ಕ್ರೀಡೆ

ಮಹಿಳೆಯರ ಏಕದಿನ ವಿಶ್ವಕಪ್: ಆತಿಥೇಯ ಭಾರತಕ್ಕೆ ಆಘಾತಕಾರಿ ಸೋಲುಣಿಸಿದ ದಕ್ಷಿಣ ಆಫ್ರಿಕಾ

ವಿಶಾಖಪಟ್ಟಣ: ವಿಕೆಟ್​ ಕೀಪರ್​-ಬ್ಯಾಟುಗಾರ್ತಿ ರಿಚಾ ಘೋಷ್​ (94 ರನ್​, 77 ಎಸೆತ, 11 ಬೌಂಡರಿ, 4 ಸಿಕ್ಸರ್​) ದಿಟ್ಟ ಬ್ಯಾಟಿಂಗ್​ ನಡುವೆಯೂ ಆತಿಥೇಯ ಭಾರತ ತಂಡ ಐಸಿಸಿ ಮಹಿಳೆಯರ ಏಕದಿನ ವಿಶ್ವಕಪ್​ನ ತನ್ನ ಮೂರನೇ ಲೀಗ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು 3 ವಿಕೆಟ್​ಗಳಿಂದ ಸೋಲಿನ ಆಘಾತ ಎದುರಿಸಿದೆ. ಹರ್ಮಾನ್​ಪ್ರೀತ್​ ಕೌರ್​ ಬಳಗಕ್ಕೆ ಇದು ಟೂರ್ನಿಯಲ್ಲಿ ಮೊದಲ ಸೋಲಾಗಿದೆ.

ವೈಎಸ್​ಆರ್​ ರೆಡ್ಡಿ ಕ್ರೀಡಾಂಗಣದಲ್ಲಿ ಗುರುವಾರ ಮಳೆಯಿಂದ ಒಂದು ಗಂಟೆ ತಡವಾಗಿ ಆರಂಭಗೊಂಡ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಭಾರತ ತಂಡಕ್ಕೆ ಅಗ್ರ ಕ್ರಮಾಂಕ ಕೈಕೊಟ್ಟಿತು. ಆಗ ರಿಚಾ ಘೋಷ್​ ಹಾಗೂ ಸ್ನೇಹಾ ರಾಣಾ (33) ನಡೆಸಿದ ಉಪಯುಕ್ತ ಜತೆಯಾಟದ ನಡುವೆ ಭಾರತ 49.4 ಓವರ್​ಗಳಲ್ಲಿ 251 ರನ್​ಗಳಿಗೆ ಆಲೌಟ್​ ಆಯಿತು. ಕೊನೇ 9 ಓವರ್​ಗಳಲ್ಲಿ ಭಾರತ 97 ರನ್​ ಕಲೆಹಾಕಿತು. ಪ್ರತಿಯಾಗಿ ಹರಿಣಗಳಿಗೂ ಆರಂಭಿಕ ಆಘಾತ ನೀಡಿದ ಭಾರತ, 81 ರನ್​ಗಳಿಗೆ 5 ವಿಕೆಟ್​ ಕಬಳಿಸಿತು. ಆದರೆ ನಾಯಕಿ ಲೌರಾ ವೊಲ್ವಾರ್ಡ್​ (70 ರನ್​, 111 ಎಸೆತ, 8 ಬೌಂಡರಿ), ಕ್ಲೋಯ್​ ಟ್ರಯಾನ್​ (49 ರನ್​, 66 ಎಸೆತ, 5 ಬೌಂಡರಿ), ನಾಡಿನ್​ ಡಿ ಕ್ಲರ್ಕ್​ (84*ರನ್​, 54 ಎಸೆತ, 8 ಬೌಂಡರಿ, 5 ಸಿಕ್ಸರ್​) ಹೋರಾಟದಿಂದ ಗೆಲುವಿನತ್ತ ಸಾಗಿದ ದ. ಆಫ್ರಿಕಾ, 48.5 ಓವರ್​ಗಳಲ್ಲಿ 7 ವಿಕೆಟ್​ಗೆ 252 ರನ್​ ಗಳಿಸಿ, ಆತಿಥೇಯರಿಗೆ ಶಾಕ್​ ನೀಡಿತು.

ಭಾರತ: 49.4 ಓವರ್​ಗಳಲ್ಲಿ 251 (ಪ್ರತಿಕಾ ರಾವಲ್​ 37, ಸ್ಮ$ತಿ 23, ಹರ್ಲೀನ್​ 13, ಹರ್ಮಾನ್​ಪ್ರೀತ್​ 9, ಜೆಮೀಮಾ 0, ದೀಪ್ತಿ 4, ಅಮನ್​ಜೋತ್​ 13, ರಿಚಾ ಘೋಷ್​ 94, ಸ್ನೇಹಾ ರಾಣಾ 33, ಶ್ರೀಚರಣಿ 0, ಕ್ರಾಂತಿ ಗೌಡ್​ 0*, ಕ್ಲೋಯ್​ ಟ್ರಯಾನ್​ 32ಕ್ಕೆ 3, ಮ್ಲಾಬಾ 46ಕ್ಕೆ 2, ಕಾಪ್​ 45ಕ್ಕೆ 2).

ದಕ್ಷಿಣ ಆಫ್ರಿಕಾ: 48.5 ಓವರ್​ಗಳಲ್ಲಿ 7 ವಿಕೆಟ್​ಗೆ 252 (ತಜ್ಮಿನ್​ 0, ಲೌರಾ ವೋಲ್ವಾರ್ಡ್​ 70, ಲುಜ್​ 5, ಮಾರಿಜಾನ್ನೆ 20, ಅನ್ನೆಕೆ 1, ಸಿನಾಲೊ 14, ಟ್ರಯಾನ್​ 49, ಡಿ ಕ್ಲರ್ಕ್​ 84*, ಕ್ರಾಂತಿ ಗೌಡ್​ 59ಕ್ಕೆ 2, ಸ್ನೇಹಾ 47ಕ್ಕೆ 2, ದೀಪ್ತಿ ಶರ್ಮ 54ಕ್ಕೆ 1).