ಬೆಂಗಳೂರು: ಕರೊನಾ ವೈರಸ್ ಭೀತಿ ನಡುವೆಯೂ ಅರಬ್‌ರಾಷ್ಟ್ರದಲ್ಲಿ 52 ದಿನಗಳ ಕಾಲ 13ನೇ ಐಪಿಎಲ್ ಯಶಸ್ವಿಯಾಗಿ ಪೂರೈಸಿ ವಾರವೇ ಕಳೆದಿದೆ. ರೋಹಿತ್ ಶರ್ಮ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ 5ನೇ ಬಾರಿ ಟ್ರೋಫಿ ಜಯಿಸಿತು. ಇಷ್ಟು ವರ್ಷಗಳ ಕಾಲ ಐಪಿಎಲ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ನಿರಾಸೆ ಮೂಡಿಸಿತು. ಕನಿಷ್ಠ ಪ್ಲೇಆಫ್ ಹಂತಕ್ಕೇರಲು ವಿಫಲವಾದ ಸಿಎಸ್‌ಕೆ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಲಭಿಸಿದೆ. ಟ್ವಿಟರ್‌ನಲ್ಲಿ ಅತಿಹೆಚ್ಚು ಮಂದಿ ಜಾಲಾಡಿದ ತಂಡ ಎನಿಸಿಕೊಂಡಿದೆ. ನಂತರದ ಸ್ಥಾನದಲ್ಲಿ ಆರ್‌ಸಿಬಿ ತಂಡ ಸ್ಥಾನ ಪಡೆದಿದೆ. ಅಲ್ಲದೆ, ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಕೂಡ ಟ್ವಿಟರ್‌ನಲ್ಲಿ ಹೆಚ್ಚು ಜಾಲಾಡಿದ ನಾಯಕ ಎನಿಸಿಕೊಂಡಿದ್ದಾರೆ.
ಎಂಎಸ್ ಧೋನಿ ನಾಯಕತ್ವದ ಸಿಎಸ್‌ಕೆ ಹೀನಾಯ ನಿರ್ವಹಣೆಯೊಂದಿಗೆ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಇದರ ನಡುವೆಯೂ ಟ್ವಿಟರ್‌ನಲ್ಲಿ ತನ್ನ ಅಭಿಮಾನಿ ಪಡೆಯನ್ನು ಉಳಿಸಿಕೊಳ್ಳುವಲ್ಲಿ ಧೋನಿ ಪಡೆ ಯಶಸ್ವಿಯಾಗಿದೆ. ಅಲ್ಲದೆ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಿಕೋಲಸ್ ಪೂರನ್, ರಾಜಸ್ಥಾನ ರಾಯಲ್ಸ್ ಎದುರು ಬೌಂಡರಿ ಲೈನ್‌ನಲ್ಲಿ ಮಾಡಿದ್ದ ಫೀಲ್ಡಿಂಗ್ ಕುರಿತು ಸಚಿನ್ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಅನ್ನು ಗೋಲ್ಡನ್ ಟ್ವೀಟ್ ಎಂದು ಕರೆಸಿಕೊಂಡಿದೆ.
ಲೀಗ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದು ಸಿಎಸ್‌ಕೆ ಎನಿಸಿಕೊಂಡಿದೆ. ಆರ್‌ಸಿಬಿ 2ನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್, ಸನ್‌ರೈಸರ್ಸ್ ಹೈದರಾಬಾದ್, ಕೋಲ್ಕತ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್, ರಾಜಸ್ಥಾನ ರಾಯಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಹಾಲಿ ರನ್ನರ್‌ಅಪ್ ಡೆಲ್ಲಿ ಕ್ಯಾಪಿಟಲ್ಸ್ ಕ್ರಮವಾಗಿ ನಂತರದ ಸ್ಥಾನದಲ್ಲಿವೆ.