ಕ್ರೀಡೆ

ಐಪಿಎಲ್​ನಲ್ಲಿ ಧೋನಿ ಆಡಬೇಕೆಂದರೆ... ಬಿಸಿಸಿಐಗೆ ಷರತ್ತು ವಿಧಿಸಿದ ಸಿಎಸ್​ಕೆ

ಚೆನ್ನೈ: 18ನೇ ಆವೃತ್ತಿಯ ಐಪಿಎಲ್​ ಆರಂಭವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಈಗಾಗಲೇ ಅದಕ್ಕೆ ಸಂಬಂಧಿಸಿದ ಸುದ್ದಿಗಳು ಹೊಸ ಚರ್ಚೆಗೆ ನಾಂದಿ ಹಾಡಿವೆ. ಇದರಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರೆಂದರೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಮಾಜಿ ನಾಯಕ, ಕ್ಯಾಪ್ಟನ್​ ಕೂಲ್​ ಎಂದೇ ಹೆಸರುವಾಸಿಯಾಗಿರುವ ಮಹೇಂದ್ರ ಸಿಂಗ್​ ಧೋನಿ ಅವರು 18ನೇ ಆವೃತ್ತಿಯ ಐಪಿಎಲ್​ನಲ್ಲಿ ಆಡಲಿದ್ದಾರಾ ಅಥವಾ ನಿವೃತ್ತಿ ಹೊಂದಲಿದ್ದಾರಾ ಎಂಬ ಬಗ್ಗೆ ವ್ಯಾಪಕವಾಗಿ ಚರ್ಚೆ ಮಾಡಲಾಗುತ್ತಿದೆ.

ಏಕೆಂದರೆ 17 ಆವೃತ್ತಿ ಆರಂಭವಾಗುವುದಕ್ಕೂ ಮುನ್ನ ಧೋನಿ ನಾಯಕನ ಸ್ಥಾನದಿಂದ ಕೆಳಗಿಳಿಯುವ ಮೂಲಕ ನಿವೃತ್ತಿಯಾಗುವ ಸುದ್ದಿಗೆ ಇಂಬು ನೀಡಿದ್ದರು. ಇದಾದ ಬಳಿಕ ಆರ್​ಸಿಬಿ ವಿರುದ್ಧದ ಎಲಿಮಿನೇಟರ್​ ಪಂದ್ಯದಲ್ಲಿ ಸೋತ ಬಳಿಕ ಧೋನಿ ನಿವೃತ್ತಿ ಹೊಂದಲಿದ್ದಾರೆ ಎಂದು ಹೇಳಲಾಗಿತ್ತಾದರು ಯಾವುದೇ ಸ್ಪಷ್ಟನೆ ಸಿಕ್ಕಿರಲಿಲ್ಲ. ಇದೀಗ ಹೊಸದೊಂದು ಸುದ್ದಿ ಕೇಳಿ ಬರುತ್ತಿದ್ದು, ಧೋನಿ ಈ ಬಾರಿಯ ಐಪಿಎಲ್​ನಲ್ಲಿ ಆಡಬೇಕಾದರೆ ಐಪಿಎಲ್ ಮ್ಯಾನೇಜ್​ಮೆಂಟ್​​ ಹಾಗೂ ಬಿಸಿಸಿಐ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿರುವುದಾಗಿ ವರದಿಯಾಗಿದೆ.

2025ರಲ್ಲಿ ಐಪಿಎಲ್​ ಶುರುವಾಗುವುದಕ್ಕೂ ಮುನ್ನ ಮೆಗಾ ಹರಾಜು ನಡೆಯಲಿದ್ದು, ಎಷ್ಟು ಆಟಗಾರರನ್ನು ಫ್ರಾಂಚೈಸಿ ಉಳಿಸಿಕೊಳ್ಳಬೇಕೆಂಬುದರ ಬಗ್ಗೆ ಬಿಸಿಸಿಐ ಹಾಗೂ ಐಪಿಎಲ್​ ಮ್ಯಾನೇಜ್​ಮೆಂಟ್​ ಯಾವುದೇ ಸ್ಪಷ್ಟನೆ ನೀಡಿಲ್ಲ. ಕ್ರಿಕ್​ಬಜ್​ ವರದಿ ಮಾಡಿರುವ ಪ್ರಕಾರ ಬಿಸಿಸಿಐ ಫ್ರಾಂಚೈಸಿಯಲ್ಲಿ 5-6 ಆಟಗಾರರನ್ನು ರಿಟೇನ್​ ಮಾಡುವ ಅವಕಾಶ ಏನಾದರೂ ನೀಡದ್ದಲ್ಲಿ ಧೋನಿ ಸಿಎಸ್​ಕೆಯಲ್ಲೇ ಮುಂದುವರೆಯಲಿದ್ದಾರೆ. ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಸಿಎಸ್​ಕೆ ಫಾಂಚೈಸಿಯು ನಾಯಕ ಋತುರಾಜ್​ ಗಾಯಕ್ವಾಡ್​, ರವೀಂದ್ರ ಜಡೇಜಾ, ಶಿವಂ ದುಬೆ ಹಾಗೂ ವಿದೇಶಿ ಆಟಗಾರರ ಕೋಟಾದಲ್ಲಿ ಶ್ರೀಲಂಕಾದ ಮಥೀಶ ಪಥಿರಾಣಾರನ್ನು ಉಳಿಸಿಕೊಳ್ಳಲು ಮುಂದಾಗಿದೆ.

ಜುಲೈ 31ರಂದು ನಡೆಯಲಿರುವ ಐಪಿಎಲ್​ ತಂಡಗಳ ಮಾಲೀಕರ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲು ಫ್ರಾಂಚೈಸಿಗಳು ಮುಂದಾಗಿದ್ದು, ಸಿಎಸ್​ಕೆ ಫ್ರಾಂಚೈಸಿಯು ತಂಡದಲ್ಲಿ 5-6 ಆಟಗಾರರು ರಿಟೇನ್​ ಮಾಡುವ ಬಗ್ಗೆ ಪ್ರಮುಖವಾಗಿ ಮಾತುಕತೆ ನಡೆಸಲಿದೆ ಎಂದು ಹೇಳಲಾಗಿದೆ. ಧೋನಿ ಆಡುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲು ಸಿಎಸ್​ಕೆ ಫ್ರಾಂಚೈಸಿಯು ಮುಂದಾಗಿದ್ದು, ಬಿಸಿಸಿಐಗೆ ಈ ಒಂದು ಷರತ್ತನ್ನು ವಿಧಿಸಲು ಮುಂದಾಗಿದೆ ಎಂದು ವರದಿಯಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.