ಭೋಪಾಲ್: ಆತಿಥೇಯ ಭಾರತ ತಂಡ ಮಹಿಳೆಯರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಸತತ 3ನೇ ಮತ್ತು ಒಟ್ಟಾರೆ 4ನೇ ಬಾರಿ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದೆ. ಸಲೀಮಾ ಟೆಟೆ ಪಡೆ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಒಲಿಂಪಿಕ್ಸ್ ಮತ್ತು ಏಷ್ಯನ್ ಗೇಮ್ಸ್ ರಜತ ಪದಕ ವಿಜೇತ ಚೀನಾ ವಿರುದ್ಧ 3-1 ಗೋಲುಗಳಿಂದ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಭಾರತದ ಮಹಿಳೆಯರು ಏಷ್ಯನ್ ಗೇಮ್ಸ್ ಸ್ವರ್ಣ ಪದಕ ಸಾಧನೆಯ ಬಳಿಕ ಮತ್ತೊಂದು ಮೈಲಿಗಲ್ಲು ನೆಟ್ಟಂತಾಗಿದೆ. ಇತ್ತೀಚೆಗೆ ಪಂಜಾಬ್ನಲ್ಲಿ ನಡೆದ ಪುರುಷರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲೂ ಭಾರತ ಚಾಂಪಿಯನ್ ಪಟ್ಟವೇರಿತ್ತು.
ಬರ್ಖೇಡ ನಾಥು ಅಂತಾರಾಷ್ಟ್ರೀಯ ಕ್ರೀಡಾ ಸಂಕೀರ್ಣದಲ್ಲಿ ನಡೆದ ಪ್ರಶಸ್ತಿ ಕಾದಾಟದಲ್ಲಿ ದೀಪಿಕಾ (38, 43ನೇ ನಿಮಿಷ) ಅವಳಿ ಗೋಲು ಸಿಡಿಸುವ ಮೂಲಕ ಭಾರತದ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದರು.
ಭಾರತ ತಂಡ ಪಂದ್ಯದ ಮೊದಲಾರ್ಧದಲ್ಲಿ 0-1 ಅಂತರದಿಂದ ಹಿನ್ನಡೆಯಲ್ಲಿತ್ತು. ಯುಜುನ್ ಚೆನ್ 25ನೇ ನಿಮಿಷದಲ್ಲಿ ಸಿಡಿಸಿದ ಗೋಲಿನ ಬಲದಿಂದ ಚೀನಾ ಆರಂಭಿಕ ಮುನ್ನಡೆ ಸಾಧಿಸಿತು. ಬಳಿಕ ದ್ವೀತಿಯಾರ್ಧದಲ್ಲಿ ದೀಪಿಕಾ ಭಾರತಕ್ಕೆ ಸಮಬಲದ ಗೋಲು ತಂದುಕೊಟ್ಟರು. 42ನೇ ನಿಮಿಷದಲ್ಲಿ ಇಶಿಕಾ ಭಾರತಕ್ಕೆ ಪಂದ್ಯದಲ್ಲಿ ಮೊದಲ ಬಾರಿ ಮುನ್ನಡೆ ತಂದುಕೊಟ್ಟರೆ, ದೀಪಿಕಾ ಮರುನಿಮಿಷದಲ್ಲೇ ಮತ್ತೊಂದು ಗೋಲು ಸಿಡಿಸಿ ಮುನ್ನಡೆಯನ್ನು ಹಿಗ್ಗಿಸಿದರು. ಭಾರತ 3ನೇ ಕ್ವಾರ್ಟರ್ನಲ್ಲಿ 6 ನಿಮಿಷಗಳ ಅಂತರದಲ್ಲಿ 3 ಗೋಲು ಸಿಡಿಸುವ ಮೂಲಕ ಚೀನಾಗೆ ದಿಟ್ಟ ತಿರುಗೇಟು ನೀಡಿತು.
ಭಾರತ ತಂಡ ಟೂರ್ನಿಯಲ್ಲಿ ಆಡಿದ ಎಲ್ಲ 7 ಪಂದ್ಯಗಳಲ್ಲಿ ಗೆದ್ದು ಅಜೇಯವಾಗಿ ಪ್ರಶಸ್ತಿ ಗೆದ್ದುಕೊಂಡ ಸಾಧನೆ ಮಾಡಿದೆ. ಭಾರತದ ಮಹಿಳೆಯರು ಇತ್ತೀಚೆಗಷ್ಟೇ ವಿಶ್ವ ರ್ಯಾಂಕಿಂಗ್ನಲ್ಲಿ ಇದುವರೆಗಿನ ಅತ್ಯುನ್ನತ 4ನೇ ಸ್ಥಾನಕ್ಕೇರಿ ಹೊಸ ಇತಿಹಾಸ ಬರೆದಿದ್ದರು.
ಭಾರತ ಹಾಲಿ ವರ್ಷ ಏಷ್ಯನ್ ಗೇಮ್ಸ್ ಫೈನಲ್ನಲ್ಲೂ ಚೀನಾಗೆ 1-0 ಅಂತರದಿಂದ ಸೋಲುಣಿಸಿತ್ತು. ಈ ಮೂಲಕ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ಗೂ ನೇರಅರ್ಹತೆ ಸಂಪಾದಿಸಿತ್ತು.
ಭಾರತ ತಂಡ ಟೂರ್ನಿಯ ಇತಿಹಾಸದಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಗೆದ್ದ ಮೊದಲ ತಂಡವೆನಿಸಿತು. ಇದಕ್ಕೆ ಮುನ್ನ ದಕ್ಷಿಣ ಕೊರಿಯಾ 2010, 2011ರಲ್ಲಿ ಸತತ 2 ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿದ್ದೇ ಗರಿಷ್ಠವೆನಿಸಿತ್ತು. ಭಾರತ ಟೂರ್ನಿಯಲ್ಲಿ 4 ಬಾರಿ ಪ್ರಶಸ್ತಿ ಗೆದ್ದ ಮೊದಲ ತಂಡವೆನಿಸಿತು. ಭಾರತ ಈ ಮುನ್ನ 2016, 2023, 2024ರಲ್ಲೂ ಚಾಂಪಿಯನ್ ಪಟ್ಟಕ್ಕೇರಿತ್ತು. ದಕ್ಷಿಣ ಕೊರಿಯಾ 3 ಬಾರಿ ಪ್ರಶಸ್ತಿ ಗೆದ್ದಿರುವುದು ನಂತರದ ಗರಿಷ್ಠವಾಗಿದೆ.
ಜಪಾನ್ಗೆ ಕಂಚು: ಮಲೇಷ್ಯಾವನ್ನು 5-2 ಅಂತರದಿಂದ ಮಣಿಸಿದ ಜಪಾನ್ ತಂಡ ಟೂರ್ನಿಯ ಕಂಚಿನ ಪದಕಕ್ಕೆ ಕೊರಳೊಡ್ಡಿತು.