ಮುಂಬೈ: ಎಡಗೈ ಸ್ಪಿನ್ನರ್ ಶಿಖರ್ ಶೆಟ್ಟಿ (26ಕ್ಕೆ 4) ಬಿಗಿ ಬೌಲಿಂಗ್ ದಾಳಿ ಹಾಗೂ ಬ್ಯಾಟರ್ಗಳ ಸಂಘಟಿತ ಆಟದ ನೆರವಿನಿಂದ ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ರಾಜಸ್ಥಾನ ಎದುರು 4 ವಿಕೆಟ್ಗಳ ಹೋರಾಟಯುತ ಗೆಲುವು ಒಲಿಸಿಕೊಂಡಿತು. ಇದರೊಂದಿಗೆ ಆರ್.ಸ್ಮರಣ್ ಪಡೆ ಎಲೀಟ್ ಎ ಗುಂಪಿನ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದರೂ, ಸೂಪರ್ ಲೀಗ್ ಹಂತಕ್ಕೇರುವ ರೇಸ್ನಿಂದ ಹೊರಗುಳಿದಿದೆ.
ಬಿಕೆಸಿ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿಯಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ, ಹಿಮಾಂಶು ನೆಹ್ರಾ (53 ರನ್, 22 ಎಸೆತ, 4 ಬೌಂಡರಿ, 4 ಸಿಕ್ಸರ್) ಅರ್ಧಶತಕದ ನಡುವೆಯೂ ರಾಜ್ಯದ ಬೌಲರ್ಗಳ ದಾಳಿಗೆ ತತ್ತರಿಸಿ 15.3 ಓವರ್ಗಳಲ್ಲಿ 113 ರನ್ಗೆ ಆಲೌಟ್ ಆಯಿತು. ಅನುಭವಿಗಳಾದ ಮನೀಷ್ ಪಾಂಡೆ, ಕರುಣ್ ನಾಯರ್ ಗೈರಿನಲ್ಲಿ ಸಾಧಾರಣ ಗುರಿ ಬೆನ್ನತ್ತಿದ ಕರ್ನಾಟಕ, ಆರಂಭಿಕ ಕೆಎಲ್ ಶ್ರೀಜಿತ್ (33) ಹಾಗೂ ನಾಯಕ ಆರ್.ಸ್ಮರಣ್ (25*) ಆಸರೆಯಲ್ಲಿ 16 ಓವರ್ಗಳಲ್ಲಿ 6 ವಿಕೆಟ್ಗೆ 114 ರನ್ಗಳಿಸಿ ಗೆಲುವಿನ ಸಮಾಧಾನ ಕಂಡಿತು. ಕರ್ನಾಟಕ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಗುರುವಾರ ಅಗ್ರಸ್ಥಾನಿ ಬರೋಡ ತಂಡದ ಸವಾಲು ಎದುರಿಸಲಿದೆ.
ರಾಜಸ್ಥಾನ: 15.3 ಓವರ್ಗಳಲ್ಲಿ 113 (ಅಭಿಜೀತ್ 25, ರೋಹನ್ 10, ಹಿಮಾಂಶು 53, ಕಾರ್ತಿಕ್ 2, ಕುನಾಲ್ 8, ದೀಪಕ್ 5, ಮಹಿಪಾಲ್ 3, ಶಿಖರ್ ಶೆಟ್ಟಿ 26ಕ್ಕೆ 4, ಶ್ರೀಶ ಆಚಾರ್ 26ಕ್ಕೆ 2, ರಿತೇಶ್ 9ಕ್ಕೆ 1).
ಕರ್ನಾಟಕ: 16 ಓವರ್ಗಳಲ್ಲಿ 6 ವಿಕೆಟ್ಗೆ 114 (ರೋಹನ್ ಪಾಟೀಲ್ 12, ಕೆಎಲ್ ಶ್ರೀಜಿತ್ 33, ಮನ್ವಂತ್ 16, ಪ್ರವೀಣ್ 1, ಆರ್.ಸ್ಮರಣ್ 25*, ಅನೀಶ್ವರ್ 2, ಅಭಿನವ್ 7, ರಿತೇಶ್ 2*, ಮಾನವ್ ಸುಥರ್ 17ಕ್ಕೆ 2, ರಾಹುಲ್ 39ಕ್ಕೆ 2). ಪಂದ್ಯಶ್ರೇಷ್ಠ: ಶಿಖರ್ ಶೆಟ್ಟಿ.
ಕರ್ನಾಟಕಕ್ಕೆ ಮುಂದಿನ ಪಂದ್ಯ
ಎದುರಾಳಿ: ಬರೋಡ
ಯಾವಾಗ: ಗುರುವಾರ
ಆರಂಭ: ಬೆಳಗ್ಗೆ 9
ಸೂಪರ್ ಲೀಗ್ ಕನಸು ಭಗ್ನ
ರಾಜಸ್ಥಾನ ಎದುರು ಗೆದ್ದರೂ, ರಾಜ್ಯದ ಸೂಪರ್ ಲೀಗ್ ಕನಸು ಮಂಗಳವಾರ ಭಗ್ನಗೊಂಡಿದೆ. ಬರೋಡ ಈಗಾಗಲೆ 20 ಅಂಕದೊಂದಿಗೆ ಸೂಪರ್ ಲೀಗ್ ಪ್ರವೇಶ ಖಚಿತಪಡಿಸಿಕೊಂಡಿದ್ದರೆ, ತಲಾ 16 ಅಂಕದೊಂದಿಗೆ ಇನ್ನೊಂದು ಸ್ಥಾನದ ರೇಸ್ನಲ್ಲಿರುವ ಬಂಗಾಳ-ರಾಜಸ್ಥಾನ ಕೊನೇ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಹೀಗಾಗಿ ಇದರಲ್ಲಿ ಗೆದ್ದ ತಂಡ 20 ಅಂಕದೊಂದಿಗೆ ಸೂಪರ್ ಲೀಗ್ನ 2ನೇ ಸ್ಥಾನ ಒಲಿಸಿಕೊಳ್ಳಲಿದೆ.