ರಾಂಚಿ: ಕೋವಿಡ್-19 ಸಾಂಕ್ರಾಮಿಕ ಪಿಡುಗಿನಿಂದಾಗಿ ದೇಶ ಸಂಕಷ್ಟದಲ್ಲಿರುವ ಸಮಯದಲ್ಲಿ ವಾಣಿಜ್ಯ ಚಟುವಟಿಕೆಗಳಿಂದ ಸಂಪೂರ್ಣವಾಗಿ ದೂರ ಉಳಿದಿರುವ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಸಾವಯವ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಂಗಳವಾರ 39ನೇ ಜನ್ಮದಿನ ಆಚರಿಸಿಕೊಂಡ ಧೋನಿ, ಕಳೆದ ಒಂದು ವರ್ಷದಿಂದ ಯಾವುದೇ ಕ್ರಿಕೆಟ್ ಪಂದ್ಯವನ್ನೂ ಆಡಿಲ್ಲ.
ಧೋನಿ ಈಗ ಯಾವುದೇ ಬ್ರಾಂಡ್‌ಗಳ ಪ್ರಚಾರ ಅಥವಾ ಜಾಹೀರಾತುಗಳಿಗೆ ನೋ ಎನ್ನುತ್ತಿದ್ದಾರೆ ಎಂದು ಅವರ ಮ್ಯಾನೇಜರ್ ಹಾಗೂ ಬಾಲ್ಯದ ಗೆಳೆಯ ಮಿಹಿರ್ ದಿವಾಕರ್ ತಿಳಿಸಿದ್ದಾರೆ. ‘ದೇಶಭಕ್ತಿ ಧೋನಿ ಅವರ ರಕ್ತದಲ್ಲಿದೆ. ದೇಶ (ಸೇನೆ) ಮತ್ತು ಭೂಮಿ (ಕೃಷಿ) ಸೇವೆಯಲ್ಲಿ ಅವರು ತೀವ್ರ ಉತ್ಸಾಹ ಹೊಂದಿರುತ್ತಾರೆ. ಅವರು 40-50 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಅಲ್ಲಿ ಅವರು ಪಪಾಯ, ಬಾಳೆಹಣ್ಣು ಮುಂತಾದ ಸಾವಯವ ಬೆಳೆ ಬೆಳೆಸುವುದಲ್ಲಿ ವ್ಯಸ್ತರಾಗಿದ್ದಾರೆ. ಎಲ್ಲವೂ ಸಹಜಸ್ಥಿತಿಗೆ ಬರುವವರೆಗೆ ಧೋನಿ ಬ್ರಾಂಡ್‌ಗಳ ಪ್ರಚಾರದಿಂದ ಸಂಪೂರ್ಣವಾಗಿ ದೂರ ಉಳಿಯಲಿದ್ದಾರೆ. ಯಾವುದೇ ವಾಣಿಜ್ಯ ಚಟುವಟಿಕೆಯಲ್ಲಿ ಅವರು ಭಾಗವಹಿಸುವುದಿಲ್ಲ’ ಎಂದು ದಿವಾಕರ್ ತಿಳಿಸಿದ್ದಾರೆ.
ನಿವೃತ್ತಿ ಯೋಚನೆ ಇಲ್ಲ
ಧೋನಿ ಜತೆಗೆ ಕ್ರಿಕೆಟ್ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಅವರನ್ನು ನೋಡಿದಾಗ ಅವರು ನಿವೃತ್ತಿಯ ಬಗ್ಗೆ ಆಲೋಚಿಸುತ್ತಿರುವಂತೆ ಕಾಣುತ್ತಿಲ್ಲ. ಅವರು ಐಪಿಎಲ್‌ನಲ್ಲಿ ಆಡಲು ಉತ್ಸುಕರಾಗಿದ್ದಾರೆ. ಲಾಕ್‌ಡೌನ್‌ಗೆ ಮುನ್ನ ಚೆನ್ನೈನಲ್ಲಿ ಒಂದು ತಿಂಗಳು ಇದ್ಧಾಗ ಅವರು ಮರಳಿ ಕಣಕ್ಕಿಳಿಯಲು ಸಾಕಷ್ಟು ಕಠಿಣ ಪರಿಶ್ರಮ ವಹಿಸಿದ್ದರು. ಫಾರ್ಮ್‌ಹೌಸ್‌ನಲ್ಲೂ ಈಗ ಅವರ ಫಿಟ್ನೆಸ್ ವ್ಯಾಯಾಮಗಳು ಮುಂದುವರಿದಿವೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕ ಅಭ್ಯಾಸವನ್ನೂ ಆರಂಭಿಸಲಿದ್ದಾರೆ ಎಂದು ದಿವಾಕರ್ ತಿಳಿಸಿದ್ದಾರೆ.