ಬೆಂಗಳೂರು: ಕರೊನಾ ವೈರಸ್ ಭೀತಿಯಿಂದಾಗಿ ಅನುಭವಿ ಸುರೇಶ್ ರೈನಾ ಭಾರತಕ್ಕೆ ವಾಪಸಾದ ಬೆನ್ನಲ್ಲೇ ಅವರ ಜಾಗಕ್ಕೆ ಸೂಕ್ತ ಆಟಗಾರನಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡ ಪರದಾಡುವಂತಾಗಿದೆ. 2008ರಿಂದಲೂ ಸಿಎಸ್‌ಕೆ ತಂಡದ ಪ್ರಮುಖ ಅಂಗವಾಗಿದ್ದ ರೈನಾ ಇದೀಗ ಏಕಾಏಕಿ ತಂಡ ತೊರೆದಿರುವುದು ಆಡಳಿತ ಮಂಡಳಿಯನ್ನು ಚಿಂತೆಗೀಡುವಂತೆ ಮಾಡಿದೆ. ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ನಿರ್ವಹಣೆ ತೋರಿರುವ ಮೂರು ಮಂದಿ ಮೇಲೆ ಸಿಎಸ್‌ಕೆ ಕಣ್ಣಿಟ್ಟಿದೆ. ಕನ್ನಡಿಗ ವಿನಯ್ ಕುಮಾರ್, ಬರೋಡದ ಯೂಸುಫ್ ಪಠಾಣ್ ಹಾಗೂ ಬಂಗಾಳ ತಂಡದ ಮನೋಜ್ ತಿವಾರಿ, ಈ ಮೂವರಲ್ಲಿ ಒಬ್ಬರಿಗೆ ಸಿಎಸ್‌ಕೆ ಮಣೆ ಹಾಕಲಿದೆ ಎನ್ನಲಾಗುತ್ತಿದೆ. ಈ ಮೂವರು ಬಲಾಬಲ ಕೆಳಕಂಡಂತಿದೆ.
ದೇಶೀಯ ಕ್ರಿಕೆಟ್‌ನ ಅತ್ಯಂತ ಅನುಭವಿ ಆಟಗಾರ, ಕೆಕೆಆರ್, ಡೆಲ್ಲಿ ಡೇರ್‌ಡೆವಿಲ್ಸ್, ಪುಣೆ ರೈಸಿಂಗ್ ಸೂಪರ್‌ಜೈಂಟ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡಿದ ಅನುಭವ ಹೊಂದಿದ್ದಾರೆ ಮನೋಜ್ ತಿವಾರಿ. 2017ರಲ್ಲಿ ಪುಣೆ ತಂಡದ ಪರ ಉತ್ತಮ ನಿರ್ವಹಣೆ ತೋರಿದ್ದರೆ, 2018ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ 5 ಪಂದ್ಯಗಳನ್ನಷ್ಟೇ ಆಡಿದ್ದರು. 2018ರಲ್ಲಿ ಮನೋಜ್ ತಿವಾರಿ ಅವರನ್ನು ಯಾವುದೇ ತಂಡ ಖರೀದಿಸಿರಲಿಲ್ಲ. ಪ್ರಸಕ್ತ ವರ್ಷ ಮನೋಜ್ ಹೆಸರು ಹರಾಜಿಗೆ ಬಂದಿರಲಿಲ್ಲ. ರಾಷ್ಟ್ರೀಯ ತಂಡದ ಪರ 12 ಏಕದಿನ, 3 ಟಿ20 ಪಂದ್ಯಗಳನ್ನಾಡಿದ್ದರೆ, 98 ಐಪಿಎಲ್ ಪಂದ್ಯಗಳಿಂದ 1695 ರನ್ ಗಳಿಸಿದ್ದಾರೆ.
ರೈನಾ ಮಾದರಿಯಲ್ಲೇ ಮಧ್ಯಮ ಕ್ರಮಾಂಕದ ಶಕ್ತಿಯಾಗಿದ್ದರೂ ಧೋನಿ ರೀತಿಯಲ್ಲಿ ಫಿನಿಷರ್
ಆಗಬಲ್ಲರು ಯೂಸುಫ್ ಪಠಾಣ್. 2007 ಟಿ20 ಹಾಗೂ 2011ರ ಏಕದಿನ ವಿಶ್ವಕಪ್ ವಿಜೇತ ಧೋನಿ ಸಾರಥ್ಯದ ಬಳಗದಲ್ಲಿದ್ದರು ಯೂಸುಫ್. ಒಟ್ಟಾರೆ. 274 ಟಿ20 ಪಂದ್ಯಗಳಿಂದ 4852 ರನ್ ಗಳಿಸಿದ್ದಾರೆ. 2018 ಹಾಗೂ 2019ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸದಸ್ಯರಾಗಿದ್ದರು. 2020ರಲ್ಲಿ ಬಿಡ್ ಆಗಿರಲಿಲ್ಲ. ರಾಜಸ್ಥಾನ ರಾಯಲ್ಸ್ ಹಾಗೂ ಕೋಲ್ಕತ ನೈಟ್ ರೈಡರ್ಸ್ ತಂಡದ ಪರ ಆಡಿರುವ ಅನುಭವ ಹೊಂದಿದ್ದಾರೆ.
ರ್ನಾಟಕದ ದಾವಣಗೆರೆ ಎಕ್ಸ್‌ಪ್ರೆಸ್ ಖ್ಯಾತಿಯ ಆರ್.ವಿನಯ್‌ಕುಮಾರ್, ಆರ್‌ಸಿಬಿ, ಕೊಚ್ಚಿ ಟಸ್ಕರ್ಸ್, ಕೆಕೆಆರ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಪರ ಆಡಿರುವ ಅನುಭವ ಹೊಂದಿದ್ದಾರೆ. ವಿನಯ್ ಕುಮಾರ್ ಕೇವಲ ಸುರೇಶ್ ರೈನಾ ಜಾಗಕ್ಕಷ್ಟೇ ಅಲ್ಲದೆ, ದೀಪಕ್ ಚಹರ್‌ಗೂ ಬ್ಯಾಕ್‌ಅಪ್ ಆಟಗಾರನಾಗಲಿದ್ದಾರೆ. ದೇಶೀಯ ಕ್ರಿಕೆಟ್ ಟೂರ್ನಿ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. 105 ಐಪಿಎಲ್ ಪಂದ್ಯಗಳಿಂದ 105 ವಿಕೆಟ್ ಪಡೆದರೆ, 181 ಟಿ20 ಪಂದ್ಯಗಳಿಂದ 194 ವಿಕೆಟ್ ಕಬಳಿಸಿ 861 ರನ್ ಪೇರಿಸಿದ್ದಾರೆ.