ಕ್ರೀಡೆ

ಟಿ20 ವಿಶ್ವಕಪ್ ತಂಡಕ್ಕೆ ಧೋನಿ ಮೆಂಟರ್, ಎಲ್ಲರನ್ನೂ ಒಪ್ಪಿಸಿದ್ದು ಬಿಸಿಸಿಐ ಕಾರ್ಯದರ್ಶಿ!

ಬೆಂಗಳೂರು: ಮುಂಬರುವ ಟಿ20 ವಿಶ್ವಕಪ್‌ಗೆ ಹಲವು ಅಚ್ಚರಿಗಳ ಆಯ್ಕೆ ನಡೆದಿದೆ. ಮಾಜಿ ನಾಯಕ ಎಂಎಸ್ ಧೋನಿ ಟಿ20 ವಿಶ್ವಕಪ್ ವೇಳೆ ಭಾರತ ತಂಡದ ಮೆಂಟರ್ ಆಗಿ ನೇಮಿಸಿರುವುದು ಕೂಡ ಅನಿರೀಕ್ಷಿತ ಬೆಳವಣಿಗೆಯಾಗಿದೆ. ಧೋನಿ ಅವರ ನೇಮಕದಲ್ಲಿ ಬಿಸಿಸಿಐ ಕಾರ್ಯದರ್ಶಿ ಹಾಗೂ ಗೃಹ ಸಚಿವ ಅಮಿತ್ ಷಾ ಪುತ್ರ ಜಯ್ ಷಾ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.

‘ದುಬೈನಲ್ಲಿ ಧೋನಿ ಜತೆಗೆ ಮಾತನಾಡಿದ್ದೇನೆ. ಟಿ20 ವಿಶ್ವಕಪ್‌ಗೆ ಮಾತ್ರ ತಂಡದ ಜತೆಗೆ ಮೆಂಟರ್ ಆಗಿ ತೆರಳಲು ಅವರು ಒಪ್ಪಿಕೊಂಡಿದ್ದಾರೆ. ಮಂಡಳಿಯ ಇತರ ಸದಸ್ಯರೂ ಕೂಡ ಧೋನಿ ನೇಮಕಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ನಾಯಕ ಕೊಹ್ಲಿ, ಉಪನಾಯಕ ರೋಹಿತ್ ಸಹಿತ ಎಲ್ಲರೂ ಒಪ್ಪಿದ್ದಾರೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2007ರ ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಭಾರತ ಪ್ರಶಸ್ತಿ ಗೆದ್ದುಕೊಟ್ಟಿದ್ದ ನಾಯಕ ಧೋನಿ, ಚೆನ್ನೈ ಸೂಪರ್‌ಕಿಂಗ್ಸ್ ತಂಡಕ್ಕೆ ಐಪಿಎಲ್ ಮತ್ತು ಚಾಂಪಿಯನ್ಸ್ ಲೀಗ್ ಪ್ರಶಸ್ತಿಗಳನ್ನು ಗೆದ್ದುಕೊಟ್ಟ ಅನುಭವ ಹೊಂದಿದ್ದಾರೆ. ಹಿಂದಿನ ಆರೂ ಟಿ20 ವಿಶ್ವಕಪ್‌ಗಳಲ್ಲಿ ಅವರೇ ಭಾರತ ತಂಡದ ನಾಯಕರಾಗಿದ್ದರು. 2020ರ ಆಗಸ್ಟ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದ 40 ವರ್ಷದ ಧೋನಿ ಈ ಜವಾಬ್ದಾರಿಯೊಂದಿಗೆ ಟೀಮ್ ಇಂಡಿಯಾ ಪರ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ. ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕರೆನಿಸಿರುವ ಧೋನಿ 2011ರಲ್ಲಿ ಏಕದಿನ ವಿಶ್ವಕಪ್ ಕೂಡ ಗೆದ್ದುಕೊಟ್ಟಿದ್ದರು.

ಟಿ20 ವಿಶ್ವಕಪ್ ಟೂರ್ನಿ ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ಯುಎಇ ಮತ್ತು ಓಮನ್‌ನಲ್ಲಿ ನಡೆಯಲಿದ್ದು, ವಿರಾಟ್ ಕೊಹ್ಲಿ ನಾಯಕರಾಗಿದ್ದು, ರೋಹಿತ್ ಶರ್ಮ ಉಪನಾಯಕರಾಗಿ ಅವರಿಗೆ ಸಾಥ್ ನೀಡಲಿದ್ದಾರೆ. ಮುಖ್ಯ ಕೋಚ್ ರವಿಶಾಸ್ತ್ರಿ ನೇತೃತ್ವದ ತರಬೇತಿ ಬಳಗಕ್ಕೆ ಧೋನಿ ಮಾರ್ಗದರ್ಶಕರಾಗಿ ನೆರವಾಗಲಿದ್ದಾರೆ.