ದುಬೈ: ಕಳೆದ 52 ದಿನಗಳಿಂದ ಚುಟುಕು ಕ್ರಿಕೆಟ್ ಪ್ರಿಯರನ್ನು ತುದಿಗಾಲಲ್ಲಿ ನಿಲ್ಲಿಸುವಷ್ಟು ರೋಚಕತೆ ಹುಟ್ಟಿಸಿದ್ದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಪ್ರಶಸ್ತಿ ಕಾದಾಟಕ್ಕೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸಜ್ಜಾಗಿವೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆಯಲಿರುವ ಫೈನಲ್ ಹಣಾಹಣಿಯಲ್ಲಿ ಮುಂಬೈ ಗೆದ್ದರೆ ಪ್ರಶಸ್ತಿ ಉಳಿಸಿಕೊಂಡ ಸಾಧನೆ ಮಾಡಲಿದೆ. ಡೆಲ್ಲಿ ಗೆದ್ದರೆ ಚೊಚ್ಚಲ ಪ್ರಶಸ್ತಿ ಗೆಲುವಿನ ಇತಿಹಾಸ ನಿರ್ಮಿಸಲಿದೆ.
ಕರೊನಾ ಹಾವಳಿಯ ನಡುವೆ ಅರಬ್ ನಾಡಿಗೆ ಸ್ಥಳಾಂತರಗೊಂಡಿದ್ದ ಭಾರತದ ಶ್ರೀಮಂತ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಅನುಭವಿ ಆಟಗಾರರಿಂದ ಕೂಡಿರುವ ಮುಂಬೈ ಮತ್ತು ಯುವ ಆಟಗಾರರ ಶಕ್ತಿ ಹೊಂದಿರುವ ಡೆಲ್ಲಿ ತಂಡಗಳ ನಡುವೆ ಜಿದ್ದಾಜಿದ್ದಿನ ಕಾದಾಟ ಏರ್ಪಡುವ ನಿರೀಕ್ಷೆ ಇದೆ. ಫೈನಲ್‌ನಲ್ಲಿ ಆಡಲಿರುವ ಉಭಯ ತಂಡಗಳಿಗೂ ಮುಂಬೈ ಮೂಲದ ಆಟಗಾರರೇ ನಾಯಕರಾಗಿರುವುದು ವಿಶೇಷ. ರೋಹಿತ್ ಶರ್ಮ ಮುಂಬೈಗೆ 5ನೇ ಬಾರಿ ಗೆದ್ದುಕೊಡುವ ಹುರುಪಿನಲ್ಲಿದ್ದರೆ, ಶ್ರೇಯಸ್ ಅಯ್ಯರ್ ಡೆಲ್ಲಿ ತಂಡದ ಪರ ಚೊಚ್ಚಲ ಪ್ರಶಸ್ತಿ ಗೆಲುವಿನ ಕನಸಿನಲ್ಲಿದ್ದಾರೆ. ಆದರೆ ಡೆಲ್ಲಿ ವಿರುದ್ಧದ ಲೀಗ್ ಹಂತದ 2 ಮುಖಾಮುಖಿ, ಮೊದಲ ಕ್ವಾಲಿೈಯರ್‌ನಲ್ಲಿ ಜಯ ದಾಖಲಿಸಿರುವ ಮುಂಬೈ ಲೆಕ್ಕಾಚಾರದಲ್ಲಿ ಮೇಲುಗೈ ಹೊಂದಿದೆ.
* ಚೊಚ್ಚಲ ಪ್ರಶಸ್ತಿ ಮೇಲೆ ಡೆಲ್ಲಿ ಕಣ್ಣು
13 ವರ್ಷಗಳ ಲೀಗ್ ಇತಿಹಾಸದಲ್ಲಿ ಮೊದಲ ಬಾರಿಗೆ ಫೈನಲ್‌ಗೇರಿದ ಸಾಧನೆ ಮಾಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಟೂರ್ನಿಯ ಆರಂಭದಿಂದಲೂ ಪ್ರಶಸ್ತಿ ಫೇವರಿಟ್ ಎನಿಸಿಕೊಂಡಿದೆ. ಲೀಗ್ ಆರಂಭಿಕ ಹಂತದಲ್ಲಿ ಸ್ಥಿರ ನಿರ್ವಹಣೆ ಮೂಲಕ ಗಮನಸೆಳೆದಿದ್ದ ಡೆಲ್ಲಿ, ಬಳಿಕ ಒಂದು ಹಂತದಲ್ಲಿ ಸತತ 4 ಸೋಲುಗಳಿಂದ ಹೊರಬೀಳುವ ಆತಂಕ ಎದುರಿಸಿತು. ಜತೆಗೆ ಮೊದಲ ಕ್ವಾಲಿೈಯರ್‌ನಲ್ಲಿ ಮುಂಬೈ ತಂಡಕ್ಕೆ ಹೀನಾಯವಾಗಿ ಶರಣಾಗಿತ್ತು. ಎರಡನೇ ಕ್ವಾಲಿಫೈಯರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ಭರ್ಜರಿ ಜಯ ದಾಖಲಿಸುವ ಮೂಲಕ ಫೈನಲ್‌ಗೇರಿತು. ಸನ್‌ರೈಸರ್ಸ್ ಎದುರು ತಂಡದಲ್ಲಿ ಮಾಡಿಕೊಂಡ ಕೆಲ ಬದಲಾವಣೆಯಿಂದಾಗಿ ಡೆಲ್ಲಿ ಯಶ ಕಂಡಿತು. ಇದೀಗ ಅದೇ ಸಂಯೋಜನೆಯೊಂದಿಗೆ ಕಣಕ್ಕಿಳಿಯಲಿದೆ. ಶಿಖರ್ ಧವನ್ ಉತ್ತಮ ಫಾರ್ಮ್‌ಗೆ ಮರಳಿದರೆ, ಕಗಿಸೊ ರಬಾಡ ಮಾರಕ ದಾಳಿ ಮೂಲಕ ಗಮನಸೆಳೆಯುತ್ತಿದ್ದರೆ, ಮಾರ್ಕಸ್ ಸ್ಟೋಯಿನಿಸ್ ಆಲ್ರೌಂಡ್ ನಿರ್ವಹಣೆ ತಂಡಕ್ಕೆ ವರದಾನವಾಗಬಹುದು.
* 5ನೇ ಪ್ರಶಸ್ತಿ ಮೇಲೆ ಮುಂಬೈ ಕಣ್ಣು
ಟೂರ್ನಿಯಲ್ಲಿ ಇದುವರೆಗೂ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ತಂಡ 5ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಹಾಲಿ ಚಾಂಪಿಯನ್ ಪಟ್ಟ ಹಾಗೂ ಲೀಗ್ ಹಂತದಲ್ಲಿ ಅಗ್ರಸ್ಥಾನ ಹೊಂದಿದ್ದ ಮುಂಬೈ ಆತ್ಮವಿಶ್ವಾಸದಲ್ಲಿದೆ. ಡೆಲ್ಲಿ ವಿರುದ್ಧದ ಲೀಗ್ ಹಂತದ 2 ಮುಖಾಮುಖಿ, ಮೊದಲ ಕ್ವಾಲಿಫೈಯರ್‌ಲ್ಲಿ ಜಯ ದಾಖಲಿಸಿರುವ ಮುಂಬೈ ಲೆಕ್ಕಾಚಾರದಲ್ಲಿ ಮೇಲುಗೈ ಹೊಂದಿದೆ. ಬಲಿಷ್ಠ ಬ್ಯಾಟಿಂಗ್ ಹಾಗೂ ಬೌಲಿಂಗ್ ಪಡೆ ಹೊಂದಿರುವ ಮುಂಬೈ ಬಲಿಷ್ಠ ನಿರ್ವಹಣೆ ನೀಡಲು ಸಜ್ಜಾಗಿದೆ. ಮೊದಲ ಕ್ವಾಲಿಫೈಯರ್ ಪಂದ್ಯದ ವೇಳೆ ಗಾಯಗೊಂಡಿದ್ದ ಟ್ರೆಂಟ್ ಬೌಲ್ಟ್ ಚೇತರಿಕೆ ಕಂಡಿದ್ದು, ಫೈನಲ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಫಿಟ್ನೆಸ್ ಸಮಸ್ಯೆ ನಡುವೆಯೂ ರೋಹಿತ್ ಶರ್ಮ ತಂಡವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಪಾಂಡ್ಯ ಸಹೋದರರು, ಇಶಾನ್ ಕಿಶನ್, ಕೈರಾನ್ ಪೊಲ್ಲಾರ್ಡ್ ಮಧ್ಯಮ ಕ್ರಮಾಂಕದಲ್ಲಿ ಕೋಟೆಯಾದರೆ, ಜಸ್‌ಪ್ರೀತ್ ಬುಮ್ರಾ-ಟ್ರೆಂಟ್ ಬೌಲ್ಟ್ ಜೋಡಿ ಮಿಂಚಿನ ನಿರ್ವಹಣೆ ತೋರುತ್ತಿದೆ.
ಮುಂಬೈ ಇಂಡಿಯನ್ಸ್
ಬಲ: ಟೂರ್ನಿಯುದ್ದಕ್ಕೂ ಸ್ಥಿರ ನಿರ್ವಹಣೆ; 5 ಬಾರಿ ಫೈನಲ್‌ನಲ್ಲಿ ಆಡಿರುವ ಅನುಭವ; ಬಲಿಷ್ಠ ಬ್ಯಾಟಿಂಗ್-ಬೌಲಿಂಗ್ ವಿಭಾಗ.
ದೌರ್ಬಲ್ಯ: ನಾಯಕ ರೋಹಿತ್ ಶರ್ಮ ರನ್‌ಬರ; ಅತಿವಿಶ್ವಾಸ ಮುಳುವಾಗಬಹುದು; ಡೆಲ್ಲಿಗಿಂತ ದುರ್ಬಲ ಸ್ಪಿನ್ ಬೌಲಿಂಗ್ ವಿಭಾಗ.
ಟೀಮ್ ನ್ಯೂಸ್: ಮೊದಲ ಕ್ವಾಲಿಫೈಯರ್‌ನಲ್ಲಿ ಆಡಿದ ತಂಡವನ್ನೇ ಬಹುತೇಕ ಕಣಕ್ಕಿಳಿಸಲಿದೆ. ನಾಥನ್ ಕೌಲ್ಟರ್ ನಿಲ್ ಬದಲಿಗೆ ಜೇಮ್ಸ್ ಪ್ಯಾಟಿನ್‌ಸನ್ ಆಡಿದರೂ ಅಚ್ಚರಿ ಇಲ್ಲ. ಟ್ರೆಂಟ್ ಬೌಲ್ಟ್ ಗಾಯದ ಸಮಸ್ಯೆ ಎದುರಿಸಿದರೂ ಸೋಮವಾರ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದ್ದಾರೆ.
ಟಾಪರ್ಸ್: ಬ್ಯಾಟಿಂಗ್: ಇಶಾನ್ ಕಿಶನ್ (483), ಕ್ವಿಂಟನ್ ಡಿಕಾಕ್ (483), ಸೂರ್ಯಕುಮಾರ್ ಯಾದವ್ (461); ಬೌಲಿಂಗ್: ಜಸ್‌ಪ್ರೀತ್ ಬುಮ್ರಾ (27), ಟ್ರೆಂಟ್ ಬೌಲ್ಟ್ (22), ರಾಹುಲ್ ಚಹರ್ (15).
ಡೆಲ್ಲಿ ಕ್ಯಾಪಿಟಲ್ಸ್
ಬಲ: 13 ವರ್ಷಗಳಲ್ಲಿ ಮೊದಲ ಬಾರಿ ಫೈನಲ್‌ಗೇರಿದ ವಿಶ್ವಾಸ; ಧವನ್-ರಬಾಡ ಲಯಕ್ಕೆ ಮರಳಿದ್ದಾರೆ; ಆರಂಭಿಕ, ಆಲ್ರೌಂಡರ್ ಆಗಿ ಸ್ಟೋಯಿನಿಸ್ ಯಶಸ್ಸು.
ದೌರ್ಬಲ್ಯ: ಲೀಗ್ ಹಂತದ ಕೊನೆಯಲ್ಲಿ ಸತತ 4 ಸೋಲು; ಹಾಲಿ ಟೂರ್ನಿಯಲ್ಲಿ ಮುಂಬೈ ವಿರುದ್ಧ ಗೆದ್ದಿಲ್ಲ; ದಿಢೀರ್ ಕುಸಿತದ ಭೀತಿ.
ಟೀಮ್ ನ್ಯೂಸ್: ಮಾರ್ಕಸ್ ಸ್ಟೋಯಿನಿಸ್‌ರನ್ನು ಆರಂಭಿಕನಾಗಿ ಕಣಕ್ಕಿಳಿಸಿ ಯಶ ಕಂಡಿರುವ ತಂಡದಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷಿಸುವಂತಿಲ್ಲ. ಗೆಲುವಿನ ತಂಡ ಉಳಿಸಿಕೊಂಡರೆ ಕನ್ನಡಿಗ ಪ್ರವೀಣ್ ದುಬೆಗೆ ಫೈನಲ್‌ನಲ್ಲಿ ಆಡುವ ಅವಕಾಶ ಲಭಿಸಲಿದೆ.
ಟಾಪರ್ಸ್: ಬ್ಯಾಟಿಂಗ್: ಶಿಖರ್ ಧವನ್ (603), ಶ್ರೇಯಸ್ ಅಯ್ಯರ್ (454), ಮಾರ್ಕಸ್ ಸ್ಟೋಯಿನಿಸ್ (352); ಬೌಲಿಂಗ್: ಕಗಿಸೊ ರಬಾಡ (29), ಆನ್ರಿಚ್ ನೋರ್ಜೆ (20), ಆರ್. ಅಶ್ವಿನ್ (13).
ಪಂದ್ಯ ಆರಂಭ: ರಾತ್ರಿ 7.30ಕ್ಕೆ ನೇರ ಪ್ರಸಾರ : ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮುಖಾಮುಖಿ: 27, ಮುಂಬೈ ಇಂಡಿಯನ್ಸ್ : 15, ಡೆಲ್ಲಿ ಕ್ಯಾಪಿಟಲ್ಸ್: 12.