಟಗಾರ ಟಿಯಾಫೋಯಿ ಜರ್ಮನಿಯ ಜಾನ್ ಲಿನಾರ್ಡ್ ಎದುರು 4-6, 3-6, 6-7ರಿಂದ ಶರಣಾದರು.
ಇದರಿಂದ ಟೂರ್ನಿಯ ಆರಂಭದಲ್ಲಿ ಕಣದಲ್ಲಿದ್ದ ಆತಿಥೇಯ ಅಮೆರಿಕದ 23 ಆಟಗಾರರ ಪೈಕಿ ಈಗ ಇಬ್ಬರಷ್ಟೇ ಸವಾಲು ಜೀವಂತ ಉಳಿಸಿಕೊಂಡಿದ್ದಾರೆ. ಅವರಲ್ಲಿ ಒಬ್ಬರು ಹಾಲಿ ರನ್ನರ್ಅಪ್ ಟೇಲರ್ ಫ್ರಿಟ್ಜ್. ಅವರ 3ನೇ ಸುತ್ತಿನಲ್ಲಿ ಸ್ವಿರ್ಜಲೆಂಡ್ನ ಜೆರೋಮ್ ಕಿಮ್ ವಿರುದ್ಧ 7-6, 6-7, 6-4, 6-4ರಿಂದ ಗೆಲುವು ಸಾಧಿಸಿದರು. 14ನೇ ಶ್ರೇಯಾಂಕಿತ ಟಾಮಿ ಪೌಲ್ ಪುರುಷರ ಸಿಂಗಲ್ಸ್ನಲ್ಲಿ ಸವಾಲು ಉಳಿಸಿಕೊಂಡಿರುವ ಮತ್ತೋರ್ವ ಅಮೆರಿಕ ಆಟಗಾರರಾಗಿದ್ದಾರೆ.
ಭಾರತೀಯರ ಶುಭಾರಂಭ
ಪುರುಷರ ಡಬಲ್ಸ್ನಲ್ಲಿ ಭಾರತದ ಅನಿರುದ್ಧ ಚಂದ್ರಶೇಖರ್ ಮತ್ತು ವಿಜಯ್ ಪ್ರಶಾಂತ್ ಜೋಡಿ 8ನೇ ಶ್ರೇಯಾಂಕಿತ ಸ್ಥಳಿಯ ಜೋಡಿಯಾದ ಕ್ರಿಶ್ಚಿಯನ್ ಹ್ಯಾರಿಸನ್ ಮತ್ತು ಇವಾನ್ ಕಿಂಗ್ಗೆ 3-6, 6-3, 6-4ರಿಂದ ಆಘಾತ ನೀಡುವ ಮೂಲಕ ಶುಭಾರಂಭ ಕಂಡರು. ಭಾರತದ ಮತ್ತೊಂದು ಜೋಡಿಯಾದ ರಿತ್ವಿಕ್ ಬೊಲ್ಲಿಪಲ್ಲಿ ಮತ್ತು ಎನ್. ಬಾಲಾಜಿ ಶ್ರೀರಾಮ್ ಜೋಡಿ ಮೊದಲ ಸುತ್ತಿನಲ್ಲೇ ಪರಾಭವಗೊಂಡರು.