ಬೆಂಗಳೂರು: ಉದ್ಯಾನನಗರಿಯ ಅತ್ಯಂತ ಪ್ರೀತಿಪಾತ್ರ ವೀಕೆಂಡ್ ತಾಣವಾದ ನಂದಿಹಿಲ್ಸ್ ಇದೀಗ ವಿಶಿಷ್ಟ ಓಟದ ಅನುಭವಕ್ಕೆ ವೇದಿಕೆಯಾಗಲಿದೆ. ದಿವ್ಯಶ್ರೀ ನಂದಿಹಿಲ್ಸ್ ಮಾನ್ಸೂನ್ ರನ್ ಮುಂಗಾರು ಋತುವಿನ ನಿಜವಾದ ಹಬ್ಬವಾಗಿ ರೂಪುಗೊಳ್ಳಲಿದೆ. ಪರಂಪರೆಯ ಆಕರ್ಷಣೆ, ಸಾಹಸ ಪ್ರವೃತ್ತಿಯ ಉತ್ಸಾಹ ಮತ್ತು ಉತ್ತಮ ಆರೋಗ್ಯದ ಹಂಬಲ , ಇವುಗಳ ಸಂಯಕ್ತವಾಗಿರುವ ಕಾರ್ಯಕ್ರಮ ಆಗಸ್ಟ್ 10ರಂದು ನಡೆಯಲಿದೆ.
ಮೋಡಗಳನ್ನು ಚುಂಬಿಸುವ ಬೆಟ್ಟ, ಹಚ್ಚ ಹಸಿರು ತುಂಬಿದ ಹಾದಿ ಮತ್ತು ತಂಪಾದ ಗಾಳಿ ಇದರೊಟ್ಟಿಗೆ ಮಂಜು ಮುಸುಕಿದ ರಸ್ತೆ ತಿರುವುಗಳಲ್ಲಿ ಬೆಟ್ಟ ಏರುವ ಸವಾಲನ್ನು ಎದುರಿಸುತ್ತಾ ಓಟಗಾರರು ಸಾಗುತ್ತಾರೆ. ಹವಾಮಾನ ಸಹಕರಿಸಿದರೆ ತುಂತುರು ಮಳೆ ಹನಿ ಓಟದ ಅನುಭವವನ್ನು ಹೆಚ್ಚಿಸುತ್ತದೆ.
ಇದು ಸಮಯ ನಿಗದಿತ ಓಟ. ಎಲ್ಲಾ ವಯೋಮಾನದವರು ಸ್ಪರ್ಧಿಸಿ ಬಹುಮಾನ ಗೆಲ್ಲಲು ಅವಕಾಶ ಇರುತ್ತದೆ. ಈ ಅವಕಾಶ ಮುಂಗಾರು ಓಟವನ್ನು ಗಂಭೀರವಾಗಿ ಪರಿಗಣಿಸುವ ಸ್ಪರ್ಧಿಗಳು ಹಾಗೂ ಮುಂಗಾರು ಉತ್ಸಾಹಿಗಳು ಇವರಿಬ್ಬರಿಗೂ ಪ್ರೋತ್ಸಾಹದಾಯಕವಾಗಿದೆ.
ಓಟದ ವಿಭಾಗಗಳು: ಹಾಫ್ ಮ್ಯಾರಥಾನ್ (21.1ಕೆ): "ದಿವ್ಯಶ್ರೀ ವಾವ್" ನಿಂದ ಓಟ ಆರಂಭವಾಗಿ ನಂದಿ ಬೆಟ್ಟದ ತುದಿಯವರೆಗೆ ಸಾಗಿ ಮತ್ತೆ ಬೆಟ್ಟದ ತಪ್ಪಲಿಗೆ ಹಿಂದಿರುಗುವುದು.
10ಕೆ ಚ್ಯಾಲೆಂಜ್: ಬೆಟ್ಟದ ಅರ್ಧ ಭಾಗದವರೆಗೆ ಉತ್ಸಾಹದಿಂದ ಸಾಗಿ ಮತ್ತೆ ವಾಪಸ್ಸಾಗುವುದು.
ಸುಸ್ಥಿರತೆಗೆ ಬದ್ದವಾಗಿರುವುದು ಈ ಕಾರ್ಯಕ್ರಮದ ವಿಶಿಷ್ಟತೆ. ಹಸಿರು ಓಟಕ್ಕಾಗಿ ಆಯೋಜಕರು ಸ್ಪರ್ಧೆಯ ವೇಳೆ ಪುನರ್ಬಳಕೆಯ ವಸ್ತುಗಳನ್ನು ಬಳಸುವ ಮೂಲಕ ತ್ಯಾಜ್ಯ ಬೀಸಾಡುವುದನ್ನು ತಪ್ಪಿಸುವುದು ಹಾಗೂ ಕಾರ್ಬನ್ ಉತ್ಪತ್ತಿಯನ್ನು ಕಡಿಮೆ ಮಾಡಲು ಸಮುದಾಯ ಸಾರಿಗೆ ಮತ್ತು ಕಾರ್ಪೂಲಿಂಗ್ ಅನ್ನು ಅನುಸರಿಸಲು ಸಲಹೆ ನೀಡಿದ್ದಾರೆ. ಸಲಹೆಗಳನ್ನು ಪಾಲಿಸಿದವರಿಗೆ ನೋಂದಾವಣೆ ಶುಲ್ಕದಲ್ಲಿ ವಿಶೇಷ ರಿಯಾಯಿತಿಯನ್ನು ನೀಡುತ್ತಿದ್ದಾರೆ.
ಭಾರತದ ಅತಿದೊಡ್ಡ ರನ್ನಿಂಗ್ ಅಕಾಡೆಮಿ ಆಗಿರುವ ಜಯನಗರ ಜಾಗ್ವರ್ಸ್(JJRunning), ದಿವ್ಯಶ್ರೀ ನಂದಿ ಹಿಲ್ಸ್ ಮ್ಯಾರಥಾನ್ ಅನ್ನು ರೂಪಿಸಿ ಆಯೋಜಿಸುತ್ತಿದೆ. ಇದೊಂದು ವಾರ್ಷಿಕ ಕಾರ್ಯಕ್ರಮ. ಆಗಸ್ಟ್ ತಿಂಗಳ ಎರಡನೇ ಭಾನುವಾರ ಆಯೋಜನೆಯಾಗುತ್ತಿದೆ. ಭವಿಷ್ಯದಲ್ಲಿ ಇದು ಭಾರತದ ಹೆಸರಾಂತ ಪ್ರೀಮಿಯರ್ ರನ್ ಕಾರ್ಯಕ್ರಮವಾಗಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಬೆಳವಣಿಗೆ ಕಾಣುತ್ತಿದೆ.
ಈ ಕಾರ್ಯಕ್ರಮಕ್ಕೆ ಬೆಂಗಳೂರು ಮೂಲದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿ ದಿವ್ಯಶ್ರೀ ಡೆವಲಪರ್ಸ್ ಅವರ ಪ್ರಾಯೋಜನೆ ಇದೆ. ಜೊತೆಗೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಇವರ ಬೆಂಬಲವೂ ಈ ಕಾರ್ಯಕ್ರಮಕ್ಕೆ ಬಲ ನೀಡಿದೆ. ಬೆಂಗಳೂರನ್ನು ಜಾಗತಿಕ ಫಿಟ್ನೆಸ್ ಮತ್ತು ಹೊರಾಂಗಣ ಗಮ್ಯಸ್ಥಳವನ್ನಾಗಿ ರೂಪಿಸಲು ಈ ಸಂಸ್ಥೆಗಳು ಬದ್ದವಾಗಿವೆ.