ಕ್ರೀಡೆ

ವಿವಾದದ ಸುಳಿಯಲ್ಲಿ ಧೋನಿ ಐಷಾರಾಮಿ ಮನೆ; ತನಿಖೆಗೆ ಅದೇಶಿಸಿದ ಹೌಸಿಂಗ್​​ ಬೋರ್ಡ್​! | MS Dhoni

ರಾಂಚಿ: ಎಂ.ಎಸ್. ಧೋನಿ(MS Dhoni) ಅವರ ಸಾಧನೆ ಪರಿಗಣಿಸಿ ಜಾರ್ಖಂಡ್​ ಸರ್ಕಾರ ನೀಡಿದ್ದ 10 ಸಾವಿರ ಚದುರ ಅಡಿ ಜಾಗದ ಮನೆ ಇದೀಗ ವಿವಾದ ಸುಳಿಯಲ್ಲಿ ಸಿಲುಕಿಕೊಂಡಿದೆ.

ಹೌದು, ಸರ್ಕಾರ ನೀಡಿದ್ದ ಜಾಗದಲ್ಲಿ ಧೋನಿ ಐಷಾರಾಮಿ ಮನೆ ಕಟ್ಟಿಸಿದ್ದಾರೆ. ಆದರೆ, ಇದೀಗ ಮನೆಯನ್ನು ಸ್ವಂತಕ್ಕೆ ಬಳಸಿಕೊಳ್ಳದೆ ವಾಣಿಜ್ಯ ಉದ್ದೇಶಕ್ಕೆ ಬಳಸಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

ಹೀಗಾಗಿ ಜಾರ್ಖಂಡ್​ ರಾಜ್ಯ ಸರ್ಕಾರ ಹೌಸಿಂಗ್​ ಬೋರ್ಡ್​ ತನಿಖೆಗೆ ಆದೇಶಿಸಿದೆ. ಅಲ್ಲದೆ, ಸ್ಪಷ್ಟನೆ ಕೊಡುವಂತೆ ಧೋನಿಗೂ ನೋಟಿಸ್​ ಜಾರಿ ಮಾಡಿದೆ ಎಂದು ವರದಿಯಾಗಿದೆ.

ರಾಂಚಿಯ ಹರ್ಮು ರಸ್ತೆಯಲ್ಲಿರುವ ಧೋನಿ ಮನೆಯಲ್ಲಿ ಡಯಾಗ್ನೋಸ್ಟಿಕ್​ ಸೆಂಟರ್ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ.

ಇನ್ನು ಹೌಸಿಂಗ್​ ಬೋರ್ಡ್​ ಪ್ರಕಾರ, ಯಾವ ಉದ್ದೇಶಕ್ಕೆ ಜಾಗ ನೀಡಲಾಗಿದೆಯೋ ಅದೇ ಉದ್ದೇಶಕ್ಕೆ ಬಳಸಬೇಕು. ಇಲ್ಲವಾದಗ ಕಾನೂನು ಉಲ್ಲಂಘನೆಯಾಗುತ್ತದೆ. ಧೋನಿ ಅವರು ಮನೆಯನ್ನು ವ್ಯಾಣಿಜ್ಯ ಉದ್ದೇಶಕ್ಕೆ ಬಳಸಿದ ಬಗ್ಗೆ ತನಿಖೆಯಿಂದ ಧೃಢಪಟ್ಟರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದೆ ಎಂದು ಮೂಲಗಳು ತಿಳಿಸಿವೆ.

ಅರ್ಜುನ್​ ಮುಂಡಾ ಸಿಎಂ ಇದ್ದಾಗ ಧೋನಿ ಅವರ ಕ್ರಿಕೆಟ್​ ಸಾಧನೆ ಪರಿಗಣಿಸಿ ಈ 10 ಸಾವಿರ ಚದುರ ಅಡಿ ಅಂದಿನ ಸರ್ಕಾರ ನೀಡಿತ್ತು. ಆದರೆ, ಇದೀಗ ಸರ್ಕಾರದ ಜಾಗವನ್ನು ವಾಣಿಜ್ಯ ಉದ್ದೇಶಗಳಿಗೆ ಧೋನಿ ಬಳಸುತ್ತಿದ್ದಾರೆ ಎಂದು ಆರೋಪ ಕೇಳಿಬಂದಿದೆ.