ಕ್ರೀಡೆ

14ನೇ ಐಪಿಎಲ್ ಸಿದ್ಧತೆಗಾಗಿ ಚೆನ್ನೈಗೆ ಆಗಮಿಸಿದ ಎಂಎಸ್ ಧೋನಿ

ಚೆನ್ನೈ: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡ (ಸಿಎಸ್‌ಕೆ), 14ನೇ ಆವೃತ್ತಿಯ ಐಪಿಎಲ್‌ಗೆ ಮಾರ್ಚ್ 9 ರಿಂದ ಅಭ್ಯಾಸ ಆರಂಭಿಸಲಿದೆ ಎನ್ನಲಾಗಿದೆ. ಎಂಎಸ್ ಧೋನಿ, ಬುಧವಾರ ರಾತ್ರಿ ಚೆನ್ನೈಗೆ ಆಗಮಿಸಿದ್ದು, 5 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ. ತಲೈವಾ ಆಗಮನ ಎಂದು ಧೋನಿ ಏರ್‌ಪೋರ್ಟ್‌ನಲ್ಲಿ ಬಂದಿಳಿದಿರುವ ಫೋಟೋವನ್ನು ಸಿಎಸ್‌ಕೆ ಟ್ವೀಟ್ ಮಾಡಿದೆ. ಭಾರತ ತಂಡದ ಮಾಜಿ ಆಟಗಾರ ಅಂಬಟಿ ರಾಯುಡು ಕೂಡ ಬುಧವಾರವೇ ಚೆನ್ನೈಗೆ ಆಗಮಿಸಿದ್ದು, ಸ್ಥಳೀಯ ಆಟಗಾರರು ಬಳಿಕ ತಂಡ ಕೂಡಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಮಾರ್ಚ್ 9ರಿಂದ ತರಬೇತಿ ಶಿಬಿರ ಆರಂಭಗೊಳ್ಳಬಹುದು. ಈ ವೇಳೆ ಇತರ ಆಟಗಾರರು ಶಿಬಿರದಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ ಎಂದು ಸಿಎಸ್‌ಕೆ ಸಿಇಒ ಕೆ.ಎಸ್.ವಿಶ್ವನಾಥನ್ ತಿಳಿಸಿದ್ದಾರೆ. ಚೆನ್ನೈಗೆ ಆಗಮಿಸುವ ಎಲ್ಲ ಆಟಗಾರರು 5 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಗಾಗಲಿದ್ದು, ಮೂರು ಬಾರಿ ಕೋವಿಡ್-19 ವರದಿ ನೆಗೆಟಿವ್ ಬಂದ ನಂತರ ತರಬೇತಿ ಆರಂಭಿಸಲಿದ್ದಾರೆ ಎಂದರು. 14ನೇ ಐಪಿಎಲ್ ಆವೃತ್ತಿಯೂ ಯಾವ ನಗರಗಳಲ್ಲಿ ನಡೆಯಲಿದೆ ಎಂಬುದು ಇನ್ನು ಖಾತ್ರಿಯಾಗಿಲ್ಲ.

ಕನ್ನಡಿಗ ಕೆ.ಗೌತಮ್ ಅವರನ್ನು ಸಿಎಸ್‌ಕೆ ಫ್ರಾಂಚೈಸಿ 9.25 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಅಲ್ಲದೆ, ಇಂಗ್ಲೆಂಡ್ ಆಲ್ರೌಂಡರ್ ಮೊಯಿನ್ ಅಲಿ (7 ಕೋಟಿ ರೂ.), ಚೇತೇಶ್ವರ್ ಪೂಜಾರ (50 ಲಕ್ಷ ರೂ.) ಕೂಡ ಹೊಸದಾಗಿ ಸಿಎಸ್‌ಕೆ ಸೇರಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಸಿಎಸ್‌ಕೆ ತಂಡ ಕಳೆದ ಆವೃತ್ತಿಯಲ್ಲಿ ಪ್ಲೇ-ಆಫ್ ಹಂತಕ್ಕೇರಲು ವಿಫಲವಾಗಿತ್ತು.