ಕ್ರೀಡೆ

ಪಂದ್ಯ ಗೆದ್ರೂ ಭಾರತದ ಬೌಲರ್‌ಗಳಿಂದ ಎಡವಟ್ಟು! ಈ ಮಿಸ್ಟೇಕ್ಸ್ ಮುಂದುವರಿದ್ರೆ ಕಪ್​ ಗೆಲ್ಲೋದು ಕಷ್ಟ

ನವದೆಹಲಿ: ನಿನ್ನೆ (ಜೂನ್​ 24) ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವಕಪ್​ ಟೂರ್ನಿಯ ಸೂಪರ್​ 8 ಪಂದ್ಯದಲ್ಲಿ ಟೀಮ್​ ಇಂಡಿಯಾ 24 ರನ್‌ಗಳ ಜಯ ಸಾಧಿಸಿತು. ಆದರೆ, ಈ ಪಂದ್ಯದಲ್ಲಿ ನಮ್ಮ ಬೌಲರ್‌ಗಳು ಕೆಲವೊಂದು ತಪ್ಪುಗಳನ್ನು ಮಾಡಿದ್ದಾರೆ. ಆ ತಪ್ಪುಗಳನ್ನು ತಿದ್ದಿಕೊಳ್ಳದಿದ್ದರೆ ಟಿ20 ವಿಶ್ವಕಪ್ ಕಷ್ಟಸಾಧ್ಯ ಎನ್ನುತ್ತಾರೆ ಕ್ರೀಡಾ ತಜ್ಞರು ಹಾಗೂ ಅಭಿಮಾನಿಗಳು. ಜಸ್ಪ್ರೀತ್​ ಬುಮ್ರಾ ಸೇರಿದಂತೆ ಟೀಮ್​ ಇಂಡಿಯಾದ ಬೌಲರ್​ಗಳು ಆಸಿಸ್​ ವಿರುದ್ಧದ ಪಂದ್ಯದಲ್ಲಿ ಏನು ತಪ್ಪು ಮಾಡಿದರು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ನಿನ್ನೆಯ ಪಂದ್ಯದಲ್ಲಿ ಟೀಮ್​ ಇಂಡಿಯಾ ರೋಹಿತ್​ ಶರ್ಮ (92 ರನ್​, 41 ಎಸೆತ, 8 ಸಿಕ್ಸರ್, 7 ಫೋರ್​) ಅವರ ಸಿಡಿಲಬ್ಬರದ ಬ್ಯಾಟಿಂಗ್​ ನೆರವಿನಿಂದ 205 ರನ್​ಗಳ ಬೃಹತ್ ಮೊತ್ತ ಪೇರಿಸಿತ್ತು. ಆದರೆ, ಭಾರತ ನೀಡಿದ 206 ರನ್​ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಒಂದು ಹಂತದಲ್ಲಿ ವಿಜಯಲಕ್ಷ್ಮೀಯನ್ನು ತನ್ನತ್ತ ಎಳೆದುಕೊಂಡಿತ್ತು. ಟೀಮ್​ ಇಂಡಿಯಾಗೆ ಸೋಲಿನ ಭೀತಿ ತಂದಿಟ್ಟಿತ್ತು. ಆದರೆ, ಕೊನೆಯಲ್ಲಿ ಚೇತರಿಸಿಕೊಂಡ ಭಾರತದ ಬೌಲರ್‌ಗಳು ಆಸಿಸ್‌ ಪಡೆಯನ್ನು 181 ರನ್‌ಗಳಿಗೆ ನಿರ್ಬಂಧಿಸಿದರು. ಆದರೆ, ಈ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಕೊಂಚ ಎಡವಿದರು. ಈ ತಪ್ಪನ್ನು ತಿದ್ದಿಕೊಳ್ಳದಿದ್ದರೆ ವಿಶ್ವಕಪ್ ಕಷ್ಟ ಎನ್ನಲಾಗುತ್ತಿದೆ.

ಆಸ್ಟ್ರೇಲಿಯಾದ ಸ್ಟಾರ್ ಓಪನರ್ ಟ್ರಾವಿಸ್ ಹೆಡ್ ಭಾರತದ ಬೌಲರ್​ಗಳನ್ನು ಕಾಡಿದರು. ನಿನ್ನೆಯ ನಿರ್ಣಾಯಕ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದರು. ಭಾರತದ ವಿರುದ್ಧದ ಪಂದ್ಯದಲ್ಲಿ ಹೆಡ್​, ತಲೆನೋವಾಗಿ ಕಾಡುತ್ತಾರೆ. ಅದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ. ನೆನಪಿರಲಿ 2023ರ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಲು ಇದೇ ಹೆಡ್​ ಮುಖ್ಯ ಕಾರಣ. ಆ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದರು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ನಲ್ಲೂ ಸೆಂಚುರಿ ಬಾರಿಸಿದ್ದರು. ಅಲ್ಲದೆ, ಕಳೆದ ತಿಂಗಳು ಮುಕ್ತಾಯಗೊಂಡ ಐಪಿಎಲ್ ಸೀಸನ್​ನಲ್ಲೂ ಧೂಳೆಬ್ಬಿಸಿದ್ದರು. ನಿನ್ನೆ ನಡೆದ ಪಂದ್ಯದಲ್ಲೂ ಹೆಡ್​ ಅವರು 43 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 76 ರನ್ ಗಳಿಸಿದರು. ಒಂದು ವೇಳೆ ಹೆಡ್​, ಔಟಾಗದೇ ಇದ್ದರೆ ಭಾರತ ಈ ಪಂದ್ಯದಲ್ಲೂ ಸೋಲುತ್ತಿತ್ತು. ಹೀಗಾಗಿ ಭಾರತದ ಬೌಲರ್‌ಗಳು ಎಲ್ಲೋ ಒಂದು ಕಡೆ ತಪ್ಪು ಮಾಡುತ್ತಿದ್ದಾರೆ.

ಅಂದಹಾಗೆ ಟ್ರಾವಿಸ್ ಹೆಡ್‌ಗೆ ಒಂದು ದೌರ್ಬಲ್ಯವಿದೆ. ಆ ವಿಷಯವನ್ನು ಈ ಐಪಿಎಲ್‌ನಲ್ಲಿ ಮಿಚೆಲ್ ಸ್ಟಾರ್ಕ್ ಬಹಿರಂಗಪಡಿಸಿದ್ದಾರೆ. ಏನದು ಅಂದರೆ, ಆಫ್​ ಸ್ಟಿಕ್ ಬಾಲ್‌ಗಳನ್ನು ತಲೆಗೆ ಎಸೆದರೆ ಹೆಡ್​ಗೆ ಆಡಲು ಸಾಧ್ಯವಿಲ್ಲ. ಈ ದೌರ್ಬಲ್ಯವನ್ನು ಹಣಿಯಲು ಟೀಮ್​ ಇಂಡಿಯಾದ ಬೌಲರ್‌ಗಳಿಗೆ ಸಾಧ್ಯವಾಗುತ್ತಿಲ್ಲ. ಒಬ್ಬ ಆಟಗಾರನ ದೌರ್ಬಲ್ಯ ಏನು ಅಂತ ಗೊತ್ತಾದ ಮೇಲೆ ಅವನನ್ನು ದೊಡ್ಡ ಸ್ಕೋರ್ ಮಾಡುವಂತೆ ಬಿಡುವುದು ತಪ್ಪು ಮಾಡಿದಂತೆ.

ಈ ಪಂದ್ಯದಲ್ಲಿ ಬುಮ್ರಾ ಸೇರಿದಂತೆ ಇತರ ಬೌಲರ್‌ಗಳು ಹೆಡ್​ ವೀಕ್​ನೆಸ್​ಗೆ ಅನುಗುಣವಾಗಿ ಬೌಲಿಂಗ್ ಮಾಡಲು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಅಭಿಮಾನಿಗಳು, ಕ್ರೀಡಾ ತಜ್ಞರು ಸಲಹೆ ನೀಡುತ್ತಿದ್ದಾರೆ. ಈ ಪಂದ್ಯವನ್ನು ಗೆದ್ದಿದ್ದರಿಂದ ಮಾಡಿದ ತಪ್ಪು ಕಣ್ಣ ಮುಂದೆ ಬರುವುದಿಲ್ಲ. ಒಂದು ವೇಳೆ ಪಂದ್ಯವನ್ನು ಸೋತಿದ್ದರೆ ಪರಿಸ್ಥಿತಿ ಬೇರೆಯಾಗ್ತಿತ್ತು. ಈ ತಪ್ಪುಗಳನ್ನು ತಿದ್ದಿಕೊಳ್ಳದಿದ್ದರೆ ಟೀಮ್​ ಇಂಡಿಯಾಗೆ ವಿಶ್ವಕಪ್ ಕಷ್ಟವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್​)