ಕ್ರೀಡೆ

ಐಪಿಎಲ್-13: ಡೆಲ್ಲಿ ಕ್ಯಾಪಿಟಲ್ಸ್-ಸನ್‌ರೈಸರ್ಸ್‌ ಹೈದರಾಬಾದ್ ಮುಖಾಮುಖಿ

ಅಬುಧಾಬಿ: ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್-13ರ ತನ್ನ 3ನೇ ಪಂದ್ಯದಲ್ಲಿ, ಗೆಲುವಿಗಾಗಿ ಪರದಾಡುತ್ತಿರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಟೂರ್ನಿಯಲ್ಲಿ ಇದುವರೆಗೆ ಜಯ ದಾಖಲಿಸದ ಏಕೈಕ ತಂಡ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಡೇವಿಡ್ ವಾರ್ನರ್ ಬಳಗದ ಪಾಲಿಗೆ ಈ ಪಂದ್ಯ ಮಹತ್ವ ಪಡೆದಿದೆ. ಶೇಖ್ ಜಯೆದ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆಯಲಿರುವ ಕದನದಲ್ಲಿ ಶ್ರೇಯಸ್ ಅಯ್ಯರ್ ಬಳಗವೇ ಮೇಲ್ನೋಟಕ್ಕೆ ಫೇವರಿಟ್ ಎನಿಸಿದೆ. ಮರಳುಗಾಡಿನಲ್ಲಿ ಗೆಲುವಿಗಾಗಿ ಪರಿತಪಿಸುತ್ತಿರುವ ಸನ್‌ರೈಸರ್ಸ್‌ ತಂಡಕ್ಕೆ ಮಧ್ಯಮ ಕ್ರಮಾಂಕದ ವೈಲ್ಯವೇ ದೊಡ್ಡ ಹಿನ್ನಡೆಯಾಗಿದೆ.

ಆರಂಭಿಕ ಜಾನಿ ಬೇರ್‌ಸ್ಟೋ ಮೊದಲ ಪಂದ್ಯದಲ್ಲಿ ಮಿಂಚಿದರೆ, ಕರ್ನಾಟಕದ ಮನೀಷ್ ಪಾಂಡೆ ಎರಡೂ ಪಂದ್ಯಗಳಲ್ಲಿ ನಿರೀಕ್ಷಿತ ನಿರ್ವಹಣೆ ತೋರಿದ್ದಾರೆ. ಉಳಿದಂತೆ ತಂಡ ಬ್ಯಾಟಿಂಗ್ ವಿಭಾಗದಲ್ಲಿ ವೈಲ್ಯ ಅನುಭವಿಸುತ್ತಿದೆ. ಉತ್ತಮ ಆರಂಭ ಪಡೆದರೂ ಮಧ್ಯಮ ಕ್ರಮಾಂಕದಲ್ಲೇ ತಂಡಕ್ಕೆ ಹಿನ್ನಡೆಯಾಗುತ್ತಿದೆ.

ಬೌಲರ್‌ಗಳ ಕೆಲಸ ಸುಲಭವಾಗಬೇಕಾದರೆ, ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಂದ ರನ್ ಬರಬೇಕು. ಆದರೆ, ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದ್ದರೂ ಸನ್‌ರೈಸರ್ಸ್‌ ಈ ವಿಭಾಗದಲ್ಲೇ ಹಿನ್ನಡೆ ಅನುಭವಿಸುತ್ತಿದೆ. ಆರಂಭಿಕ ಎರಡು ಪಂದ್ಯಗಳಿಂದ ಹೊರಗುಳಿದಿದ್ದ ಅನುಭವಿ ಕೇನ್ ವಿಲಿಯಮ್ಸನ್ ತಂಡಕ್ಕೆ ವಾಪಸಾಗುವ ಸಾಧ್ಯತೆಗಳಿವೆ.

ಮತ್ತೊಂದೆಡೆ, ಹಿಂದಿನ ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿದ ವಿಶ್ವಾಸದಲ್ಲಿರುವ ಡೆಲ್ಲಿ ಮತ್ತೊಂದು ಗೆಲುವಿನ ಆಸೆಯಲ್ಲಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಉತ್ತಮವಾಗಿ ನಿರ್ವಹಣೆ ಹೋರುತ್ತಿರುವ ಡೆಲ್ಲಿ ತಂಡ ಪ್ರಸಕ್ತ ವರ್ಷದ ಪ್ರಶಸ್ತಿ ಫೇವರಿಟ್‌ಗಳಲ್ಲಿ ಒಂದಾಗಿದ್ದು, ಸತತ 2 ಗೆಲುವಿನಿಂದ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ. ಆರ್.ಅಶ್ವಿನ್ ಅನುಪಸ್ಥಿತಿಯಲ್ಲಿ ಅಮಿತ್ ಮಿಶ್ರಾ-ಅಕ್ಷರ್ ಪಟೇಲ್ ಜೋಡಿಯೇ ಮೋಡಿ ಮಾಡಲು ಸನ್ನದ್ಧವಾಗಿದೆ.

ಟೀಮ್ ನ್ಯೂಸ್

ಡೆಲ್ಲಿ ಕ್ಯಾಪಿಟಲ್ಸ್: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಸಮತೋಲನದಿಂದ ಕೂಡಿರುವ ಡೆಲ್ಲಿ ತಂಡದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ಮೊದಲ ಪಂದ್ಯದಲ್ಲಿ ಗಾಯದ ಸಮಸ್ಯೆಗೆ ತುತ್ತಾಗಿದ್ದ ಆರ್.ಅಶ್ವಿನ್ ಈ ಪಂದ್ಯದಿಂದಲೂ ಹೊರಗುಳಿಯಲಿದ್ದು, ಅಮಿತ್ ಮಿಶ್ರಾ-ಅಕ್ಷರ್ ಪಟೇಲ್ ಜೋಡಿಯೇ ಉಳಿದುಕೊಳ್ಳಲಿದೆ. ಸಿಎಸ್‌ಕೆಗೆ ಕಡಿವಾಣ ಹಾಕಿದ್ದ ರಬಾಡ-ಆನ್ರಿಚ್ ಜೋಡಿ ಮತ್ತೊಮ್ಮೆ ಬಿಗಿ ದಾಳಿಗೆ ಸಜ್ಜಾಗಿದೆ. ಸಿಎಸ್‌ಕೆ ವಿರುದ್ಧ ದುಬಾರಿಯಾಗಿದ್ದ ಆವೇಶ್ ಖಾನ್ ಬದಲಿಗೆ ಮೊಹಿತ್ ಶರ್ಮ ತಂಡಕ್ಕೆ ವಾಪಸ್ ಆಗಬಹುದು.

ಕಳೆದ ಪಂದ್ಯ: ಸಿಎಸ್‌ಕೆ ಎದುರು 44 ರನ್ ಜಯ.

ಸಂಭಾವ್ಯ ತಂಡ: ಪೃಥ್ವಿ ಷಾ, ಶಿಖರ್ ಧವನ್, ರಿಷಭ್ ಪಂತ್ (ವಿಕೀ), ಶ್ರೇಯಸ್ ಅಯ್ಯರ್ (ನಾಯಕ), ಮಾರ್ಕಸ್ ಸ್ಟೋಯಿನಿಸ್, ಶಿಮ್ರೋನ್ ಹೆಟ್ಮೆಯೆರ್, ಅಕ್ಷರ್ ಪಟೇಲ್, ಅಮಿತ್ ಮಿಶ್ರಾ, ಕಗಿಸೊ ರಬಾಡ, ಅನ್ರಿಚ್ ನೋರ್ಜೆ,ಅವೇಶ್ ಖಾನ್

---------------------------------

ಸನ್‌ರೈಸರ್ಸ್‌: ಉತ್ತಮ ಆರಂಭಿಕರನ್ನು ಹೊಂದಿದ್ದರೂ ಮಧ್ಯಮ ಕ್ರಮಾಂಕದಲ್ಲಿ ತಜ್ಞ ಬ್ಯಾಟ್ಸ್‌ಮನ್ ಕೊರತೆ ಹೊಂದಿರುವ ಸನ್‌ರೈಸರ್ಸ್‌ ತಂಡದಲ್ಲಿ ಕೆಲ ಬದಲಾವಣೆ ಅನಿವಾರ್ಯವಾಗಿದೆ. ಮೊಹಮದ್ ನಬಿ ಬದಲಿಗೆ ಕೇನ್ ವಿಲಿಯಮ್ಸನ್ ತಂಡ ಕೂಡಿಕೊಳ್ಳುವ ಸಾಧ್ಯತೆಗಳಿವೆ. ಸದ್ಯದ ಪರಿಸ್ಥಿತಿಯಲ್ಲಿ ವಿಲಿಯಮ್ಸನ್ ತಂಡಕ್ಕೆ ಅನಿವಾರ್ಯ ಕೂಡ. ಮಧ್ಯಮ ವೇಗಿಗಳಾದ ಟಿ.ನಟರಾಜನ್, ಖಲೀಲ್ ಅಹ್ಮದ್ ಈ ಇಬ್ಬರಲ್ಲಿ ಒಬ್ಬರ ಬದಲಿಗೆ ಅನುಭವಿ ಸಿದ್ದಾರ್ಥ್ ಕೌಲ್‌ಗೆ ಅವಕಾಶ ನೀಡಬಹುದು. ಗಾಯದಿಂದ ಚೇತರಿಸಿಕೊಂಡರೆ ಆಲ್ರೌಂಡರ್ ವಿಜಯ್ ಶಂಕರ್ ಆಯ್ಕೆಗೆ ಪರಿಗಣಿಸಲ್ಪಡಲಿದ್ದಾರೆ. ಆಗ ಕಳೆದ ಪಂದ್ಯದಲ್ಲಿ ಮಂದಗತಿಯಲ್ಲಿ ಬ್ಯಾಟಿಂಗ್ ಮಾಡಿ ಟೀಕೆಗೆ ಗುರಿಯಾಗಿದ್ದ ವೃದ್ಧಿಮಾನ್ ಸಾಹ ಹೊರಗುಳಿಯಲಿದ್ದಾರೆ. ಜತೆಗೆ ಪ್ರಿಯಂ ಗಾರ್ಗ್ ಬದಲಿಗೆ ಅಬ್ದುಲ್ ಸಮದ್‌ರನ್ನು ಪರಿಗಣಿಸಬಹುದು.

ಕಳೆದ ಪಂದ್ಯ: ಕೆಕೆಆರ್ ವಿರುದ್ಧ 7 ವಿಕೆಟ್ ಸೋಲು.

ಸಂಭಾವ್ಯ ತಂಡ: ಡೇವಿಡ್ ವಾರ್ನರ್ (ನಾಯಕ), ಜಾನಿ ಬೇರ್‌ಸ್ಟೋ (ವಿಕೀ), ಮನೀಷ್ ಪಾಂಡೆ, ಪ್ರಿಯಂ ಗಾರ್ಗ್/ಅಬ್ದುಲ್ ಸಮದ್, ವೃದ್ಧಿಮಾನ್ ಸಾಹ/ವಿಜಯ್ ಶಂಕರ್, ಅಭಿಷೇಕ್ ಶರ್ಮ,

ಮೊಹಮದ್ ನಬಿ/ಕೇನ್ ವಿಲಿಯಮ್ಸನ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಟಿ.ನಟರಾಜನ್, ಖಲೀಲ್ ಅಹ್ಮದ್/ಸಿದ್ಧಾರ್ಥ್ ಕೌಲ್.

ಪಂದ್ಯ ಆರಂಭ: ರಾತ್ರಿ 7.30ಕ್ಕೆ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಮುಖಾಮುಖಿ: 15, ಡೆಲ್ಲಿ ಕ್ಯಾಪಿಟಲ್ಸ್: 6, ಸನ್‌ರೈಸರ್ಸ್‌: 9.