ಕ್ರೀಡೆ

ಸೂಪರ್‌ಕಿಂಗ್ಸ್‌ಗೆ ಕರೊನಾ ಆಘಾತ, ಚೆನ್ನೈನಲ್ಲಿ ಶಿಬಿರ ನಡೆಸಿದ್ದೇ ಮುಳುವಾಯಿತೇ?

sspmiracle1982

ನವದೆಹಲಿ/ದುಬೈ: ಐಪಿಎಲ್ 13ನೇ ಆವೃತ್ತಿಗಾಗಿ ದುಬೈಗೆ ತೆರಳಿ ಅಭ್ಯಾಸ ನಡೆಸಲು ಸಜ್ಜಾಗುತ್ತಿದ್ದ ಎಂಎಸ್ ಧೋನಿ ಸಾರಥ್ಯದ ಚೆನ್ನೈ ಸೂಪರ್‌ಕಿಂಗ್ಸ್ ತಂಡಕ್ಕೆ ಕರೊನಾ ಆಘಾತ ಎದುರಾಗಿದೆ. ತಂಡದ ಆಟಗಾರನಾಗಿರುವ ಓರ್ವ ಭಾರತೀಯ ವೇಗದ ಬೌಲರ್ ಮತ್ತು ಫ್ರಾಂಚೈಸಿಯ 12 ಸಿಬ್ಬಂದಿಗೆ ಕರೊನಾ ಪಾಸಿಟಿವ್ ವರದಿ ಬಂದಿದೆ. ಇದರಿಂದಾಗಿ ತಂಡದ ಕ್ವಾರಂಟೈನ್ ಅವಧಿ ಸೆಪ್ಟೆಂಬರ್ 1ರವರೆಗೆ ವಿಸ್ತರಣೆಯಾಗಿದೆ. ಸೆಪ್ಟೆಂಬರ್ 19ರಂದು ಆರಂಭಗೊಳ್ಳಲಿರುವ ಟೂರ್ನಿಗೆ ಈ ಬೆಳವಣಿಗೆ ಆತಂಕವನ್ನೂ ಹೆಚ್ಚಿಸಿದೆ.

ಕರೊನಾಘಾತದ ಬಗ್ಗೆ ಫ್ರಾಂಚೈಸಿ ಇನ್ನೂ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಆದರೆ ತಂಡದ ಮೂಲಗಳ ಪ್ರಕಾರ, ಸೋಂಕು ದೃಢಪಟ್ಟಿರುವ ಆಟಗಾರ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನೂ ಪ್ರತಿನಿಧಿಸಿರುವ ವೇಗಿಯಾಗಿದ್ದು, ಕೋವಿಡ್-19 ದೃಢಪಟ್ಟಿರುವ ಸಿಬ್ಬಂದಿಯ ಸಂಖ್ಯೆಯೂ 12ರಷ್ಟಿರಬಹುದು. ಈ ಪೈಕಿ ಅಧಿಕಾರಿಯೊಬ್ಬರ ಪತ್ನಿ ಕೂಡ ಸೇರಿದ್ದಾರೆ. ಆದರೆ ಪಾಸಿಟಿವ್ ಬಂದಿರುವ ಹೆಚ್ಚಿನವರಿಗೆ ಕರೊನಾ ಲಕ್ಷಣಗಳಿಲ್ಲ ಎನ್ನಲಾಗಿದೆ.

ಈ ಕರೊನಾ ಪ್ರಕರಣಗಳು ಬಿಸಿಸಿಐ ವಲಯದಲ್ಲಿ ಆತಂಕ ಮೂಡಿಸಿದ್ದರೂ, ಸದ್ಯಕ್ಕೆ ಟೂರ್ನಿಗೆ ಯಾವುದೇ ಅಡಚಣೆ ಭೀತಿ ಇಲ್ಲ. ಸಿಎಸ್‌ಕೆ ತಂಡ ಭಾರತದಿಂದ ದುಬೈಗೆ ಹೋಗಿ ಮೊದಲ 6 ದಿನ ಕ್ವಾರಂಟೈನ್‌ನಲ್ಲಿದ್ದ ವೇಳೆ ಈ ಪಾಸಿಟಿವ್ ವರದಿಗಳು ಬಂದಿವೆ.

ಬಿಸಿಸಿಐ ಮಾರ್ಗಸೂಚಿಯ ಪ್ರಕಾರ, ಪಾಸಿಟಿವ್ ವರದಿ ಬಂದವರು ಇನ್ನು ಹೆಚ್ಚುವರಿ 7 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕಿದೆ. ನೆಗೆಟಿವ್ ವರದಿ ಬಂದ ಬಳಿಕವಷ್ಟೇ ಅವರಿಗೆ ಟೂರ್ನಿಯ ಬಯೋ-ಬಬಲ್‌ಗೆ ಪ್ರವೇಶ ದೊರೆಯಲಿದೆ.

ದುಬೈಗೆ ತೆರಳುವುದಕ್ಕೆ ಮುನ್ನ ಸಿಎಸ್‌ಕೆ ತಂಡ ಚೆನ್ನೈನಲ್ಲಿ ಕಿರು ಶಿಬಿರ ಆಯೋಜಿಸಿತ್ತು. ಹೀಗಾಗಿ ಈ ಪಾಸಿಟಿವ್ ವರದಿ ಬಂದಿರುವವರ ಸಂಪರ್ಕವನ್ನು ತಂಡದ ಬಹುತೇಕ ಮಂದಿ ಹೊಂದಿದ್ದರು. ಇದು ತಂಡದಲ್ಲಿ ಆತಂಕ ಹೆಚ್ಚಿಸಿದೆ. ಇದರಿಂದ ಇಡೀ ತಂಡದ ಕ್ವಾರಂಟೈನ್ ಅವಧಿಯನ್ನು ವಿಸ್ತರಿಸಲಾಗಿದೆ. ದುಬೈ ವಿಮಾನ ಏರುವುದಕ್ಕೆ ಮುನ್ನ ನಡೆಸಿದ ಕೋವಿಡ್-19 ಟೆಸ್ಟ್‌ನಲ್ಲಿ ಎಲ್ಲರ ವರದಿ ನೆಗೆಟಿವ್ ಬಂದಿತ್ತು. 4 ಲಕ್ಷಕ್ಕೂ ಅಧಿಕ ಪ್ರಕರಣ ಹೊಂದಿರುವ ತಮಿಳುನಾಡಿನಲ್ಲಿ ಶಿಬಿರ ಆಯೋಜಿಸಲು ಬಿಸಿಸಿಐ ಅವಕಾಶ ಕಲ್ಪಿಸಿದ್ದೇ ಮುಳುವಾಗಿದೆ ಎನ್ನಲಾಗುತ್ತಿದೆ.