ಕ್ರೀಡೆ

ಬೆಂಗಳೂರಿನಲ್ಲಿ ಇಂದು ಕಿವೀಸ್-ಪಾಕ್​ ನಿರ್ಣಾಯಕ ಫೈಟ್​; ಸೆಮಿಫೈನಲ್​ ರೇಸ್​ನಲ್ಲಿ ಮಹತ್ವದ ಕಾದಾಟ

ಬೆಂಗಳೂರು: ಮೊದಲ 4 ಪಂದ್ಯಗಳ ಗೆಲುವಿನ ಬಳಿಕ ಸತತ 3 ಸೋಲಿನೊಂದಿಗೆ ಲಯ ತಪ್ಪಿರುವ ಹಾಲಿ ರನ್ನರ್​ಅಪ್​​ ನ್ಯೂಜಿಲೆಂಡ್​ ಮತ್ತು ಸತತ 4 ಸೋಲಿನ ಬಳಿಕ ಬಾಂಗ್ಲಾ ಎದುರು ಕೊನೆಗೂ ಲಯಕ್ಕೆ ಮರಳಿರುವ ಪಾಕಿಸ್ತಾನ ತಂಡಗಳು ಏಕದಿನ ವಿಶ್ವಕಪ್​ನಲ್ಲಿ ಶನಿವಾರ ಉದ್ಯಾನನಗರಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಕಿವೀಸ್​ ಸೆಮೀಸ್​ ಅವಕಾಶ ವೃದ್ಧಿಸಿಕೊಳ್ಳುವ ಮತ್ತು ಪಾಕ್​ ಸೆಮಿಫೈನಲ್​ ಆಸೆ ಜೀವಂತ ಉಳಿಸಿಕೊಳ್ಳುವ ದೃಷ್ಟಿಯಿಂದ ಇದು ಮಹತ್ವದ ಕಾದಾಟವೆನಿಸಿದೆ.

ಆರಂಭಿಕ 4 ಪಂದ್ಯಗಳಲ್ಲಿ ಗೆದ್ದಾಗ ಬಲಿಷ್ಠವಾಗಿ ಕಂಡಿದ್ದ ಕಿವೀಸ್​ ತಂಡ ನಂತರದಲ್ಲಿ ಲಯ ತಪ್ಪಿದೆ. ಕಳೆದ 3 ಪಂದ್ಯಗಳಲ್ಲಿ ಅಂಕಪಟ್ಟಿಯ ಮೇಲಿನ 3 ಸ್ಥಾನದಲ್ಲಿರುವ ಭಾರತ, ಆಸ್ಟ್ರೆಲಿಯಾ, ದಕ್ಷಿಣ ಆಫ್ರಿಕಾ ವಿರುದ್ಧ ಸೋತಿರುವ ಕಿವೀಸ್​ಗೆ ಗಾಯದ ಸಮಸ್ಯೆಗಳಿಂದಲೂ ಹೆಚ್ಚಿನ ಹೊಡೆತ ಬಿದ್ದಿದೆ. ನಾಯಕ ಕೇನ್​ ವಿಲಿಯಮ್ಸನ್​ ಗಾಯದಿಂದಾಗಿ ಟೂರ್ನಿಯಲ್ಲಿ ಇದುವರೆಗೆ ಒಂದೇ ಪಂದ್ಯ ಆಡಿದ್ದರೆ, ಫಗ್ಯುರ್ಸನ್​, ಚಾಪ್​ಮನ್​ ಕೂಡ ಗಾಯದ ಸಮಸ್ಯೆ ಎದುರಿಸಿದ್ದಾರೆ. ಕಳೆದ ಪಂದ್ಯದಲ್ಲಿ ಗಾಯಗೊಂಡ ವೇಗಿ ಮ್ಯಾಟ್​ ಹೆನ್ರಿ ಇದೀಗ ವಿಶ್ವಕಪ್​ನಿಂದಲೇ ಹೊರಬಿದ್ದಿದ್ದಾರೆ. ಅವರ ಬದಲಿಗೆ ಮತ್ತೋರ್ವ ವೇಗಿ ಕೈಲ್​ ಜೇಮಿಸನ್​ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಜೇಮ್ಸ್​ ನೀಶಾಮ್​ ಕೂಡ ಹರಿಣಗಳ ಎದುರಿನ ಪಂದ್ಯದಲ್ಲಿ ಗಾಯಗೊಂಡಿದ್ದು, ಪಾಕ್​ ವಿರುದ್ಧ ಆಡುವ ಖಚಿತತೆ ಇಲ್ಲ. ಆಸೀಸ್​ ಎದುರು 388 ಮತ್ತು ದಕ್ಷಿಣ ಆಫ್ರಿಕಾ ಎದುರು 357 ರನ್​ ಬಿಟ್ಟುಕೊಟ್ಟಿರುವ ಕಿವೀಸ್​ ಬೌಲಿಂಗ್​ ವಿಭಾಗಕ್ಕೆ ಚಿನ್ನಸ್ವಾಮಿಯ ಸಣ್ಣ ಬೌಂಡರಿ ಇನ್ನಷ್ಟು ಸವಾಲೊಡ್ಡಲಿದೆ. ಬೆಂಗಳೂರು ಮೂಲದ ಆಲ್ರೌಂಡರ್​ ರಚಿನ್​ ರವೀಂದ್ರ ಪ್ರೇಕ್ಷಕರಿಂದ ಉತ್ತಮ ಬೆಂಬಲ ಪಡೆಯುವ ನಿರೀಕ್ಷೆ ಇದೆ.

ಇತ್ತ ಭಾರತ, ಆಸ್ಟ್ರೆಲಿಯಾ, ಅಫ್ಘಾನಿಸ್ತಾನ, ದಕ್ಷಿಣ ಆಫ್ರಿಕಾ ವಿರುದ್ಧ ಸೋತಿದ್ದ ಪಾಕ್​, ಬಾಂಗ್ಲಾ ಎದುರು ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. ಆರಂಭಿಕ ಫಖರ್​ ಜಮಾನ್​ ಲಯಕ್ಕೆ ಮರಳಿರುವುದು ಇನ್ನಷ್ಟು ಸಮಾಧಾನ ನೀಡಿದೆ. ಬಾಂಗ್ಲಾ ವಿರುದ್ಧದ ಬೌಲಿಂಗ್​ ನಿರ್ವಹಣೆಯನ್ನು ಪಾಕ್​ ಮುಂದುವರಿಸಬೇಕಾದ ಅಗತ್ಯವಿದೆ. ವಿಶ್ವಕಪ್​ನಲ್ಲಿ ಕಿವೀಸ್​ ವಿರುದ್ಧದ ಉತ್ತಮ ದಾಖಲೆಯೂ ಪಾಕ್​ಗೆ ಸ್ಫೂರ್ತಿಯಾಗಿದೆ.

ಸೆಮಿಫೈನಲ್​ ಲೆಕ್ಕಾಚಾರ...

ನ್ಯೂಜಿಲೆಂಡ್​: ಇದುವರೆಗೆ ಆಡಿದ 7 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, 3ರಲ್ಲಿ ಸೋತು ಅಂಕಪಟ್ಟಿಯಲ್ಲಿ ಸದ್ಯ 4ನೇ ಸ್ಥಾನದಲ್ಲಿರುವ ಕಿವೀಸ್​, ಪಾಕ್​ ಮತ್ತು ಶ್ರೀಲಂಕಾ (ನ.9) ವಿರುದ್ಧದ ಮುಂದಿನೆರಡೂ ಪಂದ್ಯ ಗೆದ್ದರೆ ಹೆಚ್ಚಿನ ಲೆಕ್ಕಾಚಾರವಿಲ್ಲದೆ ಸೆಮಿಫೈನಲ್​ಗೇರಲಿದೆ. ಉಳಿದ 2ರಲ್ಲಿ 1ರಲ್ಲಿ ಮಾತ್ರ ಗೆದ್ದರೆ ಕಿವೀಸ್​ ರನ್​ರೇಟ್​ ಲೆಕ್ಕಾಚಾರದಲ್ಲೂ ಮೇಲುಗೈ ಸಾಧಿಸಿದರಷ್ಟೇ ಸೆಮೀಸ್​ಗೇರಲಿದೆ. ಅದರಲ್ಲೂ ಪಾಕ್​ ವಿರುದ್ಧ ಸೋತರೆ, ಕೊನೇ ಪಂದ್ಯದಲ್ಲಿ ಲಂಕಾ ವಿರುದ್ಧ ಗೆಲ್ಲಲೇಬೇಕಾದ ಒತ್ತಡ ಎದುರಾಗಲಿದೆ. ಉಳಿದೆರಡೂ ಪಂದ್ಯ ಸೋತರೆ ಕಿವೀಸ್​ ಸೆಮೀಸ್​ ಆಸೆ ಕೈಚೆಲ್ಲಬೇಕಾಗುತ್ತದೆ.

ಪಾಕಿಸ್ತಾನ: ಇದುವರೆಗೆ ಆಡಿದ 7 ಪಂದ್ಯಗಳಲ್ಲಿ 3ರಲ್ಲಿ ಗೆದ್ದು, 4ರಲ್ಲಿ ಸೋತಿರುವ ಪಾಕ್​, ಉಳಿದೆರಡೂ ಪಂದ್ಯಗಳಲ್ಲಿ ಗೆದ್ದು, ರನ್​ರೇಟ್​ನಲ್ಲೂ ಮೇಲುಗೈ ಸಾಧಿಸಿದರೆ ಸೆಮಿಫೈನಲ್​ಗೇರುವ ಅವಕಾಶ ಹೊಂದಿದೆ. ಕಿವೀಸ್​ ವಿರುದ್ಧ ಪಾಕ್​ ಗೆದ್ದರೆ, ಕೊನೇ ಪಂದ್ಯದಲ್ಲಿ ಇಂಗ್ಲೆಂಡ್​ (ನ.11) ವಿರುದ್ಧ ಸೋತರೂ, ಸೆಮಿಫೈನಲ್​ಗೇರುವ ಅವಕಾಶ ಹೊಂದಿರುತ್ತದೆ. ಆದರೆ ಇದಕ್ಕೆ ಆಸೀಸ್​ ಉಳಿದ 3, ಕಿವೀಸ್​, ಆ್ಘನ್​ ಉಳಿದ ಎರಡೂ ಪಂದ್ಯ ಸೋಲಬೇಕು. ಆಗ 3-4 ತಂಡಗಳು ತಲಾ 8 ಅಂಕ ಗಳಿಸಲಿದ್ದು, ಉತ್ತಮ ರನ್​ರೇಟ್​ ಆಧಾರದಲ್ಲಿ ಸೆಮಿಫೈನಲ್​ಗೇರಬಹುದು. ಆದರೆ ಕಿವೀಸ್​ ವಿರುದ್ಧ ಸೋತರೆ ಪಾಕ್​ಗೆ ಸೆಮೀಸ್​ ಬಾಗಿಲು ಬಹುತೇಕ ಬಂದ್​ ಆಗಲಿದೆ.

ಏಕದಿನ ಮುಖಾಮುಖಿ: 115

ನ್ಯೂಜಿಲೆಂಡ್​: 51, ಪಾಕಿಸ್ತಾನ: 60, ಟೈ: 1, ರದ್ದು: 3

ವಿಶ್ವಕಪ್​ ಮುಖಾಮುಖಿ: 9

ನ್ಯೂಜಿಲೆಂಡ್​: 2, ಪಾಕಿಸ್ತಾನ: 7

ಆರಂಭ: ಬೆಳಗ್ಗೆ 10.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​

ಮಳೆ ಮುನ್ಸೂಚನೆ ಇದೆ...

ಬೆಂಗಳೂರಿನಲ್ಲಿ ಪಾಕ್​-ಕಿವೀಸ್​ ಪಂದ್ಯದ ವೇಳೆ ಮಳೆ ಸುರಿಯುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶನಿವಾರ ಮಧ್ಯಾಹ್ನದ ನಂತರ ಮಳೆಯಾಗುವ ಸಾಧ್ಯತೆ ಶೇ.70-80ರಷ್ಟಿದೆ. ಬೆಂಗಳೂರಿನಲ್ಲಿ ಶುಕ್ರವಾರವೂ ಮಧ್ಯಾಹ್ನದ ನಂತರ ಅಲ್ಪ ಪ್ರಮಾಣದಲ್ಲಿ ಮಳೆಯಾಗಿದೆ. ಆದರೆ ಇದು ಹಗಲು ಪಂದ್ಯವಾಗಿರುವುದರಿಂದ, ಕನಿಷ್ಠ ಡಕ್ವರ್ತ್​-ಲೂಯಿಸ್​ ನಿಯಮದನ್ವಯವಾದರೂ, ಸ್ಪಷ್ಟ ಫಲಿತಾಂಶವನ್ನು ಕಾಣಲು ಯಾವುದೇ ತೊಂದರೆ ಇಲ್ಲವೆನಿಸಿದೆ. ಹೀಗಾಗಿ ಉಭಯ ತಂಡಗಳು ಅಂಕಹಂಚಿಕೊಳ್ಳುವ ಸಾಧ್ಯತೆ ಕಡಿಮೆ ಇದೆ. ಒಂದು ವೇಳೆ ಪಂದ್ಯ ರದ್ದಾದರೆ, ಕಿವೀಸ್​ಗಿಂತ ಪಾಕಿಸ್ತಾನದ ಸೆಮೀಸ್​ ಆಸೆಗೆ ಹೆಚ್ಚಿನ ಹಿನ್ನಡೆಯಾಗಲಿದೆ.