ಕ್ರೀಡೆ

ಪ್ರೀತಿಯ ವೈರಿಗಳೇ ತಾಳ್ಮೆ ಇರಲಿ…ಕುಸ್ತಿಯಲ್ಲಿ ಫೈನಲ್​ಗೆ ಲಗ್ಗೆಯಿಟ್ಟ ಬೆನ್ನಲ್ಲೇ ವಿನೇಶ್​ ಹಳೆಯ ಪೋಸ್ಟ್​ ವೈರಲ್​

ನವದೆಹಲಿ: ಆಟದ ಮೇಲೆ ಗಮನ ಹರಿಸದೆ ರಾಜಕೀಯ ಮಾಡುತ್ತಿದ್ದಾಳೆ ಎಂದು ಟೀಕೆ ಮಾಡಿದವರಿಗೆ ಕುಸ್ತಿಪಟು ವಿನೇಶ್​ ಪೋಗಟ್​ ಸರಿಯಾದ ತಿರುಗೇಟು ನೀಡಿದ್ದಾರೆ. ಪ್ಯಾರಿಸ್​ ಒಲಿಂಪಕ್ಸ್​ನಲ್ಲಿ ಮಹಿಳೆಯರ 50 ಕೆಜಿ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್​ಗೆ ಲಗ್ಗೆ ಇಡುವ ಮೂಲಕ ವಿನೇಶ್​ ಇತಿಹಾಸ ಬರೆದಿದ್ದಾರೆ. ಒಲಿಂಪಿಕ್ಸ್​ ಇತಿಹಾಸದಲ್ಲೇ ಭಾರತೀಯಳೊಬ್ಬಳು ಮಹಿಳೆಯರ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್​ ತಲುಪಿದ್ದು ಇದೇ ಮೊದಲು.

ವಿನೇಶ್​ ಅವರ ಈ ಸಾಧನೆಯ ಹಿಂದಿನ ಹಾದಿ ಮಾತ್ರ ಸುಲಭವಾಗಿರಲಿಲ್ಲ. ಸಾಕಷ್ಟು ಟೀಕೆಗಳನ್ನು ಮತ್ತು ಕೆಟ್ಟ ಬೈಗುಳಗಳನ್ನು ಎದುರಿಸಿದ್ದಾರೆ. ನಿಮಗೆ ಗೊತ್ತಿರಬಹುದು ಕಳೆದ ವರ್ಷದ ಭಾರತ ಕುಸ್ತಿ ಒಕ್ಕೂಟದಲ್ಲಿ (ಡಬ್ಲ್ಯುಎಫ್​ಐ) ದೊಡ್ಡ ಹೋರಾಟವೇ ನಡೆಯಿತು. ಈ ಸಂದರ್ಭದಲ್ಲಿ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿದ್ದ ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ವಿರುದ್ಧ ಲೈಂಗಿಕ ಕಿರುಕುಳದಂತಹ ಗಂಭೀರ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಸರ್ಕಾರ ಗಮನ ಹರಿಸದೇ ಇದ್ದಾಗ ವಿನೇಶ್​ ಪೋಗಟ್​, ಭಜರಂಗ್​ ಪೂನಿಯಾ ಮತ್ತು ಸಾಕ್ಷಿ ಮಲಿಕ್​ ಅವರು ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ವಿರುದ್ಧ ಮುಂಚೂಣಿಯಲ್ಲಿ ನಿಂತು ಇತರೆ ಕುಸ್ತಿಪಟುಗಳ ಜತೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ವಿನೇಶ್​ ವಿರುದ್ಧ ಸಾಕಷ್ಟು ಮಂದಿ ನೆಗಿಟಿವ್​ ಆಗಿ ಮಾತನಾಡಿದ್ದರು. ಹೊಸ ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿ ಪೊಲೀಸರ ಜತೆಗೂ ವಿನೇಶ್​ ಸಂಘರ್ಷ ನಡೆಸಿದ್ದರು. ನಂತರ ಖೇಲ್​ರತ್ನ, ಅರ್ಜುನ ಪ್ರಶಸ್ತಿಗಳನ್ನು ಸರ್ಕಾರಕ್ಕೆ ಮರಳಿಸಲು ಯತ್ನಿಸಿ, ರಾಷ್ಟ್ರಪತಿ ಭವನದ ಎದುರು ಅವನ್ನು ಇಟ್ಟುಹೋಗಿದ್ದರು. ಈ ವಿವಾದ ತಣ್ಣಗಾದ ಬಳಿಕ ಕುಸ್ತಿ ಅಖಾಡಕ್ಕೆ ಮರಳಿದ ವಿನೇಶ್ ಇಲ್ಲೂ ಪಟ್ಟುಬಿಟ್ಟುಕೊಡದೆ, ಪದಕ ಬೇಟೆಯಾಡಿರುವುದು ವಿಶೇಷವೆನಿಸಿದೆ. ಇದರ ನಡುವೆ ವಿನೇಶ್​ ಅವರ ಹಳೆಯ ಪೋಸ್ಟ್​ ಒಂದು ಇದೀಗ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಪ್ರೀತಿಯ ವೈರಿಗಳೇ, ನಿಮ್ಮನ್ನು ಹುಚ್ಚರಾಗಿಸಲು ನನ್ನ ಬಳಿ ಇನ್ನೂ ತುಂಬಾ ಇದೆ. ತಾಳ್ಮೆಯಿಂದ ಕಾಯಿರಿ ಎಂದು ಇದೇ ವರ್ಷ ಮಾರ್ಚ್​ 12ರಂದು ತಮ್ಮ ಎಕ್ಸ್​ ಖಾತೆಯಲ್ಲಿ ವಿನೇಶ್​ ಪೋಗಟ್​ ಬರೆದುಕೊಂಡಿದ್ದರು. ಇದೀಗ ವಿನೇಶ್​ ಕುಸ್ತಿಯಲ್ಲಿ ಫೈನಲ್​ ತಲುಪಿದ ಬಳಿಕ ಈ ಪೋಸ್ಟ್​ ಮತ್ತೆ ವೈರಲ್​ ಆಗುತ್ತಿದೆ.

ಅಂದಹಾಗೆ ಹರಿಯಾಣದ 29 ವರ್ಷದ ವಿನೇಶ್ ಪೋಗಟ್ ಮಂಗಳವಾರ (ಆ.6) ರಾತ್ರಿ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಯುಸ್ನಿಲಿಸ್ ಗುಜ್ಮನ್ ಲೋಪೆಜ್ ವಿರುದ್ಧ 5-0 ಅಂಕಗಳಿಂದ ಸುಲಭ ಗೆಲುವು ದಾಖಲಿಸಿ ಫೈನಲ್​ಗೆ ಮುನ್ನಡೆದರು. ಸ್ವರ್ಣ ಪದಕದ ಹೋರಾಟ ಬುಧವಾರ ರಾತ್ರಿ ನಡೆಯಲಿದೆ. ವಿನೇಶ್​ಗೆ ಸ್ಪರ್ಧಿಸಿದ 3ನೇ ಒಲಿಂಪಿಕ್ಸ್​ನಲ್ಲಿ ಚೊಚ್ಚಲ ಪದಕ ಒಲಿದಿದೆ. ಈ ಮುನ್ನ 2016ರ ರಿಯೋ ಒಲಿಂಪಿಕ್ಸ್​ನಲ್ಲಿ 48 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕಣಕ್ಕಿಳಿದ ವಿನೇಶ್, ಕ್ವಾರ್ಟರ್​ಫೈನಲ್​ನಲ್ಲಿ ಗಾಯಕ್ಕೆ ತುತ್ತಾಗಿ ಪಂದ್ಯವನ್ನು ಅರ್ಧಕ್ಕೆ ತ್ಯಜಿಸಿದ್ದರು. 2021ರ ಟೋಕಿಯೊ ಗೇಮ್ಸ್​ನಲ್ಲಿ 53 ಕೆಜಿ ವಿಭಾಗದಲ್ಲಿ ಆಡಿದಾಗಲೂ ಎಂಟರ ಘಟ್ಟದಲ್ಲಿ ವಿನೇಶ್ ಪದಕದ ಕಸನು ಭಗ್ನಗೊಂಡಿತು. ಪ್ಯಾರಿಸ್​ನಲ್ಲಿ ಬೆಳ್ಳಿ ಅಥವಾ ಚಿನ್ನ ಗೆಲ್ಲುವ ಅವಕಾಶ ಹೊಂದಿರುವ ವಿನೇಶ್ ಪದಕ ಗೆದ್ದ ಎರಡನೇ ಭಾರತೀಯ ಮಹಿಳೆ ಎನಿಸಲಿದ್ದಾರೆ. 2016ರ ರಿಯೋ ಒಲಿಂಪಿಕ್ಸ್​ನಲ್ಲಿ ಸಾಕ್ಷಿ ಮಲಿಕ್ ಕಂಚು ಜಯಿಸಿರುವುದು ಇದುವರೆಗಿನ ಅತ್ಯುತ್ತಮ ಸಾಧನೆ ಎನಿಸಿದೆ.

ವಿನೇಶ್​ ಅವರು ಕ್ವಾರ್ಟರ್​ಫೈನಲ್​ನಲ್ಲಿ 7-5 ಅಂತರದಿಂದ ಯೂಕ್ರೇನ್​ನ ಒಕ್ಸಾನ ಲಿವಾಚ್ ಎದುರು ಹೋರಾಟಯುತ ಗೆಲುವು ಒಲಿಸಿಕೊಂಡರು. ವಿನೇಶ್ ತನ್ನ ಪರಿಣಾಮಕಾರಿ ಆಟದೊಂದಿಗೆ ಕ್ವಾರ್ಟರ್​ಫೈನಲ್​ನಲ್ಲಿ ಪ್ರಾಬಲ್ಯ ಸಾಧಿಸಿದರು. ಆದರೆ ಪಂದ್ಯದ ಅಂತಿಮ 45 ಸೆಕೆಂಡ್​ಗಳಲ್ಲಿ ಆಕ್ರಮಣಕಾರಿ ಆಟಕ್ಕಿಳಿದ ಒಕ್ಸಾನ ಎದುರು ಉತ್ತಮ ಪ್ರದರ್ಶನ ನೀಡಿದ ವಿನೇಶ್, ಅಂತಿಮ 20 ಸೆಕೆಂಡುಗಳಲ್ಲಿ ನಾಲ್ಕು ಪಾಯಿಂಟ್ ಗಳಿಸಿ ಗೆಲುವಿನ ಅಂತರ ಹಿಗ್ಗಿಸಿಕೊಂಡರು.

ಎಂಟರ ಘಟ್ಟಕ್ಕೆ ಮುನ್ನ ನಡೆದ ಪ್ರಿ ಕ್ವಾರ್ಟರ್​ಫೈನಲ್​ನಲ್ಲಿ ವಿನೇಶ್ 3-2ರಿಂದ ನಾಲ್ಕು ಬಾರಿಯ ವಿಶ್ವ ಚಾಂಪಿಯನ್, ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಜಪಾನ್​ನ ಯುಯಿ ಸುಸಾಕಿಗೆ ಶಾಕ್ ನೀಡಿದರು. ಇದರೊಂದಿಗೆ ಜಪಾನ್ ಕುಸ್ತಿಪಟುಗಳನ್ನು ಹೊರತುಪಡಿಸಿ ಸುಸಾಕಿಯನ್ನು ಮಣಿಸಿದ ಮೊದಲ ಅಂತಾರಾಷ್ಟ್ರೀಯ ಕುಸ್ತಿಪಟು ಎನಿಸಿದರು. ಟೋಕಿಯೊ ಒಲಿಂಪಿಕ್ಸ್​ನಲ್ಲಿ ಎದುರಾಳಿಗೆ ಕನಿಷ್ಠ ಒಂದು ಅಂಕವೂ ನೀಡದೆ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದ ಸುಸಾಕಿ ಮೊದಲ ಸುತ್ತಿನಲ್ಲಿಯೇ ಆಘಾತ ಕಂಡರು. 25 ವರ್ಷದ ಸುಸಾಕಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇದುವರೆಗೆ 82-0 ಗೆಲುವು-ಸೋಲಿನ ದಾಖಲೆ ಹೊಂದಿದ್ದರು. ಪಂದ್ಯದ ಅಂತಿಮ 17 ಸೆಕೆಂಡ್​ಗಳಲ್ಲಿ ಕಾರ್ಯತಂತ್ರ ಬದಲಾಯಿಸಿದ ವಿನೇಶ್, ಐದು ಸೆಕೆಂಡ್​ಗಳ ಅಂತರದಲ್ಲಿ 3 ಪಾಯಿಂಟ್ ಗಳಿಸಿ ಹಾಲಿ ಚಾಂಪಿಯನ್ ಅನ್ನು ಕೂಟದಿಂದ ಹೊರದಬ್ಬಿದರು. (ಏಜೆನ್ಸೀಸ್​)