ಕ್ರೀಡೆ

ದಿನೇಶ್​ ಕಾರ್ತಿಕ್​ರಿಂದ ಧೋನಿಗೆ ಭಾರಿ ಅವಮಾನ! ಇಷ್ಟೊಂದು ಅಸೂಹೆ ಒಳ್ಳೆಯದಲ್ಲ ಅಂದ್ರು ಫ್ಯಾನ್ಸ್​

ನವದೆಹಲಿ: ಇತ್ತೀಚೆಗಷ್ಟೇ ಐಪಿಎಲ್‌ಗೆ ವಿದಾಯ ಹೇಳಿದ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರು ಸದ್ಯ ಕಾಮೆಂಟೇಟರ್ ಆಗಿ ಹೆಚ್ಚು ಬಿಜಿಯಾಗಿದ್ದಾರೆ. ಭಾರತದ 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಡಿಕೆ ಅವರು ಕ್ರಿಕೆಟ್​ನ ಮೂರು ಸ್ವರೂಪಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಟೀಮ್ ಇಂಡಿಯಾದ ಆಟಗಾರರನ್ನು ಒಳಗೊಂಡಂತೆ ತಮ್ಮ ಆಲ್-ಟೈಮ್ ಇಲೆವೆನ್​ ತಂಡವನ್ನು ಘೋಷಿಸಿದ್ದಾರೆ. ಪ್ರಸ್ತುತ ಕ್ರಿಕೆಟ್ ಆಡುತ್ತಿರುವವರಲ್ಲಿ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ ಸ್ಥಾನ ನೀಡಿದ್ದಾರೆ.

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ ಮೂರು ದ್ವಿಶತಕಗಳನ್ನು ಗಳಿಸಿರುವ ರೋಹಿತ್ ಶರ್ಮ ಹಾಗೂ ಎದುರಾಳಿಗಳಿಗೆ ಅನೇಕ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡಿರುವ ವಿಧ್ವಂಸಕ ವೀರ ಎಂದು ಕರೆಯಲ್ಪಡುವ ವೀರೇಂದ್ರ ಸೆಹ್ವಾಗ್ ಅವರನ್ನು ಆರಂಭಿಕ ಆಟಗಾರರನ್ನಾಗಿ ಆಯ್ಕೆ ಮಾಡಿದ್ದಾರೆ. ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಒನ್ ಡೌನ್‌ನಲ್ಲಿ ಹಾಗೂ ವೃತ್ತಿ ಜೀವನದಲ್ಲಿ ನೂರು ಶತಕ ಸಿಡಿಸಿದ ಸಚಿನ್ ಅವರನ್ನು ನಾಲ್ಕನೇ ಸ್ಥಾನಕ್ಕೆ ಡಿಕೆ ಆಯ್ಕೆ ಮಾಡಿದ್ದಾರೆ.

ಐದನೇ ಸ್ಥಾನದಲ್ಲಿ ರನ್ ಮೆಶಿನ್ ಮತ್ತು ದಾಖಲೆಗಳ ಸರದಾರ ವಿರಾಟ್ ಕೊಹ್ಲಿಗೆ ಅವಕಾಶ ನೀಡಲಾಗಿದೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಯುವರಾಜ್ ಸಿಂಗ್ ಮತ್ತು ರವೀಂದ್ರ ಜಡೇಜಾ ಸ್ಥಾನ ಪಡೆದಿದ್ದಾರೆ. ರವಿಚಂದ್ರನ್ ಅಶ್ವಿನ್ ಮತ್ತು ಅನಿಲ್ ಕುಂಬ್ಳೆ ಅವರನ್ನು ಸ್ಪೆಷಲಿಸ್ಟ್ ಸ್ಪಿನ್ನರ್‌ಗಳಾಗಿ ಆಯ್ಕೆ ಮಾಡಿದ್ದಾರೆ. ಜಹೀರ್ ಖಾನ್ ಜೊತೆಗೆ ಜಸ್ಪ್ರೀತ್ ಬುಮ್ರಾ ಅವರನ್ನು ವೇಗಿಗಳಾಗಿ ತೆಗೆದುಕೊಂಡಿದ್ದಾರೆ. ಸ್ಪಿನ್ ದಿಗ್ಗಜ ಹರ್ಭಜನ್ ಸಿಂಗ್ ಅವರನ್ನು 12ನೇ ಆಟಗಾರನಾಗಿ ತೆಗೆದುಕೊಳ್ಳಲಾಗಿದೆ.

ಆದರೆ, ಅಚ್ಚರಿಯ ಸಂಗತಿ ಏನೆಂದರೆ, ಭಾರತದ ದಿಗ್ಗಜ ಆಟಗಾರ ಎಂಎಸ್ ಧೋನಿಗೆ ತಂಡದಲ್ಲಿ ಸ್ಥಾನ ನೀಡಿಲ್ಲ. ಧೋನಿ ಅವರು 14 ವರ್ಷಗಳ ಕಾಲ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ ಮತ್ತು ತಮ್ಮ ನಾಯಕತ್ವದಲ್ಲಿ ಎರಡು ವಿಶ್ವಕಪ್ ಸಹ ಗೆಲ್ಲಿಸಿಕೊಟ್ಟಿದ್ದಾರೆ. ಎಲ್ಲ ಮೂರು ಸ್ವರೂಪಗಳಲ್ಲಿ 15 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಆದರೂ ಧೋನಿಗೆ ಡಿಕೆ ಸ್ಥಾನವನ್ನು ನೀಡಿಲ್ಲ.

ದಿನೇಶ್ ಕಾರ್ತಿಕ್ ಧೋನಿಗೆ ಸ್ಥಾನ ನೀಡಲಿಲ್ಲ ಎಂದು ಹಲವರು ದೂರುತ್ತಿದ್ದಾರೆ. ಧೋನಿಗಿಂತಲೂ ಮೊದಲು ಡಿಕೆ ಟೀಮ್​ ಇಂಡಿಯಾ ಪರ ಆಡಿದ್ದು ಗೊತ್ತೇ ಇದೆ. ಧೋನಿ ಆಗಮನದಿಂದ ಡಿಕೆಗೆ ಅವಕಾಶಗಳು ಸಿಗಲಿಲ್ಲ. ಧೋನಿ ಅನುಪಸ್ಥಿತಿಯಲ್ಲಿ ಮಾತ್ರ ದಿನೇಶ್‌ಗೆ ಅವಕಾಶಗಳು ಲಭಿಸಿದವು. ಇದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಧೋನಿ ಮೇಲಿನ ಅಸೂಯೆಯಿಂದ ತಮ್ಮ ತಂಡದಲ್ಲಿ ಡಿಕೆ ಸ್ಥಾನ ನೀಡಲಿಲ್ಲ ಎಂದು ಫ್ಯಾನ್ಸ್​ ದೂರುತ್ತಿದ್ದಾರೆ.

ಡಿಕೆ ಆಲ್-ಟೈಮ್ ಇಲೆವೆನ್​ ತಂಡ ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮ, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅನಿಲ್ ಕುಂಬ್ಳೆ, ಜಸ್ಪ್ರೀತ್ ಬುಮ್ರಾ, ಜಹೀರ್ ಖಾನ್. 12ನೇ ಆಟಗಾರನಾಗಿ ಹರ್ಭಜನ್ ಸಿಂಗ್​. (ಏಜೆನ್ಸೀಸ್​)