ಕ್ರೀಡೆ

ಪ್ಲೇಆಫ್ ಹಂತಕ್ಕೇರಿದ ಸಿಎಸ್‌ಕೆ; ಸನ್‌ರೈಸರ್ಸ್‌ ಎದುರು ಭರ್ಜರಿ ಜಯ

ಶಾರ್ಜಾ: ಬಲಿಷ್ಠ ಬ್ಯಾಟಿಂಗ್ ಹಾಗೂ ಬೌಲಿಂಗ್ ನಿರ್ವಹಣೆಯಿಂದ ಗಮನಸೆಳೆದ ಮೂರು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಐಪಿಎಲ್-14ರ ಎರಡನೇ ಭಾಗದಲ್ಲಿ ಸತತ 4ನೇ ಗೆಲುವಿನೊಂದಿಗೆ ಪ್ಲೇಆಫ್ ಸ್ಥಾನ ಖಾತ್ರಿಪಡಿಸಿಕೊಂಡಿತು. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಎಂಎಸ್ ಧೋನಿ ಬಳಗ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಇದರಿಂದ ಲೀಗ್‌ನಲ್ಲಿ 9ನೇ ಜಯ ದಾಖಲಿಸಿದ ಸಿಎಸ್‌ಕೆ 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ಮೂಲಕ ಟೂರ್ನಿ ಇತಿಹಾಸದಲ್ಲಿ ದಾಖಲೆಯ 11ನೇ ಬಾರಿಗೆ ಪ್ಲೇಆಫ್ ಹಂತಕ್ಕೇರಿತು. ಜತೆಗೆ ಹಾಲಿ ಟೂರ್ನಿಯಲ್ಲಿ ಪ್ಲೇಆಫ್ ಖಚಿತಪಡಿಸಿಕೊಂಡ ಮೊದಲ ತಂಡ ಎನಿಸಿಕೊಂಡಿತು.

ಟಾಸ್ ಜಯಿಸಿದ ಸಿಎಸ್‌ಕೆ ನಾಯಕ ಎಂಎಸ್ ಧೋನಿ, ಸನ್‌ರೈಸರ್ಸ್‌ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ವೇಗಿಗಳಾದ ಜೋಸ್ ಹ್ಯಾಸಲ್‌ವುಡ್ (24ಕ್ಕೆ 3) ಹಾಗೂ ಡ್ವೇನ್ ಬ್ರಾವೊ (17ಕ್ಕೆ 2) ಕರಾರುವಾಕ್ ದಾಳಿಗೆ ನಲುಗಿದ ಸನ್‌ರೈಸರ್ಸ್‌ 7 ವಿಕೆಟ್‌ಗೆ 134 ರನ್‌ಗಳಿಸಲಷ್ಟೇ ಶಕ್ತವಾಯಿತು. ಈ ಸಾಧಾರಣ ಮೊತ್ತ ಬೆನ್ನಟ್ಟಿದ ಸಿಎಸ್‌ಕೆ, ಋತುರಾಜ್ ಗಾಯಕ್ವಾಡ್ (45ರನ್, 38 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ಫಾಫ್ ಡು ಪ್ಲೆಸಿಸ್ (41ರನ್, 36 ಎಸೆತ, 3 ಬೌಂಡರಿ, 2 ಸಿಕ್ಸರ್) ಬಿರುಸಿನ ಆರಂಭದ ಫಲವಾಗಿ 19.4 ಓವರ್‌ಗಳಲ್ಲಿ 4 ವಿಕೆಟ್‌ಗೆ 139 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

ಸನ್‌ರೈಸರ್ಸ್‌ ಹೈದರಾಬಾದ್ : 7 ವಿಕೆಟ್‌ಗೆ 134 (ವೃದ್ಧಿಮಾನ್ ಸಾಹ 44, ವಿಲಿಯಮ್ಸನ್ 11, ಅಭಿಷೇಕ್ ಶರ್ಮ 18, ಅಬ್ದುಲ್ ಸಮದ್ 18, ರಶೀದ್ ಖಾನ್ 17*, ಜೋಸ್ ಹ್ಯಾಸಲ್‌ವುಡ್ 24ಕ್ಕೆ 3, ಡ್ವೇನ್ ಬ್ರಾವೊ 17ಕ್ಕೆ 2, ರವೀಂದ್ರ ಜಡೇಜಾ 14ಕ್ಕೆ 1), ಸಿಎಸ್‌ಕೆ: 19.4 ಓವರ್‌ಗಳಲ್ಲಿ 4 ವಿಕೆಟ್‌ಗೆ 139 (ಋತುರಾಜ್ ಗಾಯಕ್ವಾಡ್ 45, ಫಾಫ್ ಡು ಪ್ಲೆಸಿಸ್ 41, ಮೊಯಿನ್ ಅಲಿ 17, ಅಂಬಟಿ ರಾಯುಡು 17*, ಎಂಎಸ್ ಧೋನಿ 14*, ಜೇಸನ್ ಹೋಲ್ಡರ್ 27ಕ್ಕೆ 3, ರಶೀದ್ ಖಾನ್ 27ಕ್ಕೆ 1).