ರಾಂಚಿ: ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ರಾಂಚಿ ರಿಂಗ್ ರೋಡ್ ಸಮೀಪದ ಸ್ಯಾಂಬೋ ಬೆಟ್ಟದಲ್ಲಿ ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ಹೊಸ ಮನೆಯನ್ನು ನಿರ್ಮಿಸಲು ಯೋಜನೆ ಹಾಕಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇದಕ್ಕಾಗಿ ಅವರು 1.92 ಎಕರೆ ಭೂಮಿಯನ್ನು ಖರೀದಿಸಿದ್ದಾರೆ. 45 ವರ್ಷದ ಧೋನಿ ಇತ್ತೀಚೆಗೆ ಇಲ್ಲಿಗೆ ಭೇಟಿ ನೀಡಿ ಸ್ಥಳವನ್ನು ಪರಿಶೀಲಿಸಿದ್ದಾರೆ. ಈ ಪ್ರದೇಶ ಎತ್ತರದ ಸ್ಥಳದಲ್ಲಿದ್ದು, ಇಲ್ಲಿಂದ ರಾಂಚಿ ನಗರದ ವಿಶಾಲ ನೋಟವನ್ನು ಕಾಣಬಹುದು. ಈ ನಿವೇಶನದ ಸಮೀಪದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎ್) ಶಿಬಿರವೂ ಇದೆ.
ಮೂರು ಮಹಡಿಯ ಹೊಸ ಮನೆ ನಿರ್ಮಿಸಲು ಧೋನಿ ಯೋಜಿಸಿದ್ದರು. ಆದರೆ ರಾಂಚಿ ಪ್ರಾದೇಶೀಕ ಅಭಿವೃದ್ಧಿ ಪ್ರಾಧಿಕಾರವು ನೆಲ ಅಂತಸ್ತು ಮತ್ತು ಅದರ ಮೇಲೆ ಒಂದು ಮಹಡಿಯ ರಚನೆಗೆ ಮಾತ್ರ ಅನುಮತಿ ನೀಡಿದೆ. ಸದರಿ ಭೂಮಿಯನ್ನು ಕೃಷಿ ವರ್ಗದ ಅಡಿಯಲ್ಲಿ ವರ್ಗೀಕರಿಸಿರುವುದರಿಂದ ಈ ಮಿತಿಯನ್ನು ವಿಧಿಸಲಾಗಿದೆ. ಧೋನಿ ಅವರ ಹೊಸ ಮನೆಯಲ್ಲಿ ಖಾಸಗಿ ಜಿಮ್, ಈಜುಕೊಳ, ಕ್ರಿಕೆಟ್ ಅಭ್ಯಾಸದ ನೆಟ್ ಸೇರಿದಂತೆ ಒಳಾಂಗಣ ಕ್ರೀಡಾ ವ್ಯವಸ್ಥೆಗಳು ಮತ್ತು ನಾಯಿ-ಕುದುರೆಗಳಂಥ ಸಾಕುಪ್ರಾಣಿಗಳಿಗೆ ಪ್ರತ್ಯೇಕ ಆವರಣಗಳು ಇರಲಿವೆ.
ಇದು ರಾಂಚಿಯಲ್ಲಿ ಧೋನಿ ಅವರ 3ನೇ ಮನೆ ಆಗಿರಲಿದೆ. ಹಮುರ್ ಪ್ರದೇಶದಲ್ಲಿ ಅವರ ಮೊದಲ ಮನೆ ಇದ್ದರೆ, ಪ್ರಸ್ತುತ ಅವರು ಸಿಮರಿಯಾ ಪ್ರದೇಶದಲ್ಲಿರುವ ತನ್ನ 2ನೇ ನಿವಾಸದಲ್ಲಿ ವಾಸಿಸುತ್ತಿದ್ದಾರೆ. ಧೋನಿ ಅವರ ಹಾಲಿ ಫಾರ್ಮ್ಹೌಸ್, ಭಾರಿ ಸಂಖ್ಯೆಯ ವಾಹನಗಳ ಸಂಗ್ರಹದಿಂದಲೂ ಹೆಸರುವಾಸಿಯಾಗಿದೆ. ಇಲ್ಲಿ ಧೋನಿ ಅವರ ಹಲವು ಬೈಕ್&ಕಾರುಗಳಿವೆ.