ಕ್ರೀಡೆ

ಡೆಲ್ಲಿ ಕ್ಯಾಪಿಟಲ್ಸ್-ಆರ್‌ಸಿಬಿ ನಿರ್ಣಾಯಕ ಹಣಾಹಣಿ ,  ಕ್ವಾರ್ಟರ್ ಫೈನಲ್ ಮಾದರಿ ಕಾದಾಟ

ಅಬುಧಾಬಿ: ಅಂಕಪಟ್ಟಿಯಲ್ಲಿ 2ನೇ ಸ್ಥಾನದೊಂದಿಗೆ ಪ್ಲೇಆಫ್ ಹಂತಕ್ಕೇರುವ ಛಲದಲ್ಲಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಐಪಿಎಲ್-13ರ ನಿರ್ಣಾಯಕ ಹಣಾಹಣಿಯಲ್ಲಿ ಎದುರಾಗುತ್ತಿವೆ. ಶೇಖ್ ಜಯೆದ್ ಸ್ಟೇಡಿಯಂನಲ್ಲಿ ಸೋಮವಾರ ನಡೆಯಲಿರುವ ಪಂದ್ಯ ಉಭಯ ತಂಡಗಳ ಪಾಲಿಗೆ ಮಹತ್ವ ಪಡೆದಿದ್ದು, ‘ಕ್ವಾರ್ಟರ್ ಫೈನಲ್’ ಮಾದರಿಯ ಕದನದಂತಿದೆ. ಗೆದ್ದ ತಂಡ ನ. 5ರಂದು ಮುಂಬೈ ಇಂಡಿಯನ್ಸ್ ವಿರುದ್ಧ ‘ಸೆಮಿಫೈನಲ್’ ಮಾದರಿಯ ಕ್ವಾಲಿಫೈಯರ್-1 ಪಂದ್ಯದಲ್ಲಿ ಆಡುವ ಅವಕಾಶ ಪಡೆಯಲಿದೆ. ಈ ಪಂದ್ಯದಲ್ಲಿ ಸೋತ ತಂಡಕ್ಕೂ ಪ್ಲೇಆಫ್ ಹಂತಕ್ಕೇರುವ ಅವಕಾಶ ಜೀವಂತವಾಗಿರಲಿದೆ. ಆದರೆ ರನ್‌ರೇಟ್ ಲೆಕ್ಕಾಚಾರದಲ್ಲಿ ರಾಜಸ್ಥಾನ/ಕೆಕೆಆರ್ ಅಥವಾ ಸನ್‌ರೈಸರ್ಸ್‌ ತಂಡವನ್ನು ಹಿಂದಿಕ್ಕುವ ಅಗತ್ಯ ಎದುರಾಗಲಿದೆ. ಆರ್‌ಸಿಬಿಗೆ ಈ ಪಂದ್ಯದಲ್ಲಿ, ಡೆಲ್ಲಿ ತಂಡದ ಎದುರು ಹಿಂದಿನ ಪಂದ್ಯದಲ್ಲಿ ಅನುಭವಿಸಿದ ಸೋಲಿಗೂ ಸೇಡು ತೀರಿಸಿಕೊಳ್ಳುವ ಅವಕಾಶವಿದೆ. ಡೆಲ್ಲಿ ಸತತ 4 ಸೋಲು ಕಂಡಿದ್ದರೆ, ಆರ್‌ಸಿಬಿ ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದೆ. ಪಂದ್ಯದಲ್ಲಿ ಜಯ ದಾಖಲಿಸಿದ ತಂಡ 2ನೇ ತಂಡವಾಗಿ ಪ್ಲೇಆಫ್ ಖಚಿತಪಡಿಸಿಕೊಂಡರೆ, ಸೋತ ತಂಡ ಇತರ ಪಂದ್ಯಗಳ ಫಲಿತಾಂಶ ಎದುರು ನೋಡಬೇಕಾಗಿದೆ.

 ಡೆಲ್ಲಿಗೆ ಬೇಕಿದೆ ಉತ್ತಮ ಆರಂಭ

ಟೂರ್ನಿ ಆರಂಭಿಕ ಹಂತದಲ್ಲಿ ಭರ್ಜರಿ ನಿರ್ವಹಣೆ ಮೂಲಕ ಗಮನಸೆಳೆದಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಲೀಗ್ ಸಾಗುತ್ತಿದ್ದಂತೆ ಅಸ್ಥಿರ ಪ್ರದರ್ಶನದಿಂದ ಕುಗ್ಗಿದೆ. ಪ್ರಮುಖವಾಗಿ ಉತ್ತಮ ಆರಂಭ ದಕ್ಕಿಸಿಕೊಳ್ಳಲು ಡೆಲ್ಲಿ ವಿಫಲವಾಗುತ್ತಿದೆ. ಶಿಖರ್ ಧವನ್ ಜತೆಗೆ ಪೃಥ್ವಿ ಷಾ-ಅಜಿಂಕ್ಯ ರಹಾನೆ ಇಬ್ಬರೂ ಪ್ರಯೋಜನವಾಗಿಲ್ಲ. ಸತತ 2 ಶತಕ ಸಿಡಿಸಿದ ಬಳಿಕ ಧವನ್ ಸತತ 2 ಶೂನ್ಯ ಸುತ್ತಿ ನಿರಾಸೆ ಮೂಡಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಶಿಖರ್ ಧವನ್, ಶ್ರೇಯಸ್ ಸ್ಫೋಟಿಸಬೇಕಿದೆ. ಜತೆಗೆ ಬೌಲಿಂಗ್ ವಿಭಾಗದಲ್ಲಿ ರಬಾಡ, ನೋರ್ಜೆ ಕೈಕೊಡುತ್ತಿದ್ದಾರೆ.

ಆರ್‌ಸಿಬಿಗೆ ತಲೆನೋವಾದ ಬ್ಯಾಟಿಂಗ್

ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿರುವ ಅರ್‌ಸಿಬಿ ತಂಡಕ್ಕೆ ಬ್ಯಾಟಿಂಗ್ ವಿಭಾಗವೇ ದೊಡ್ಡ ತಲೆನೋವಾಗಿದೆ. ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ನಾಯಕ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್‌ ಮಧ್ಯಮ ಕ್ರಮಾಂಕದಲ್ಲಿ ರನ್ ಗಳಿಸುತ್ತಿಲ್ಲ. ಆರಂಭಿಕ ಹಂತದಲ್ಲಿ ಪಡಿಕಲ್ ಸಿಡಿಯಬೇಕಿದೆ. ಕ್ರಿಸ್ ಮಾರಿಸ್, ಗುರುಕೀರತ್ ಮಾನ್ ಸಿಂಗ್ ನಿಸ್ತೇಜ ನಿರ್ವಹಣೆ ಮುಂದುವರಿಸಿದ್ದಾರೆ. ಬೌಲರ್‌ಗಳು ಎದುರಾಳಿ ತಂಡಕ್ಕೆ ಕಡಿವಾಣ ಹಾಕಬೇಕಾದರೆ, ಬ್ಯಾಟ್ಸ್‌ಮನ್‌ಗಳಿಂದ ಅಗತ್ಯ ಸಾಥ್ ಆರ್‌ಸಿಬಿಗೆ ಅಗತ್ಯವಾಗಿದೆ.

ಟೀಮ್ ನ್ಯೂಸ್:

ಡೆಲ್ಲಿ ಕ್ಯಾಪಿಟಲ್ಸ್: ವೈಫಲ್ಯ ಮುಂದುವರಿಸಿರುವ ಪೃಥ್ವಿ ಷಾ, ಹರ್ಷಲ್ ಪಟೇಲ್ ಬದಲಿಗೆ ಅಜಿಂಕ್ಯ ರಹಾನೆ, ಅಕ್ಷರ್ ಪಟೇಲ್ ತಂಡಕ್ಕೆ ವಾಪಸಾಗಬಹುದು.

ಸಂಭಾವ್ಯ ತಂಡ: ಪೃಥ್ವಿ ಷಾ/ಅಜಿಂಕ್ಯ ರಹಾನೆ, ಶಿಖರ್ ಧವನ್, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್ (ವಿಕೀ), ಮಾರ್ಕಸ್ ಸ್ಟೋಯಿನಿಸ್, ಶಿಮ್ರೋನ್ ಹೆಟ್ಮೆಯರ್, ಹರ್ಷಲ್ ಪಟೇಲ್/ಅಕ್ಷರ್ ಪಟೇಲ್, ಆರ್.ಅಶ್ವಿನ್, ಪ್ರವೀಣ್ ದುಬೆ, ಕಗಿಸೊ ರಬಾಡ, ಅನ್ರಿಚ್ ನೋರ್ಜೆ.

ಕಳೆದ ಪಂದ್ಯ: ಮುಂಬೈ ಇಂಡಿಯನ್ಸ್ ಎದುರು 9 ವಿಕೆಟ್ ಸೋಲು

ಆರ್‌ಸಿಬಿ:

ಆರಂಭಿಕ ಬ್ಯಾಟ್ಸ್‌ಮನ್ ಆರನ್ ಫಿಂಚ್ ಹಾಗೂ ಶಿವಂ ದುಬೆ ತಂಡಕ್ಕೆ ವಾಪಸಾಗಬಹುದು. ಈ ಜೋಡಿ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡರೆ ಜೋಶ್ ಫಿಲಿಪ್ ಹಾಗೂ ಗುರುಕೀರತ್ ಮಾನ್ ಸಿಂಗ್ ಹೊರಗುಳಿಯಲಿದ್ದಾರೆ.

ಸಂಭಾವ್ಯ ತಂಡ: ಜೋಶ್ ಫಿಲಿಪ್/ಆರನ್ ಫಿಂಚ್, ದೇವದತ್ ಪಡಿಕಲ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್‌ (ವಿಕೀ), ವಾಷಿಂಗ್ಟನ್ ಸುಂದರ್, ಗುರುಕೀರತ್ ಮಾನ್ ಸಿಂಗ್/ಶಿವಂ ದುಬೆ, ಕ್ರಿಸ್ ಮಾರಿಸ್, ಇಸುರು ಉದಾನ, ಮೊಹಮದ್ ಸಿರಾಜ್, ನವದೀಪ್ ಸೈನಿ, ಯಜುವೇಂದ್ರ ಚಾಹಲ್. 

ಕಳೆದ ಪಂದ್ಯ: ಸನ್‌ರೈಸರ್ಸ್‌ ಎದುರು 5 ವಿಕೆಟ್ ಸೋಲು

ಪಂದ್ಯ ಆರಂಭ : ರಾತ್ರಿ 7.30ಕ್ಕೆ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಮುಖಾಮುಖಿ: 24, ಡೆಲ್ಲಿ ಕ್ಯಾಪಿಟಲ್ಸ್: 9, ಆರ್‌ಸಿಬಿ: 14, ರದ್ದು: 1