ಕ್ರೀಡೆ

ಕ್ರಿಕೆಟ್ ಮಂಡಳಿಗಳು ದಿವಾಳಿ! ಸಂಕಷ್ಟದಲ್ಲಿ ಲಂಕಾ, ಪಾಕ್, ವಿಂಡೀಸ್, ದ.ಆಫ್ರಿಕಾ; ಬಿಸಿಸಿಐ ಸೇಫ್

vinaymk1969

ನವದೆಹಲಿ: ಕರೊನಾ ಮಹಾಮಾರಿಯಿಂದಾಗಿ ಜಾಗತಿಕ ಕ್ರಿಕೆಟ್ ಚಟುವಟಿಕೆಗಳೇ ಸ್ತಬ್ಧಗೊಂಡಿವೆ. ಇತರೆಲ್ಲ ಕ್ರೀಡೆಗಳಂತೆ ಕ್ರಿಕೆಟ್ ಕೂಡ ಈಗ ಸಂಕಷ್ಟದ ಸಮಯವನ್ನು ಎದುರಿಸುತ್ತಿದೆ. ಇದರಿಂದಾಗಿ ವಿಶ್ವದ ಹಲವು ದೇಶದ ಕ್ರಿಕೆಟ್ ಮಂಡಳಿಗಳು ದಿವಾಳಿಯಾಗುವ ಭೀತಿಯಲ್ಲಿವೆ.

ಕಳೆದ ಒಂದು ತಿಂಗಳಿನಿಂದ ಯಾವುದೇ ಕ್ರಿಕೆಟ್ ಚಟುವಟಿಕೆಗಳು ನಡೆದಿಲ್ಲ. ಹಾಲಿ ಪರಿಸ್ಥಿತಿಯನ್ನು ಗಮನಿಸಿದಾಗ ವರ್ಷಾಂತ್ಯದವರೆಗೂ ಪೂರ್ಣ ಪ್ರಮಾಣದ ಕ್ರಿಕೆಟ್ ಚಟುವಟಿಕೆಗಳು ನಡೆಯುವುದು ಅನುಮಾನವೆನಿಸುತ್ತಿದೆ. ಇದರಿಂದಾಗಿ ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾದಂಥ ಹಲವು ಶ್ರೀಮಂತವಲ್ಲದ ಕ್ರಿಕೆಟ್ ಮಂಡಳಿಗಳು ತೀವ್ರವಾದ ಆರ್ಥಿಕ ಮುಗ್ಗಟ್ಟು ಎದುರಿಸುವ ಭೀತಿಯಲ್ಲಿವೆ. ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎನಿಸಿರುವ ಬಿಸಿಸಿಐ ಜತೆಗೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ಕ್ರಿಕೆಟ್ ಮಂಡಳಿಗಳಿಗೆ ಮಾತ್ರ ಈ ಆರ್ಥಿಕ ಹೊಡೆತವನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಇದೆ ಎನ್ನಲಾಗಿದೆ.

ವಿಶ್ವದ ಎಲ್ಲ ಕ್ರಿಕೆಟ್ ಮಂಡಳಿಗಳಿಗೆ ಪ್ರಮುಖವಾಗಿ, ಪ್ರಸಾರ ಹಕ್ಕಿನಿಂದ ಬರುವ ಆದಾಯಕ್ಕೆ ಹೊಡೆತ ಬೀಳಲಿದೆ. ಶ್ರೀಲಂಕಾ (ಎಸ್​ಎಲ್​ಸಿ), ಪಾಕಿಸ್ತಾನ (ಪಿಸಿಬಿ) ಮತ್ತು ವೆಸ್ಟ್ ಇಂಡೀಸ್ (ಡಬ್ಲ್ಯುಐಸಿಬಿ) ಮಂಡಳಿಗಳು ಟೆನ್ ಸ್ಪೋರ್ಟ್ಸ್ (ಸೋನಿ ಪಿಕ್ಚರ್ಸ್) ಜತೆಗೆ ಹೊಂದಿರುವ ಪ್ರಸಾರ ಹಕ್ಕಿನ ಒಪ್ಪಂದಗಳು ಈಗಾಗಲೆ ಮುಕ್ತಾಯಗೊಂಡಿವೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಕಳೆದ 6 ವರ್ಷಗಳಿಂದ ಹೊಂದಿದ್ದ 140 ಕೋಟಿ ರೂ. ಮೊತ್ತದ ಒಪ್ಪಂದವೂ ಇದೇ ತಿಂಗಳು ಕೊನೆಗೊಳ್ಳುತ್ತಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯೂ ಸದ್ಯ ಯಾವುದೇ ಪ್ರಸಾರ ಹಕ್ಕಿನ ಒಪ್ಪಂದ ಹೊಂದಿಲ್ಲ. ಹೀಗಾಗಿ ಮುಂದಿನ 6 ತಿಂಗಳು ಯಾವುದೇ ಪಂದ್ಯಗಳು ನಡೆಯದೇ ಹೋದರೆ ಈ ಕ್ರಿಕೆಟ್ ಮಂಡಳಿಗಳು ಆರ್ಥಿಕ ಮುಗ್ಗಟ್ಟು ಎದುರಿಸಲಿವೆ.

ಹಾಲಿ ವೇಳಾಪಟ್ಟಿಯ ಪ್ರಕಾರ ಶ್ರೀಲಂಕಾ ಮುಂದಿನ ಜುಲೈನಲ್ಲಿ ಭಾರತ ವಿರುದ್ಧದ ಸರಣಿಗೆ ಆತಿಥ್ಯ ವಹಿಸ ಬೇಕಿದೆ. ಇದಕ್ಕೆ ಈಗಾಗಲೆ ಕರೆದಿರುವ ಟೆಂಡರ್​ಗೆ

ಯಾರಿಂದಲೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ವಿಂಡೀಸ್ ಮಂಡಳಿ ಪ್ರಸಾರ ಹಕ್ಕಿನ ಖರೀದಿಗೂ ಇದುವರೆಗೆ ಯಾರೂ ಆಸಕ್ತಿ ತೋರಿಲ್ಲ. ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್​ಎಲ್) ಅಕಾಲಿಕವಾಗಿ ಮುಕ್ತಾಯಗೊಂಡ ಕಾರಣ ಪಿಸಿಬಿ ಈಗಾಗಲೆ ಸಂಕಷ್ಟಕ್ಕೆ ಸಿಲುಕಿದೆ. ಬಾಂಗ್ಲಾ ಮಂಡಳಿಯೂ ಏಪ್ರಿಲ್ ನಂತರದಲ್ಲಿ ಪ್ರಸಾರ ಹಕ್ಕು ಮತ್ತು ಪ್ರಾಯೋಜಕರು ಇಲ್ಲದೆ ಖಾಲಿ ಉಳಿಯಲಿದೆ. ಸದ್ಯಕ್ಕೆ ಎಲ್ಲ ಮಂಡಳಿಗಳಿಗೆ ಇರುವ ಪ್ರಮುಖ ಆಶಾಕಿರಣ ಟಿ20 ವಿಶ್ವಕಪ್. ಈ ಟೂರ್ನಿ ಆಸ್ಟ್ರೇಲಿಯಾದಲ್ಲಿ ನಿಗದಿಯಂತೆ ನಡೆದರೆ ಎಲ್ಲ ಮಂಡಳಿಗಳಿಗೆ ಭಾಗವಹಿಸುವಿಕೆಯ ಶುಲ್ಕವಾಗಿ ಕನಿಷ್ಠ ತಲಾ 35 ಕೋಟಿ ರೂ. ಲಭಿಸಲಿದೆ. ಟಿ20 ವಿಶ್ವಕಪ್ ರದ್ದುಗೊಂಡರೆ ಈ ಹಣವೂ ಲಭಿಸುವುದಿಲ್ಲ. -ಏಜೆನ್ಸೀಸ್

ಐಸಿಸಿ ಸಂಪೂರ್ಣ ಮೌನ: ಕರೊನಾ ಹಾವಳಿಯಿಂದ ವಿಶ್ವದ ಕ್ರಿಕೆಟ್ ಮಂಡಳಿಗಳು ಸಂಕಷ್ಟದಲ್ಲಿದ್ದರೂ, ಜಾಗತಿಕ ಕ್ರಿಕೆಟ್ ಆಡಳಿತ ಸಂಸ್ಥೆ ಐಸಿಸಿ ಈ ಬಗ್ಗೆ ಇದುವರೆಗೆ ಮೌನ ಮುರಿದಿಲ್ಲ. ತನ್ನ ಸದಸ್ಯ ರಾಷ್ಟ್ರಗಳಿಗೆ ಯಾವುದೇ ರೀತಿಯಲ್ಲಿ ಆರ್ಥಿಕ ನೆರವು ಒದಗಿಸುವ ಬಗ್ಗೆ ಏನನ್ನೂ ಹೇಳುತ್ತಿಲ್ಲ. ಈ ಸಂಕಷ್ಟದ ಸಮಯದಲ್ಲಿ ಐಸಿಸಿ ನೆರವಿಗೆ ಧಾವಿಸಬೇಕು ಎಂದು ಹೆಚ್ಚಿನ ಮಂಡಳಿಗಳು ಆಶಿಸುತ್ತಿವೆ. ಆದರೆ ಟಿ20 ವಿಶ್ವಕಪ್ ನಡೆಯದೇ ಹೋದರೆ ಐಸಿಸಿ ಕೂಡ ದೊಡ್ಡ ಆರ್ಥಿಕ ಹೊಡೆತವನ್ನೇ ಎದುರಿಸಬೇಕಾಗುತ್ತದೆ.

ಭಾರತ ವಿರುದ್ಧ ಆಡದೆ ಪಿಸಿಬಿಗೆ 690 ಕೋಟಿ ರೂಪಾಯಿ ನಷ್ಟ!: ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ 2008ರಿಂದ ಯಾವುದೇ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಆಡದಿರುವುದರಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಬರೋಬ್ಬರಿ 690 ಕೋಟಿ ರೂ. (90 ದಶಲಕ್ಷ ಡಾಲರ್) ನಷ್ಟ ಅನುಭವಿಸಿದೆ. ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಭಾರತ ತಂಡ ಕಳೆದೊಂದು ದಶಕದಿಂದ ಪಾಕಿಸ್ತಾನ ವಿರುದ್ಧ ಐಸಿಸಿ ಟೂರ್ನಿಗಳು ಮತ್ತು ಏಷ್ಯಾಕಪ್​ನಲ್ಲಿ ಮಾತ್ರ ಆಡುತ್ತಿದೆ. ಹೀಗಾಗಿ ಪಿಸಿಬಿ ಕಳೆದ 5 ವರ್ಷಗಳ ತನ್ನ 1,142 ಕೋಟಿ ರೂ. ಮೊತ್ತದ ಟಿವಿ ಪ್ರಸಾರ ಹಕ್ಕಿನಿಂದ ಭಾರಿ ಮೊತ್ತದ ಕಡಿತ ಎದುರಿಸಿದೆ.