ಕ್ರೀಡೆ

ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ವೃತ್ತಿಜೀವನದ ಗೋಲ್ಡನ್​ ಸ್ಲಾಂ ಸಾಧಿಸಿದ ಜೋಕೊವಿಕ್​!

ಪ್ಯಾರಿಸ್​: ಸೆರ್ಬಿಯಾದ 24 ಗ್ರಾಂಡ್​ ಸ್ಲಾಂ ಪ್ರಶಸ್ತಿಗಳ ಒಡೆಯ ನೊವಾಕ್​ ಜೋಕೊವಿಕ್​ ತನ್ನ ಸಾಧನೆಗಳ ಪಟ್ಟಿಗೆ ಒಲಿಂಪಿಕ್ಸ್​ ಸ್ವರ್ಣ ಪದಕವನ್ನೂ ಸೇರ್ಪಡೆಗೊಳಿಸಿದ್ದಾರೆ. ಪ್ಯಾರಿಸ್​ ಒಲಿಂಪಿಕ್ಸ್​ ಟೆನಿಸ್​ ಸ್ಪರ್ಧೆಯ ಪುರುಷರ ಸಿಂಗಲ್ಸ್​ ವಿಭಾಗದಲ್ಲಿ ಭಾನುವಾರ ರೋಲ್ಯಾಂಡ್​ ಗ್ಯಾರಸ್​ನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ 37 ವರ್ಷದ ಜೊಕೊವಿಕ್​ ಸ್ಪೇನ್​ ಯುವ ಆಟಗಾರ ಕಾಲೋರ್ಸ್​ ಅಲ್ಕರಾಜ್​ ಎದುರು 7-6, 7-6 ನೇರಸೆಟ್​ಗಳಿಂದ ಅಮೋ ಗೆಲುವು ದಾಖಲಿಸಿದರು. ಈ ಮೂಲಕ ಜೋಕೊವಿಕ್​ ಒಲಿಂಪಿಕ್ಸ್​ ಟೆನಿಸ್​ನಲ್ಲಿ ಚಿನ್ನದ ಪದಕ ಗೆದ್ದ ಅತಿ ಹಿರಿಯ ಆಟಗಾರ ಎನಿಸಿದ್ದಾರೆ. ಜತೆಗೆ ಎಲ್ಲ 4 ಗ್ರಾಂಡ್​ ಸ್ಲಾಂ ಪ್ರಶಸ್ತಿ ಗೆಲುವಿನೊಂದಿಗೆ ಒಲಿಂಪಿಕ್ಸ್​ ಚಿನ್ನದ ಪದಕವನ್ನು ಗೆದ್ದು "ಕೆರಿಯರ್​ ಗೋಲ್ಡನ್​ ಸ್ಲಾಂ' ಸಾಧಿಸಿದ ವಿಶ್ವದ 5ನೇ ಆಟಗಾರ ಎನಿಸಿದರು.

ವಿಶ್ವ ನಂ. 1 ಪಟ್ಟದಲ್ಲಿ ಅತ್ಯಧಿಕ 428 ವಾರಗಳ ಕಾಲ ನೆಲೆಸಿದ ಆಟಗಾರ ಎನಿಸಿರುವ ಜೋಕೊವಿಕ್​ 2008ರಿಂದಲೂ ಒಲಿಂಪಿಕ್ಸ್​ನಲ್ಲಿ ಆಡುತ್ತಿದ್ದರೂ, ಪದಾರ್ಪಣೆಯ ಆವೃತ್ತಿಯಲ್ಲಿ ಕಂಚು ಗೆದ್ದಿದ್ದೇ ಸಿಂಗಲ್ಸ್​ನಲ್ಲಿ ಇದುವರೆಗಿನ ಶ್ರೇಷ್ಠ ಸಾಧನೆಯಾಗಿತ್ತು. ಎಲ್ಲ 4 ಗ್ರಾಂಡ್​ ಸ್ಲಾಂ ಜತೆಗೆ ಡೇವಿಸ್​ ಕಪ್​, ಎಟಿಪಿ ಫೈನಲ್ಸ್​ ಸಹಿತ ಟೆನಿಸ್​ನಲ್ಲಿ ಎಲ್ಲ ಪ್ರಶಸ್ತಿ ಗೆದ್ದಿದ್ದ ಜೋಕೋಗೆ ಒಲಿಂಪಿಕ್ಸ್​ ಚಿನ್ನದ ಕೊರತೆಯೊಂದೇ ಕಾಡುತ್ತಿತ್ತು. ಜೋಕೋ 2ನೇ ಸುತ್ತಿನಲ್ಲಿ 14 ಬಾರಿಯ ಫ್ರೆಂಚ್​ ಓಪನ್​ ಚಾಂಪಿಯನ್​ ರಾಫೆಲ್​ ನಡಾಲ್​ಗೆ ಸೋಲುಣಿಸಿದ್ದರು. 21 ವರ್ಷದ ಅಲ್ಕರಾಜ್​ ಒಲಿಂಪಿಕ್ಸ್​ ಚಿನ್ನ ಗೆದ್ದ ಅತಿ ಕಿರಿಯ ಆಟಗಾರ ಎನಿಸುವ ಅವಕಾಶದಿಂದ ವಂಚಿತರಾದರೂ, ಬೆಳ್ಳಿ ಪದಕದ ಸಮಾಧಾನ ಕಂಡರು.

ಜೋಕೊವಿಕ್​ "ವೃತ್ತೀಜಿವನದ ಗೋಲ್ಡನ್​ ಸ್ಲಾಂ' ಸಾಧಿಸಿದ ವಿಶ್ವದ 5ನೇ ಆಟಗಾರ ಎನಿಸಿದರು. ಸ್ಟೆಫಿ ಗ್ರಾಫ್​, ಆಂಡ್ರೆ ಅಗಾಸಿ, ಸೆರೇನಾ ವಿಲಿಯಮ್ಸ್​ ಮತ್ತು ರಾಫೆಲ್​ ನಡಾಲ್​ ಹಿಂದಿನ ನಾಲ್ವರು ಸಾಧಕರಾಗಿದ್ದಾರೆ.