Dubai: Hand sanitizer, a photo frame of a deity and other gadgets at Mumbai Indians dugout during the Qualifier 1 match against Delhi Capitals at Indian Premier League (IPL) 2020 in Dubai, United Arab Emirates, Thursday, Nov. 5, 2020. (PTI Photo/Sportzpics) (PTI05-11-2020_000251A) 
ಕ್ರೀಡೆ

ಮುಂಬೈ ಇಂಡಿಯನ್ಸ್ ತಂಡದ ಡಗೌಟ್‌ನಲ್ಲಿ ಅಯ್ಯಪ್ಪ ಸ್ವಾಮಿ! ಚಿತ್ರಗಳು ವೈರಲ್

ಬೆಂಗಳೂರು: ಐಪಿಎಲ್ ಟೂರ್ನಿಯಲ್ಲಿ ಉಳಿದೆಲ್ಲ ತಂಡಗಳು ಪರದಾಡುತ್ತಿದ್ದರೆ, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಮಾತ್ರ ಬಲಿಷ್ಠ ನಿರ್ವಹಣೆಯೊಂದಿಗೆ ಮುನ್ನುಗ್ಗುತ್ತಿದೆ. ಲೀಗ್ ಹಂತದ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿದ್ದ ಮುಂಬೈ ಇಂಡಿಯನ್ಸ್ ತಂಡ ಇದೀಗ ಮೊದಲ ತಂಡವಾಗಿ ಪ್ರಶಸ್ತಿ ಸುತ್ತಿಗೂ ಪ್ರವೇಶಿಸಿದೆ. ಮುಂಬೈ ತಂಡದ ಯಶಸ್ಸಿನ ಗುಟ್ಟು ಇದೀಗ ಬಹಿರಂಗಗೊಂಡಿದೆ. ತಂಡದ ಡಗೌಟ್‌ನಲ್ಲಿ ಅಯ್ಯಪ್ಪ ಸ್ವಾಮಿಯ ಚಿತ್ರ ಕಾಣಿಸಿಕೊಂಡಿದ್ದು, ಇದುವೇ ಮುಂಬೈ ತಂಡದ ಯಶಸ್ಸಿಗೆ ಕಾರಣ ಎನ್ನಲಾಗುತ್ತಿದೆ!

ಗುರುವಾರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ದುಬೈನಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯ ಆಡುವ ವೇಳೆ ಮುಂಬೈ ತಂಡದ ಡಗೌಟ್‌ನಲ್ಲಿ ಅಯ್ಯಪ್ಪ ಸ್ವಾಮಿಯ ಚಿತ್ರವೊಂದು ಇತ್ತು. ಸ್ಯಾನಿಟೈಸರ್ ಬಾಟಲಿಗೆ ಆಧಾರವಾಗಿ ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ಚಿತ್ರವನ್ನು ಇರಿಸಲಾಗಿತ್ತು. ಜತೆಯಲ್ಲೇ ಗಣಪತಿ ದೇವರ ಚಿತ್ರವೂ ಇತ್ತು. ಐಪಿಎಲ್ ವೆಬ್‌ಸೈಟ್‌ನಲ್ಲೂ ಇದರ ಚಿತ್ರಗಳನ್ನು ಪ್ರಕಟಿಸಲಾಗಿದೆ.

ಮುಂಬೈ ಇಂಡಿಯನ್ಸ್ ತಂಡದ ಡಗೌಟ್‌ನಲ್ಲಿ ಅಯ್ಯಪ್ಪ ಸ್ವಾಮಿ ದೇವರ ಚಿತ್ರವಿದ್ದ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮುಂಬೈ ಇಂಡಿಯನ್ಸ್ ತಂಡದ ಈ ದೈವಭಕ್ತಿಯೇ ತಂಡದ ಯಶಸ್ಸಿಗೆ ಕಾರಣವಾಗಿದೆ ಎಂದು ಅಭಿಮಾನಿಗಳು ಬಣ್ಣಿಸುತ್ತಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಮಾಲಕಿ ನೀತಾ ಅಂಬಾನಿ ಈ ಹಿಂದೆ ತಂಡದ ಪಂದ್ಯದ ವೇಳೆ ರೋಚಕ ಘಟ್ಟದಲ್ಲಿ ಪ್ರಾರ್ಥಿಸುತ್ತಿರುವುದು ಮತ್ತು ಶ್ಲೋಕಗಳನ್ನು ಪಠಿಸುತ್ತಿರುವ ಚಿತ್ರ, ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಮುಂಬೈ ಇಂಡಿಯನ್ಸ್ ತಂಡದ ಡಗೌಟ್‌ನಲ್ಲಿ ದೇವರ ಚಿತ್ರಗಳು ಕಾಣಿಸಿಕೊಂಡಿರುವುದರಿಂದ, ತಂಡವೀಗ ಯಶಸ್ಸಿಗೆ ದೈವಶಕ್ತಿಗೆ ಮೊರೆ ಹೋಗಿರುವುದು ಖಚಿತವಾಗಿದೆ.