ಕ್ರೀಡೆ

ಕಿವೀಸ್ ದಾಳಿಗೆ ಆಫ್ಘನ್ ತತ್ತರ: ನ್ಯೂಜಿಲೆಂಡ್‌ಗೆ ಸತತ 4ನೇ ಜಯ

ಚೆನ್ನೈ: ಸರ್ವಾಂಗೀಣ ನಿರ್ವಹಣೆಯೊಂದಿಗೆ ಅಜೇಯ ಓಟ ಮುಂದುವರಿಸಿರುವ ಹಾಲಿ ರನ್ನರ್‌ಅಪ್ ನ್ಯೂಜಿಲೆಂಡ್, ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಸತತ 4ನೇ ಗೆಲುವು ದಾಖಲಿಸಿದೆ. ಬ್ಯಾಟರ್ ಗ್ಲೆನ್ ಫಿಲಿಪ್ಸ್ (71 ರನ್, 80 ಎಸೆತ, 4 ಬೌಂಡರಿ, 4 ಸಿಕ್ಸರ್), ವಿಕೆಟ್ ಕೀಪರ್-ಬ್ಯಾಟರ್ ಹಾಗೂ ಹಂಗಾಮಿ ನಾಯಕ ಟಾಮ್ ಲಾಥಮ್ (68 ರನ್, 74 ಎಸೆತ, 3 ಬೌಂಡರಿ, 2 ಸಿಕ್ಸರ್) ಶತಕದ ಜತೆಯಾಟ ಮತ್ತು ಬೌಲರ್‌ಗಳ ಸಂಘಟಿತ ನಿರ್ವಹಣೆಯಿಂದ ಅ್ಘಾನಿಸ್ತಾನ ಎದುರು 149 ರನ್‌ಗಳ ಬೃಹತ್ ಜಯ ದಾಖಲಿಸಿದೆ. ಇದರೊಂದಿಗೆ ಟಾಮ್ ಲಾಥಮ್ ಬಳಗ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿದೆ.

ಚೆಪಾಕ್ ಅಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ನ್ಯೂಜಿಲೆಂಡ್, ಗ್ಲೆನ್ ಫಿಲಿಪ್ಸ್-ಲಾಥಮ್ 5ನೇ ವಿಕೆಟ್‌ಗೆ ಪೇರಿಸಿದ 144 ರನ್ ಜತೆಯಾಟದ ಬಲದಿಂದ 6 ವಿಕೆಟ್‌ಗೆ 288 ರನ್ ಪೇರಿಸಿತು. ಪ್ರತಿಯಾಗಿ ಬೌಲಿಂಗ್‌ನಲ್ಲಿ ತೋರಿದ ನಿರೀಕ್ಷಿತ ನಿರ್ವಹಣೆ ಬ್ಯಾಟಿಂಗ್‌ನಲ್ಲಿ ಮುಂದುವರಿಸಲು ವಿಫಲವಾದ ಅಫ್ಘಾನಿಸ್ತಾನ 34.4 ಓವರ್‌ಗಳಲ್ಲಿ 139 ರನ್‌ಗಳಿಗೆ ಸರ್ವಪತನ ಕಂಡಿತು.

ನ್ಯೂಜಿಲೆಂಡ್: 6 ವಿಕೆಟ್‌ಗೆ 288 (ಕಾನ್‌ವೇ 20, ವಿಲ್ ಯಂಗ್ 54, ರಚಿನ್ 32, ಡೆರಿಲ್ 1, ಲಾಥಮ್ 68, ಫಿಲಿಪ್ಸ್ 71, ಚಾಪ್‌ಮನ್ 25*, ಸ್ಯಾಂಟ್ನರ್ 7*, ಮುಜೀಬ್ 57ಕ್ಕೆ1, ಒಮರ್ಜಾಯಿ 56ಕ್ಕೆ2, ನವೀನ್ 48ಕ್ಕೆ2). ಅಫ್ಘಾನಿಸ್ತಾನ: 34.4 ಓವರ್‌ಗಳಲ್ಲಿ 139 (ಗುರ್ಬಜ್ 11, ಇಬ್ರಾಹಿಂ 14, ರಹಮತ್ 36, ಹಶ್ಮತ್‌ಉಲ್ಲಾ 8, ಒಮರ್ಜಾಯಿ 27, ಅಲಿಖಿಲ್ 19, ರಶೀದ್ 8, ಬೌಲ್ಟ್ 18ಕ್ಕೆ2, ಗ್ಯುರ್ಸನ್ 19ಕ್ಕೆ3, ಸ್ಯಾಂಟ್ನರ್ 39ಕ್ಕೆ3).

ಪಂದ್ಯಶ್ರೇಷ್ಠ: ಗ್ಲೆನ್ ಫಿಲಿಪ್ಸ್.