ಕ್ರೀಡೆ

ಡೆಲ್ಲಿ ಕ್ಯಾಪಿಟಲ್ಸ್ ಕೈಯಲ್ಲಿ ಆರ್‌ಸಿಬಿ ಪ್ಲೇಆಫ್​ ಭವಿಷ್ಯ! ಹೀಗಿದೆ ಲೆಕ್ಕಾಚಾರ...

ಬೆಂಗಳೂರು: ಆರ್‌ಸಿಬಿ ತಂಡ ಆರಂಭಿಕ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಪ್ಲೇಆಫ್​ ರೇಸ್‌ನಲ್ಲಿ ಮುಂಚೂಣಿಯಲ್ಲಿತ್ತು. ಫಾಫ್​ ಡು ಪ್ಲೆಸಿಸ್ ನಾಯಕತ್ವ ಕೌಶಲ, ದಿನೇಶ್ ಕಾರ್ತಿಕ್ ಫಿನಿಷರ್ ಪಾತ್ರ, ಮ್ಯಾಕ್ಸ್‌ವೆಲ್ ಆಲ್ರೌಂಡ್ ಆಟ, ವನಿಂದು ಹಸರಂಗ ಸ್ಪಿನ್ ದಾಳಿ, ಹರ್ಷಲ್ ಪಟೇಲ್ ವೇಗದ ಬೌಲಿಂಗ್ ಗಮನಸೆಳೆದಿತ್ತು. ಆದರೆ, ಆರ್‌ಸಿಬಿ ತಂಡ ನಂತರದ 6 ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಗೆದ್ದಿದೆ. ಇದರಿಂದ ಈಗ ಐಪಿಎಲ್-15ರಲ್ಲಿ ಲೀಗ್ ಹಂತದಲ್ಲೇ ಹೊರಬೀಳುವ ಅಪಾಯ ಎದುರಾಗಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಕಂಡ ದೊಡ್ಡ ಸೋಲು ಪ್ಲೇಆಫ್​ ರೇಸ್‌ನಲ್ಲಿ ದೊಡ್ಡ ಹಿನ್ನಡೆ ತಂದಿದೆ.

ಗುರುವಾರ ನಡೆಯಲಿರುವ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಗೆಲ್ಲಲೇಬೇಕಾದ ಸವಾಲು ಪ್ಲೆಸಿಸ್ ಬಳಗದ ಮುಂದಿದೆ. ಆದರೆ ಇದರಲ್ಲಿ ಅಗ್ರಸ್ಥಾನಿ ಗುಜರಾತ್ ಟೈಟಾನ್ಸ್ ಎದುರಾಳಿಯಾಗಿರುವುದು ಈ ಸವಾಲನ್ನು ಇನ್ನಷ್ಟು ಕಠಿಣಗೊಳಿಸಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ, ಸೋಮವಾರ ಪಂಜಾಬ್ ವಿರುದ್ಧ ಗೆದ್ದ ಬಳಿಕ ಡೆಲ್ಲಿ ತಂಡ ಅಂಕಪಟ್ಟಿಯಲ್ಲಿ 4ನೇ ಸ್ಥಾನವನ್ನು ಆರ್‌ಸಿಬಿ ಕೈಯಿಂದ ಕಸಿದುಕೊಂಡಿದೆ. ಹೀಗಾಗಿ ಆರ್‌ಸಿಬಿ ತಂಡ ಗುಜರಾತ್ ವಿರುದ್ಧ ಗೆದ್ದರೂ, ಸರಾಗವಾಗಿ ಪ್ಲೇಆಫ್​ಗೇರಬೇಕಾದರೆ ಡೆಲ್ಲಿ ತಂಡ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಮುಂಬೈ ವಿರುದ್ಧ ಸೋಲಲಿ ಎಂದು ಪ್ರಾರ್ಥಿಸಬೇಕಾಗಿದೆ.

ಆರ್‌ಸಿಬಿ ಪ್ಲೇಆಫ್​ ಹಾದಿ...

ಗುಜರಾತ್ ವಿರುದ್ಧ ಗೆದ್ದರೆ: ಆರ್‌ಸಿಬಿ ಕೊನೇ ಪಂದ್ಯದಲ್ಲಿ ಗುಜರಾತ್ ವಿರುದ್ಧ ಗೆದ್ದರೆ ಆಗ ಒಟ್ಟು ಅಂಕ ಗಳಿಕೆ 16ಕ್ಕೆ ಏರಲಿದೆ. ಆದರೆ ಇದರಿಂದ ಪ್ಲೇಆಫ್​ ಪ್ರವೇಶ ಖಚಿತವಾಗುವುದಿಲ್ಲ. ಡೆಲ್ಲಿ ತಂಡ ಶನಿವಾರ ಮುಂಬೈ ವಿರುದ್ಧದ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಸೋತರಷ್ಟೇ ಆರ್‌ಸಿಬಿ ಪ್ಲೇಆಫ್​ ಪ್ರವೇಶ ಸಲೀಸು ಆಗಲಿದೆ. ಡೆಲ್ಲಿ ತಂಡ ಮುಂಬೈ ವಿರುದ್ಧ ಗೆದ್ದರೂ ಆರ್‌ಸಿಬಿ ಪ್ಲೇಆಫ್​ಗೇರಬೇಕಾದರೆ, ಗುಜರಾತ್ ವಿರುದ್ಧ ಬೃಹತ್ ಅಂತರದಿಂದ ಗೆಲ್ಲಬೇಕಾಗುತ್ತದೆ. ಆಗ ರನ್‌ರೇಟ್ ಲೆಕ್ಕಾಚಾರದಲ್ಲಿ ರಾಜಸ್ಥಾನ, ಲಖನೌ (ಇವೆರಡೂ ತಂಡಗಳು ಕೊನೇ ಲೀಗ್ ಸೋತಿದ್ದರೆ) ಮತ್ತು ಡೆಲ್ಲಿ ಪೈಕಿ ಒಂದನ್ನಾದರೂ ಹಿಂದಿಕ್ಕಿದರೆ ಪ್ಲೇಆಫ್​ಗೇರಬಹುದು.

ಗುಜರಾತ್ ವಿರುದ್ಧ ಸೋತರೆ: ಆರ್‌ಸಿಬಿ ಕೊನೇ ಲೀಗ್ ಪಂದ್ಯದಲ್ಲಿ ಸೋತರೂ ಪ್ಲೇಆಫ್​ಗೇರಬೇಕಾದರೆ ಪವಾಡವೇ ನಡೆಯಬೇಕು. ಯಾಕೆಂದರೆ ಕೆಟ್ಟ ರನ್‌ರೇಟ್ ಆರ್‌ಸಿಬಿಗೆ ಬಹುದೊಡ್ಡ ಹಿನ್ನಡೆಯಾಗಿದೆ. ಒಂದು ವೇಳೆ ಡೆಲ್ಲಿ ತಂಡ ಕೂಡ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಹೀನಾಯವಾಗಿ ಸೋತರೆ ಆಗ ಆರ್‌ಸಿಬಿ ತಂಡಕ್ಕಿಂತ ಹೆಚ್ಚಾಗಿ ಕೆಕೆಆರ್, ಪಂಜಾಬ್ ಅಥವಾ ಸನ್​ರೈಸರ್ಸ್​ ತಂಡಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಕೆಕೆಆರ್, ಪಂಜಾಬ್/ಸನ್​ರೈಸರ್ಸ್​ ಕೊನೇ ಲೀಗ್ ಪಂದ್ಯಗಳಲ್ಲಿ ಗೆದ್ದರೆ ಆಗ 4 ತಂಡಗಳು ತಲಾ 14 ಅಂಕ ಗಳಿಸಲಿದ್ದು ರನ್‌ರೇಟ್ ನಿರ್ಣಾಯಕವಾಗಲಿದೆ.