ಕ್ರೀಡೆ

ಇಂಥಾ ದಿನಗಳನ್ನು ನೋಡಲು ನಾವು ಪದಕಗಳನ್ನು ಗೆದ್ದಿದ್ದೇವೆಯೇ? ಕಣ್ಣೀರಿಟ್ಟ ವಿನೇಶ್​ ಫೋಗಟ್​

ನವದೆಹಲಿ: ದೆಹಲಿ ಪೊಲೀಸರು ನಮ್ಮ ಮೇಲೆ ಹಲ್ಲೆ ಮಾಡಿ ಅಸಭ್ಯವಾಗಿ ವರ್ತಿಸಿದರು ಎಂದು ಪ್ರತಿಭಟನಾ ನಿರತ ಕುಸ್ತಿಪಟುಗಳು ಆರೋಪ ಮಾಡಿದ್ದಾರೆ. ಪ್ರತಿಭಟನಾ ವೇಳೆ ಪ್ರಮುಖ ಕುಸ್ತಿಪಟುಗಳಲ್ಲಿ ಒಬ್ಬರಾದ ಹಾಗೂ ಏಷ್ಯನ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ವಿನೇಶ್​ ಫೋಗಟ್​ ಅವರು ಇಂಥಾ ದಿನಗಳನ್ನು ನೋಡಲು ನಾವು ಪದಕಗಳನ್ನು ಗೆದ್ದಿದ್ದೇವೆಯೇ? ಎನ್ನುವ ಮೂಲಕ ಕ್ಯಾಮೆರಾ ಮುಂದೆಯೇ ಕಣ್ಣೀರಿಟ್ಟರು.

ಮೂಕ ಪ್ರೇಕ್ಷಕರಾಗಿದ್ದರು

ಕುಡಿದ ಮತ್ತಿನಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಇಬ್ಬರು ಕುಸ್ತಿಪಟುಗಳ ಮೇಲೆ ಹಲ್ಲೆ ನಡೆಸಿದರು. ಆದರೆ, ಅಧಿಕಾರಿ ಸಹೋದ್ಯೋಗಿಗಳು ಮೂಕ ಪ್ರೇಕ್ಷಕರಾಗಿದ್ದರು. ಅಮಲಿನಲ್ಲಿದ್ದ ಅಧಿಕಾರಿ ಎಲ್ಲರನ್ನು ಮನಬಂದಂತೆ ನೂಕುತ್ತಿದ್ದರು ಎಂದು ಫೋಗಟ್​ ಆರೋಪ ಮಾಡಿದ್ದಾರೆ.

ನಾವೇನು ಅಪರಾಧಿಗಳಲ್ಲ

ಪೊಲೀಸರು ನಮ್ಮೊಂದಿಗೆ ಈ ರೀತಿ ವರ್ತಿಸಲು ನಾವೇನು ಅಪರಾಧಿಗಳಲ್ಲ ಎಂದು ಅಸಮಾಧಾನ ಹೊರಹಾಕಿದ ಫೋಗಟ್​, ಮಹಿಳಾ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಗೈರುಹಾಜರಾಗಿದ್ದನ್ನು ಪ್ರಶ್ನೆ ಮಾಡಿದರು. ನನ್ನನ್ನು ಪೊಲೀಸರು ನಿಂದಿಸಿದ್ದಾರೆ ಮತ್ತು ತಳ್ಳಾಡಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪ ಮಾಡಿದರು. ನೀವು ನಮ್ಮನ್ನು ಕೊಲ್ಲಲು ಬಯಸಿದರೆ, ನಮ್ಮನ್ನು ಕೊಂದು ಬಿಡಿ ಎಂದು ವಿನೇಶ್​ ಫೋಗಟ್ ಅಳುತ್ತಾ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.

ಏನಿದು ಆರೋಪ?

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಶೋಷಣೆ ನೀಡಿದ ಪ್ರಕರಣದಲ್ಲಿ ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್​ಐ) ಅಧ್ಯಕ್ಷ ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ವಿರುದ್ಧ ಕಳೆದ ಏಪ್ರಿಲ್ 23 ರಿಂದಲೂ ಜಂತರ್ ಮಂತರ್‌ ಮೈದಾನದಲ್ಲಿ ಕುಸ್ತಿಪಟುಗಳು ಧರಣಿ ನಡೆಸುತ್ತಿದ್ದಾರೆ. ಏಳು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಮತ್ತು ಬೆದರಿಕೆ ಹಾಕಿದ್ದಕ್ಕಾಗಿ ಉತ್ತರ ಪ್ರದೇಶದ ಬಿಜೆಪಿ ಸಂಸದ ಸಿಂಗ್ ವಿರುದ್ಧ ಕ್ರಿಮಿನಲ್ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ.

ಆರೋಪಗಳು ನಿರಾಧಾರ ಎಂದು ಹೇಳಿರುವ ಅವರು ಸಿಂಗ್​, ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿ ಕೇಳಿದರೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ದೆಹಲಿ ಪೊಲೀಸರು ಶುಕ್ರವಾರ ಸಿಂಗ್​ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. (ಏಜೆನ್ಸೀಸ್​)