ಕ್ರೀಡೆ

ಪಿಕೆಎಲ್‌: ದಬಾಂಗ್‌ ಡೆಲ್ಲಿ ಚಾಂಪಿಯನ್‌, ಜಿದ್ದಾಜಿದ್ದಿನ ಹೋರಾಟದಲ್ಲಿ ಪುಣೇರಿ ಪಲ್ಟನ್‌ ವಿರುದ್ಧ ರೋಚಕ ಗೆಲುವು

ದೆಹಲಿ: ತ್ಯಾಗರಾಜ್‌ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಹೈವೋಲ್ಟೇಜ್‌ ಪಂದ್ಯದಲ್ಲಿ ಟೇಬಲ್‌ ಟಾಪರ್‌ ದಬಾಂಗ್‌ ಡೆಲ್ಲಿ ತಂಡವು 3 ಅಂಕಗಳಿಂದ ಪುಣೆರಿ ಪಲ್ಟನ್‌ ವಿರುದ್ಧ (31-28 ಅಂತರದಲ್ಲಿ) ರೋಚಕ ಗೆಲುವು ಸಾಧಿಸಿತು. ಈ ಮೂಲಕ  ದಬಾಂಗ್‌ ಡೆಲ್ಲಿ ಕೆ.ಸಿ  ಕಬಡ್ಡಿ ಲೀಗ್‌ (ಪಿಕೆಎಲ್‌) 12ನೇ ಆವೃತ್ತಿಯ ಚಾಂಪಿಯನ್‌ ಪಟ್ಟವನ್ನು ಗೆದ್ದುಕೊಂಡಿತು. ಇದು ಅವರ ಎರಡನೇ ಪಿಕೆಎಲ್‌ ಪ್ರಶಸ್ತಿಯಾಗಿದೆ. ಈ ಹಿಂದೆ 8ನೇ ಆವೃತ್ತಿಯಲ್ಲಿ ಪ್ರಸ್ತುತ ಮುಖ್ಯ ತರಬೇತುದಾರ ಜೋಗಿಂದರ್‌ ನರ್ವಾಲ್‌ ನಾಯಕರಾಗಿದ್ದಾಗ ಚಾಂಪಿಯನ್‌ ಆಗಿತ್ತು.

ನೀರಜ್‌ ನರ್ವಾಲ್‌ ಮತ್ತು ಅಜಿಂಕ್ಯ ಪವಾರ್‌ ಕ್ರಮವಾಗಿ ಎಂಟು ಮತ್ತು ಆರು ಅಂಕಗಳೊಂದಿಗೆ ರೈಡಿಂಗ್‌ ಘಟಕವನ್ನು ಮುನ್ನಡೆಸಿದರು. ಏತನ್ಮಧ್ಯೆ, ಪುಣೆರಿ ಪಲ್ಟನ್‌ ಪರ ಆದಿತ್ಯ ಶಿಂಧೆ ಸೂಪರ್‌ 10 ಮತ್ತು ಅಭಿನೇಶ್‌ ನಾಡರಾಜನ್‌ ನಾಲ್ಕು ಟ್ಯಾಕಲ್‌ ಪಾಯಿಂಟ್‌ ಗಳನ್ನು ಗಳಿಸಿದರು.

ಅಸ್ಲಂ ಇನಾಮ್ದಾರ್‌ ಮತ್ತು ಅಶು ಮಲಿಕ್‌ ಗ್ರ್ಯಾಂಡ್‌ ಫಿನಾಲೆಯಲ್ಲಿ ಆಯಾ ತಂಡಗಳ ಪರ ಖಾತೆಯನ್ನು ತೆರೆದರು. ನಂತರ ನೀರಜ್‌ ನರ್ವಾಲ್‌ ದಬಾಂಗ್‌ ಡೆಲ್ಲಿ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡರು. ಆರಂಭಿಕ ವಿನಿಮಯದಲ್ಲಿ ತಮ್ಮ ತಂಡಕ್ಕೆ ನಾಲ್ಕು ಪಾಯಿಂಟ್‌ಗಳ ಮುನ್ನಡೆ ನೀಡಲು ಎರಡು ಪಾಯಿಂಟ್‌ ಗಳ ದಾಳಿ ಮತ್ತು ಟ್ಯಾಕಲ್‌ ಅನ್ನು ಪಡೆದರು.

ಪುಣೆರಿ ಪಲ್ಟನ್‌ ಪರ ಅವಿನೇಶ್‌ ನಾಡರಾಜನ್‌ ಮೂರನೇ ಸೂಪರ್‌ ಟ್ಯಾಕಲ್‌ಅನ್ನು ದಾಖಲಿಸಿದರು, ಆದರೆ ದಬಾಂಗ್‌ ಡೆಲ್ಲಿಯ ಅಜಿಂಕ್ಯ ಪವಾರ್‌ ಮೊದಲಾರ್ಧಕ್ಕೆ ಐದು ನಿಮಿಷಗಳು ಬಾಕಿ ಇರುವಾಗ ಪಂದ್ಯದ ಮೊದಲ ಆಲ್‌ಔಟ್‌ ಮಾಡಿದರು. ಅದು ಅವರ ತಂಡಕ್ಕೆ ಆರು ಪಾಯಿಂಟ್‌ ಗಳ ಮುನ್ನಡೆಯನ್ನು ನೀಡಿತು.

ನೀರಜ್‌ ನರ್ವಾಲ್‌ ಅವರ ಸೂಪರ್‌ ರೈಡ್‌ನಲ್ಲಿ ತವರು ತಂಡವು ತಮ್ಮ ಮುನ್ನಡೆಯನ್ನು ಎಂಟು ಪಾಯಿಂಟ್‌ ಗಳಿಗೆ ವಿಸ್ತರಿಸಿತು. ಪುಣೆರಿ ಪಲ್ಟನ್‌ ಪಂಕಜ್‌ ಮೋಹಿತೆ ಅವರ ಟ್ಯಾಕಲ್‌ ಮತ್ತು ಆದಿತ್ಯ ಶಿಂಧೆ ಅವರ ಎರಡು ಪಾಯಿಂಟ್‌ಗಳ ದಾಳಿಯೊಂದಿಗೆ ಮರು ಹೋರಾಟ ನೀಡಿದರು ಅಂತರವನ್ನು ಸ್ವಲ್ಪ ಕಡಿಮೆ ಮಾಡಿದರು. ಆದಾಗ್ಯೂ, ಅಜಿಂಕ್ಯ ಪವಾರ್‌ ತಕ್ಷ ಣ ಬಹು-ಪಾಯಿಂಟ್‌ ದಾಳಿಯೊಂದಿಗೆ ತಿರುಗೇಟು ನೀಡಿದರು. ಅರ್ಧ ಸಮಯದಲ್ಲಿ ಸ್ಕೋರ್‌ 20-14 ರಲ್ಲಿ ದಬಾಂಗ್‌ ಡೆಲ್ಲಿ ಮುನ್ನಡೆ ಸಾಧಿಸಿತು.