ಕ್ರೀಡೆ

ಕಾಂಗರೂ ನೆಲದಲ್ಲಿ ದಾಖಲೆ ಬರೆದ ಕೊಹ್ಲಿ: ಪರ್ತ್ ತಲುಪಿದ ರೋಹಿತ್ ಶರ್ಮ

ಪರ್ತ್: ನ್ಯೂಜಿಲೆಂಡ್ ಎದುರು ತವರಿನಲ್ಲೇ ಮುಗ್ಗರಿಸಿದ್ದ ಭಾರತ ತಂಡವೀಗ ಕಾಂಗರೂ ನೆಲದಲ್ಲಿ ಅಮೋಘ ನಿರ್ವಹಣೆ ತೋರುವ ಮೂಲಕ ಪುಟಿದೆದ್ದಿದ್ದು, ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ ಐತಿಹಾಸಿಕ ಗೆಲುವಿನೊಂದಿಗೆ ಪುನರಾಗಮನ ಕಾಣುವತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ (161 ರನ್, 297 ಎಸೆತ, 15 ಬೌಂಡರಿ, 3 ಸಿಕ್ಸರ್) ಭರ್ಜರಿ ಶತಕದಾಟ ಹಾಗೂ ಅನುಭವಿ ವಿರಾಟ್ ಕೊಹ್ಲಿ (100* ರನ್, 143 ಎಸೆತ, 8 ಬೌಂಡರಿ, 2 ಸಿಕ್ಸರ್) ಟೆಸ್ಟ್ ಕ್ರಿಕೆಟ್‌ನಲ್ಲಿ ಸಿಡಿಸಿದ 30ನೇ ಶತಕದ ನೆರವಿನಿಂದ ಪ್ರವಾಸಿ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವಿಗೆ ಬೃಹತ್ ಗುರಿ ನೀಡಿದೆ. ಸತತ ಎರಡು ದಿನ ಮೈದಾನದಲ್ಲಿ ಕಳೆದ ಬಳಲಿಕೆಯ ಬಳಿಕ ದಾಖಲೆಯ ಮೊತ್ತದ ಚೇಸಿಂಗ್‌ಗೆ ಇಳಿದಿರುವ ಆಸ್ಟ್ರೇಲಿಯಾ ಆರಂಭಿಕ ಆಘಾತ ಕಂಡಿದ್ದು, ಭಾರತದ ಗೆಲುವಿಗೆ 7 ವಿಕೆಟ್ ಮಾತ್ರ ಬಾಕಿ ಉಳಿದಿವೆ. ಪ್ಯಾಟ್ ಕಮ್ಮಿನ್ಸ್ ಪಡೆ ಚೇಸಿಂಗ್‌ನಲ್ಲಿ ಈಗಾಗಲೆ 3 ವಿಕೆಟ್ ಕಳೆದುಕೊಂಡಿದ್ದು, ಜಸ್‌ಪ್ರೀತ್ ಬುಮ್ರಾ ಬಳಗ ಪಂದ್ಯದ 4ನೇ ದಿನವೇ ಗೆಲುವು ಒಲಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ೈನಲ್ ಪ್ರವೇಶದ ಆಸೆಗೆ ಮರುಜೀವ ತುಂಬಿಸಿಕೊಳ್ಳುವ ತವಕದಲ್ಲಿದೆ.

ಆಸೀಸ್ ಎದುರು ಕೊಹ್ಲಿ 10ನೇ ಶತಕ: 36 ವರ್ಷದ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಪರ್ತ್‌ನಲ್ಲಿ ಶತಕ ಗಳಿಸುವ ಮೂಲಕ ಆಸೀಸ್ ಎದುರು ಗರಿಷ್ಠ ಶತಕ ಸಿಡಿಸಿದ ಬ್ಯಾಟರ್ ಎನಿಸಿದರು. ಆಸೀಸ್ ಎದುರು ಟೆಸ್ಟ್‌ನಲ್ಲಿ ಸಚಿನ್ ತೆಂಡುಲ್ಕರ್ 6 ಶತಕ ಸಿಡಿಸಿದ ದಾಖಲೆಯನ್ನು ಹಿಂದಿಕ್ಕಿದರು. ಜತೆಗೆ ತವರಿನಿಂದ ಹೊರಗೆ ಒಂದೇ ದೇಶದಲ್ಲಿ 7 ಶತಕ ಸಿಡಿಸಿದ ಸುನೀಲ್ ಗಾವಸ್ಕರ್‌ರ (ವಿಂಡೀಸ್‌ನಲ್ಲಿ) ಭಾರತೀಯ ದಾಖಲೆ ಸರಿಗಟ್ಟಿದರು. ಆಸೀಸ್ ನೆಲದಲ್ಲಿ 7ನೇ ಟೆಸ್ಟ್ ಸೆಂಚುರಿ ಬಾರಿಸಿದ ಕೊಹ್ಲಿಗೆ ಇದು ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಒಟ್ಟಾರೆ 10ನೇಯದ್ದಾಗಿದೆ. ಆಸ್ಟ್ರೇಲಿಯಾ ಎದುರು ಟೆಸ್ಟ್‌ನಲ್ಲಿ ಇಂಗ್ಲೆಂಡ್‌ನ ಜಾಕ್ ಹಾಬ್ಸ್ (9), ವ್ಯಾಲಿ ಹಾಮ್ಮಂಡ್ (7) ಗರಿಷ್ಠ ಶತಕ ಸಿಡಿಸಿದ ಮೊದಲಿಬ್ಬರು ಆಟಗಾರರಾಗಿದ್ದಾರೆ. ವೃತ್ತಿಪರ ಕ್ರಿಕೆಟ್‌ನಲ್ಲಿ ಕೊಹ್ಲಿ ಗಳಿಸಿದ 100ನೇ ಸೆಂಚುರಿ ಇದಾಗಿದ್ದು, ಈ ಸಾಧನೆ ಮಾಡಿದ 2ನೇ ಭಾರತೀಯ ಎನಿಸಿದರು. ತೆಂಡುಲ್ಕರ್ (142) ಮೊದಲ ಸ್ಥಾನದಲ್ಲಿದ್ದಾರೆ.

ಪರ್ತ್ ತಲುಪಿದ ರೋಹಿತ್ ಶರ್ಮ

ಎರಡನೇ ಮಗು ಜನನದ ಕಾರಣ ರಾಷ್ಟ್ರೀಯ ತಂಡದ ಕರ್ತವ್ಯದಿಂದ ಬ್ರೇಕ್ ಪಡೆದಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮ ಭಾನುವಾರ ಮಧ್ಯಾಹ್ನ ಪರ್ತ್ ತಲುಪಿದ್ದಾರೆ. ಪರ್ತ್ ಟೆಸ್ಟ್‌ಗೆ ಗೈರಾಗಿರುವ ರೋಹಿತ್, ನ.30, ಡಿ.1 ರಂದು ಆಸೀಸ್ ಪ್ರಧಾನ ಮಂತ್ರಿ ಇಲೆವನ್ ವಿರುದ್ಧದ ಹೊನಲು ಬೆಳಕಿನ ಪಿಂಕ್‌ಬಾಲ್ ಟೆಸ್ಟ್ ಅಭ್ಯಾಸದಲ್ಲಿ ಕಣಕ್ಕಿಳಿಯುವ ನಿರೀಕ್ಷೆ ಇದೆ.