ನವದೆಹಲಿ: ವಿಕೆಟ್ ಕೀಪರ್-ಬ್ಯಾಟರ್ ರಿಚಾ ಘೋಷ್ (51 ರನ್, 29 ಎಸೆತ, 4 ಬೌಂಡರಿ, 3 ಸಿಕ್ಸರ್) ಕೊನೇ ಎಸೆತದವರೆಗೆ ತೋರಿದ ಹೋರಾಟ ಮತ್ತು ಕನ್ನಡತಿ ಶ್ರೇಯಾಂಕಾ ಪಾಟೀಲ್ (26ಕ್ಕೆ 4) ಬಿಗಿ ಬೌಲಿಂಗ್ ದಾಳಿಯ ನಡುವೆಯೂ ಆರ್ಸಿಬಿ ತಂಡ ವುಮೆನ್ಸ್ ಪ್ರೀಮಿಯರ್ ಲೀಗ್ 2ನೇ ಆವೃತ್ತಿಯ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 1 ರನ್ನಿಂದ ವೀರೋಚಿತ ಸೋಲು ಅನುಭವಿಸಿದೆ. ಟೂರ್ನಿಯ 5ನೇ ಜಯದೊಂದಿಗೆ ಡೆಲ್ಲಿ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿ ಪ್ಲೇಆಫ್ ಪ್ರವೇಶ ಖಚಿತಪಡಿಸಿಕೊಂಡಿದ್ದರೆ, ಸ್ಮೃತಿ ಮಂದನಾ ಬಳಗದ ಪ್ಲೇಆಫ್ ಅವಕಾಶ ತೂಗುಯ್ಯಾಲೆಯಲ್ಲಿ ನಿಂತಿದೆ.
ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಡೆಲ್ಲಿ ತಂಡ ಜೆಮೀಮಾ ರೋಡ್ರಿಗಸ್ (58 ರನ್, 36 ಎಸೆತ, 8 ಬೌಂಡರಿ, 1 ಸಿಕ್ಸರ್) ಮತ್ತು ಆಲಿಸ್ ಕ್ಯಾಪ್ಸಿ (48 ರನ್, 32 ಎಸೆತ, 8 ಬೌಂಡರಿ) ಆಸರೆಯಲ್ಲಿ 5 ವಿಕೆಟ್ಗೆ 181 ರನ್ ಪೇರಿಸಿತು. ಪ್ರತಿಯಾಗಿ ಆರ್ಸಿಬಿ ತಂಡ 7 ವಿಕೆಟ್ಗೆ 180 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ನಾಯಕಿ ಸ್ಮೃತಿ ಮಂದನಾ (5) ವೈಲ್ಯದ ನಡುವೆ ಸೋಫಿ ಮೊಲಿನೆಕ್ಸ್ (33) ಮತ್ತು ಎಲ್ಲಿಸ್ ಪೆರ್ರಿ (49) ಆರ್ಸಿಬಿ ಗೆಲುವಿನ ಆಸೆ ಜೀವಂತವಿಟ್ಟರು. ನಂತರ ರಿಚಾ ಘೋಷ್ ಬಿರುಸಿನ ಆಟದಿಂದ ಆರ್ಸಿಬಿ ಗೆಲುವಿನತ್ತ ದಿಟ್ಟ ಹೆಜ್ಜೆ ಇಟ್ಟಿತು. ಜೆಸ್ ಜೊನಾಸೆನ್ ಎಸೆದ ಪಂದ್ಯದ ಕೊನೇ ಓವರ್ನಲ್ಲಿ 17 ರನ್ ಬೇಕಿದ್ದಾಗ ರಿಚಾ 2 ಸಿಕ್ಸರ್ ಸಿಡಿಸಿದರು. ಆದರೆ ಕೊನೇ ಎಸೆತದಲ್ಲಿ 2 ರನ್ ಬೇಕಿದ್ದಾಗ ರಿಚಾ ರನೌಟ್ ಆಗುವುದರೊಂದಿಗೆ ಆರ್ಸಿಬಿಗೆ ಕನಿಷ್ಠ ಟೈ ಸಾಧಿಸಲು ಕೂಡ ಸಾಧ್ಯವಾಗಲಿಲ್ಲ.
ಡೆಲ್ಲಿಗೆ ಜೆಮೀಮಾ&ಕ್ಯಾಪ್ಸಿ ಆಸರೆ: ನಾಯಕಿ ಮೆಗ್ ಲ್ಯಾನಿಂಗ್ (29) ಮತ್ತು ಶೆಾಲಿ ವರ್ಮ (23) ಮೊದಲ ವಿಕೆಟ್ಗೆ 38 ಎಸೆತಗಳಲ್ಲಿ 54 ರನ್ ಕಲೆಹಾಕಿದರು. ಬಳಿಕ ಇಬ್ಬರೂ 6 ರನ್ ಅಂತರದಲ್ಲಿ ಡಗೌಟ್ಗೆ ಮರಳಿದರು. ಆಗ ಜತೆಗೂಡಿದ ಜೆಮೀಮಾ-ಕ್ಯಾಪ್ಸಿ ಜೋಡಿ 3ನೇ ವಿಕೆಟ್ಗೆ 62 ಎಸೆತಗಳಲ್ಲಿ 97 ರನ್ ಸೇರಿಸಿ ಡೆಲ್ಲಿ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿತು. ಇನಿಂಗ್ಸ್ನ ಕೊನೆಯಲ್ಲಿ ಶ್ರೇಯಾಂಕಾ 6 ಎಸೆತಗಳ ಅಂತರದಲ್ಲಿ 3 ವಿಕೆಟ್ ಕಬಳಿಸಿ ಡೆಲ್ಲಿ ರನ್ಗತಿಗೆ ಕಡಿವಾಣ ಹಾಕಿದರು. ಈ ನಡುವೆ ಸೋಫಿ ಮೊಲಿನೆಕ್ಸ್ ಎಸೆದ ಇನಿಂಗ್ಸ್ನ 19ನೇ ಓವರ್ನಲ್ಲಿ ಡೆಲ್ಲಿ ತಂಡ 18 ರನ್ ಕಸಿಯಿತು. ಆಶಾ ಶೋಭನಾ 29 ರನ್ಗಳಿಗೆ 1 ವಿಕೆಟ್ ಕಬಳಿಸಿದರು.
ಡೆಲ್ಲಿ ಕ್ಯಾಪಿಟಲ್ಸ್: 5 ವಿಕೆಟ್ಗೆ 181 (ಲ್ಯಾನಿಂಗ್ 29, ಶೆಫಾಲಿ 23, ಜೆಮೀಮಾ 58, ಆಲಿಸ್ ಕ್ಯಾಪ್ಸಿ 48, ಕಾಪ್ 12*, ಶ್ರೇಯಾಂಕಾ 26ಕ್ಕೆ 4). ಆರ್ಸಿಬಿ: 7 ವಿಕೆಟ್ಗೆ 180 (ಸ್ಮೃತಿ 5, ಮೊಲಿನೆಕ್ಸ್ 33, ಎಲ್ಲಿಸ್ ಪೆರ್ರಿ 49, ಡಿವೈನ್ 26, ರಿಚಾ 51, ಕಾಪ್ 30ಕ್ಕೆ 1, ಕ್ಯಾಪ್ಸಿ 5ಕ್ಕೆ 1).