ಬೆಂಗಳೂರು: ಆರ್ಸಿಬಿ ತಂಡ ಸತತ 17ನೇ ಸಲವೂ ಕಪ್ ಗೆಲ್ಲಲು ವಿಫಲವಾಗಿದ್ದು ಮಾತ್ರವಲ್ಲದೆ, ಈ ಸಲದ ಐಪಿಎಲ್ ಟೂರ್ನಿ ಒಟ್ಟಾರೆಯಾಗಿ ಕನ್ನಡಿಗರ ಪಾಲಿಗೆ ನಿರಾಶಾದಾಯಕವೆನಿಸಿತು. ಆದರೆ ಐಪಿಎಲ್ನಲ್ಲಿ ಆಡಿದ ಒಟ್ಟು 12 ಕನ್ನಡಿಗರ ಪೈಕಿ ಚಾಂಪಿಯನ್ ಕೆಕೆಆರ್ ತಂಡದಲ್ಲಿದ್ದ ಏಕಮಾತ್ರ ಕನ್ನಡಿಗ ಮನೀಷ್ ಪಾಂಡೆಗೆ ಕಪ್ ಹಿಡಿಯುವ ಅದೃಷ್ಟ ಒಲಿಯಿತು.
ವಿಜೇತ ಕೆಕೆಆರ್ ತಂಡದಲ್ಲಿ ಮನೀಷ್ ಪಾಂಡೆ ಆಡಿದ್ದು ಒಂದೇ ಪಂದ್ಯವಾದರೂ, ಮುಂಬೈ ಎದುರು ಕೆಕೆಆರ್ 57 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದು 42 ರನ್ ಗಳಿಸುವ ಮೂಲಕ ಕೆಕೆಆರ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಮುನ್ನ 2014ರಲ್ಲಿ ಕೆಕೆಆರ್ ಕೊನೆಯದಾಗಿ ಐಪಿಎಲ್ ಗೆದ್ದಾಗಲೂ ಮನೀಷ್ ಅದೇ ತಂಡದಲ್ಲಿದ್ದರು ಮತ್ತು 401 ರನ್ ಗಳಿಸಿ ಮಿಂಚಿದ್ದರು.
ಲಖನೌ ನಾಯಕರಾಗಿ ಕೆಎಲ್ ರಾಹುಲ್ 520 ರನ್ ಗಳಿಸಿದರೂ, ಅವರ ಸ್ಟ್ರೈಕ್ರೇಟ್ ಮತ್ತು ನಾಯಕತ್ವ ಟೀಕೆಗಳಿಗೆ ಗುರಿಯಾಯಿತು. ಅದೇ ತಂಡದಲ್ಲಿ ಮತ್ತೋರ್ವ ಕನ್ನಡಿಗ ದೇವದತ್ ಪಡಿಕ್ಕಲ್ 7 ಪಂದ್ಯ ಆಡಿ ಗಳಿಸಿದ್ದು ಕೇವಲ 38 ರನ್. 13 ರನ್ ಗಳಿಸಿದ್ದೇ ಗರಿಷ್ಠವೆನಿಸಿತು. ಕೆ. ಗೌತಮ್ ಒಂದೇ ಪಂದ್ಯ ಆಡಿ 2 ಓವರ್ಗಳಲ್ಲಿ 29 ರನ್ ಚಚ್ಚಿಸಿಕೊಂಡರು. ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ರನ್ನರ್ಅಪ್ ಸನ್ರೈಸರ್ಸ್ ಪರ 4 ಪಂದ್ಯ ಆಡಿ ಗಳಿಸಿದ್ದು 64 ರನ್ ಮಾತ್ರ. ವೈಫಲ್ಯ ಮತ್ತು ಗಾಯದಿಂದಾಗಿ 11ರ ಬಳಗದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲಿಲ್ಲ.
ಆರ್ಸಿಬಿ ತಂಡದಲ್ಲಿ ವೇಗಿ ವೈಶಾಕ್ ವಿಜಯ್ಕುಮಾರ್ 4 ಪಂದ್ಯಗಳಲ್ಲಿ 4 ವಿಕೆಟ್ ಪಡೆದರೂ, ದುಬಾರಿ ರನ್ ನೀಡಿದ್ದರಿಂದ ಹೆಚ್ಚಿನ ಅವಕಾಶ ಪಡೆಯಲಿಲ್ಲ. ಮನೋಜ್ ಭಾಂಡಗೆ ಬೆಂಚ್ನಲ್ಲೇ ಉಳಿದರು. ಪಂಜಾಬ್ ತಂಡದಲ್ಲಿ ವಿದ್ವತ್ ಕಾವೇರಪ್ಪ ಐಪಿಎಲ್ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲೇ 2 ಪ್ರಮುಖ ವಿಕೆಟ್ ಕಬಳಿಸಿದರೂ, ನಂತರ ಅವಕಾಶ ಪಡೆಯದಿದ್ದುದು ವಿಪರ್ಯಾಸ. ಗುಜರಾತ್ ತಂಡದಲ್ಲಿ ಅಭಿನವ್ ಮನೋಹರ್ 2 ಪಂದ್ಯಗಳಲ್ಲಿ 9 ರನ್ ಮಾತ್ರ ಗಳಿಸಿದರೆ, ಮುಂಬೈ ಪರ ಶ್ರೇಯಸ್ ಗೋಪಾಲ್ 3 ಪಂದ್ಯಗಳಲ್ಲಿ 3 ವಿಕೆಟ್ ಮಾತ್ರ ಪಡೆದರು. ಡೆಲ್ಲಿ ತಂಡದಲ್ಲಿದ್ದ ಪ್ರವಿಣ್ ದುಬೆ ಈ ಬಾರಿ ಕಣಕ್ಕಿಳಿಯಲೇ ಇಲ್ಲ. ವೇಗಿ ಪ್ರಸಿದ್ಧ ಕೃಷ್ಣ (ರಾಜಸ್ಥಾನ) ಟೂರ್ನಿಗೆ ಮುನ್ನವೇ ಗಾಯಗೊಂಡು ಹೊರಬಿದ್ದಿದ್ದರು.