ಕ್ರೀಡೆ

ಹ್ಯಾಟ್ರಿಕ್​ ಗೆಲುವಿನ ನಿರೀಕ್ಷೆಯಲ್ಲಿ ಆರ್​ಸಿಬಿ

raghukittur

ದುಬೈ: ಮೂರು ಆವೃತ್ತಿಗಳ ಬಳಿಕ ಪ್ಲೇ-ಆಫ್​ ಖಾತ್ರಿಯಲ್ಲಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಐಪಿಎಲ್​-13ರ ತನ್ನ 11ನೇ ಪಂದ್ಯದಲ್ಲಿ ಈಗಾಗಲೇ ಲೀಗ್​ನಿಂದ ಹೊರಬಿದ್ದಿರುವ ಮೂರು ಬಾರಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ತಂಡವನ್ನು ಎದುರಿಸಲಿದೆ. ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಪಂದ್ಯ ಧೋನಿ ಬಳಗಕ್ಕೆ ಔಪಚಾರಿಕವಾದರೂ ಅಂಕಪಟ್ಟಿಯಲ್ಲಿ ಮೇಲೇರುವ ದೃಷ್ಟಿಯಿಂದ ಕೊಹ್ಲಿ ಪಡೆ ಪಾಲಿಗೆ ಮಹತ್ವ ಪಡೆದಿದೆ. ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಆರ್​ಸಿಬಿ ಬಹುತೇಕ ಪ್ಲೇ-ಆಫ್​ ಹಂತವನ್ನು ಖಚಿತಪಡಿಸಿಕೊಂಡಿದೆ. ಮೊದಲ ಮುಖಾಮುಖಿಯಲ್ಲಿ ಆರ್​ಸಿಬಿ 37 ರನ್​ಗಳಿಂದ ಜಯ ದಾಖಲಿಸಿತ್ತು.

ಆತ್ಮವಿಶ್ವಾಸದಲ್ಲಿ ವಿರಾಟ್​ ಕೊಹ್ಲಿ ಬಳಗ

ಲೀಗ್​ನಲ್ಲಿ ಇದುವರೆಗೂ ಆಡಿರುವ 10 ಪಂದ್ಯಗಳಲ್ಲಿ 7ರಲ್ಲಿ ಗೆದ್ದು, 3ರಲ್ಲಿ ಸೋಲು 14 ಅಂಕ ಹೊಂದಿರುವ ಆರ್​ಸಿಬಿ, ಬ್ಯಾಟಿಂಗ್​ ಹಾಗೂ ಬೌಲಿಂಗ್​ ಎರಡೂ ವಿಭಾಗಗಳಲ್ಲಿ ಭರ್ಜರಿ ಲಯದಲ್ಲಿದೆ. ಆರಕ್ಕೇರದ, ಮೂರಕ್ಕೀಳಿಯದ ಆರಂಭಿಕರ ನಿರ್ವಹಣೆ ನಡುವೆಯೂ ಮಧ್ಯಮ ಕ್ರಮಾಂಕ ಹಾಗೂ ಬೌಲರ್​ಗಳ ಮಾರಕ ದಾಳಿಯಿಂದ ಆರ್​ಸಿಬಿ ಇದುವರೆಗೂ ಯಶ ಸಾಧಿಸಲು ಯಶಸ್ವಿಯಾಗಿದೆ. ಅಂಕಪಟ್ಟಿಯಲ್ಲಿ ಮೇಲೇರುವ ದೃಷ್ಟಿಯಿಂದ ಆರ್​ಸಿಬಿ ಪಾಲಿಗೆ ಈ ಪಂದ್ಯ ಮಹತ್ವ ಪಡೆದಿದೆ.ರಾಜಸ್ಥಾನ ರಾಯಲ್ಸ್​ ಹಾಗು ಕೆಕೆಆರ್​ ಎದುರು ಭರ್ಜರಿ ಜಯ ದಾಖಲಿಸಿರುವ ಆರ್​ಸಿಬಿ, ಬಲಿಷ್ಠ ಬೌಲಿಂಗ್​ ಪಡೆ ಹೊಂದಿದೆ. ಕೆಕೆಆರ್​ ಎದುರು ಮಿಂಚಿದ್ದ ಮೊಹಮದ್​ ಸಿರಾಜ್​, ಕ್ರಿಸ್​ ಮಾರಿಸ್​, ಇಸುರು ಉದಾನ, ಯಜುವೇಂದ್ರ ಚಾಹಲ್​ ಹಾಗೂ ವಾಷಿಂಗ್ಟನ್​ ಸುಂದರ್​ ಒಳಗೊಂಡ ಬೌಲಿಂಗ್​ ಉತ್ತಮ ಲಯದಲ್ಲಿದ್ದರೆ, ಎಬಿ ಡಿವಿಲಿಯರ್ಸ್​, ವಿರಾಟ್​ ಕೊಹ್ಲಿ ಸ್ಫೋಟಕ ಬ್ಯಾಟಿಂಗ್​ ಮೂಲಕ ಗಮನಸೆಳೆಯುತ್ತಿದ್ದಾರೆ.

ಸಿಎಸ್​ಕೆ ಪಾಲಿಗೆ ಕಾಟಾಚಾರದ ಹೋರಾಟ

ಲೀಗ್​ ಇತಿಹಾಸದಲ್ಲಿ ಮೊದಲ ಬಾರಿಗೆ 8 ಪಂದ್ಯ ಸೋತು ಅಂತಿಮ ನಾಲ್ಕರ ಪೈಪೋಟಿಯಿಂದ ಹೊರಬಿದ್ದಿರುವ ಧೋನಿ ಬಳಗಕ್ಕೆ ಈ ಕದನ ಆಟಕ್ಕುಂಟು ಲೆಕ್ಕಕ್ಕಿಲ್ಲ. ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಿ ಮತ್ತೊಮ್ಮೆ ಯುವ ಆಟಗಾರರನ್ನು ಕಣಕ್ಕಿಳಿಸುವ ಯೋಜನೆಯಲ್ಲಿದೆ ಸಿಎಸ್​ಕೆ. ಶುಕ್ರವಾರ ಮುಂಬೈ ಎದುರು ಹೀನಾಯ ನಿರ್ವಹಣೆ ನೀಡಿದ್ದ ಸಿಎಸ್​ಕೆ, ಅಂತಿಮ ಪಂದ್ಯಗಳಲ್ಲಿ ಸುಧಾರಿತ ನಿರ್ವಹಣೆ ತೋರುವ ವಿಶ್ವಾಸದಲ್ಲಿದೆ. ಜತೆಗೆ ಯುವ ಆಟಗಾರರಿಗೆ ಅವಕಾಶ ನೀಡಿ ಮತ್ತೊಂದು ಪ್ರಯೋಗಕ್ಕೆ ಮುಂದಾಗಲಿದೆ.

ಟೀಮ್​ ನ್ಯೂಸ್​:

ಆರ್​ಸಿಬಿ:

ಸತತ ಎರಡು ಗೆಲುವು ದಾಖಲಿಸಿರುವ ಆರ್​ಸಿಬಿ ತಂಡದಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷಿಸುವಂತಿಲ್ಲ. ಗುರುಕೀರತ್​ ಮಾನ್​ ಸಿಂಗ್​ ಬದಲಿಗೆ ಆಲ್ರೌಂಡರ್​ ಶಿವಂ ದುಬೆ ತಂಡಕ್ಕೆ ವಾಪಸಾಗಬಹುದು.

ಸಂಭಾವ್ಯ ತಂಡ: ದೇವದತ್​ ಪಡಿಕಲ್​, ಆರನ್​ ಫಿಂಚ್​, ವಿರಾಟ್​ ಕೊಹ್ಲಿ, ಎಬಿ ಡಿವಿಲಿಯರ್ಸ್​, ಶಿವಂ ದುಬೆ/ಗುರುಕೀರತ್​ ಮಾನ್​ ಸಿಂಗ್​, ಕ್ರಿಸ್​ ಮಾರಿಸ್​, ವಾಷಿಂಗ್ಟನ್​ ಸುಂದರ್​, ಇಸುರು ಉದಾನ್​, ಮೊಹಮದ್​ ಸಿರಾಜ್​, ನವದೀಪ್​ ಸೈನಿ, ಯಜುವೇಂದ್ರ ಚಾಹಲ್​.

ಕಳೆದ ಪಂದ್ಯ: ಕೆಕೆಆರ್​ ಎದುರು 8 ವಿಕೆಟ್​ ಜಯ

ಸಿಎಸ್​ಕೆ: 

ಮುಂಬೈ ಇಂಡಿಯನ್ಸ್​ ಎದುರು ಮೂರು ಬದಲಾವಣೆಯೊಂದಿಗೆ ಕಣಕ್ಕಿಳಿದಿದ್ದ ಸಿಎಸ್​ಕೆ, ಈ ಪಂದ್ಯದಲ್ಲೂ ಬದಲಾವಣೆ ಮಾಡಿಕೊಳ್ಳಲಿದೆ. ತಂಡದ ಪಾಲಿಗೆ ಈ ಪಂದ್ಯ ಔಪಚಾರಿಕವಾಗಿರುವುದರಿಂದ ಇದುವರೆಗೂ ಆಡದಿರುವ ಅಟಗಾರರಿಗೆ ಅವಕಾಶ ನೀಡಬಹುದು.

ಸಂಭಾವ್ಯ ತಂಡ: ಋತುರಾಜ್​ ಗಾಯಕ್ವಾಡ್​, ಪ್ಲೆಸಿಸ್​, ಅಂಬಟಿ ರಾಯುಡು, ಎನ್​. ಜಗದೀಶ್​, ಧೋನಿ (ನಾಯಕ, ವಿಕೀ), ಆರ್​.ಜಡೇಜಾ/ಸಾಯಿ ಕಿಶೋರ್​, ಸ್ಯಾಮ್​ ಕರನ್​, ದೀಪಕ್​ ಚಹರ್​, ಶಾರ್ದೂಲ್​ ಠಾಕೂರ್​, ಇಮ್ರಾನ್​ ತಾಹಿರ್​, ಜೋಸ್​ ಹ್ಯಾಸಲ್​ವುಡ್​/ಲುಂಗಿ ಎನ್​ಗಿಡಿ. ಕಳೆದ ಪಂದ್ಯ: ಮುಂಬೈ ಇಂಡಿಯನ್ಸ್​ ಎದುರು 10 ವಿಕೆಟ್​ ಸೋಲು

ಪಂದ್ಯ ಆರಂಭ: ರಾತ್ರಿ: 3.30ಕ್ಕೆ

ನೇರ ಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​ ನೆಟ್​ವರ್ಕ್​

ಮುಖಾಮುಖಿ: 25, ಆರ್​ಸಿಬಿ: 9, ಸಿಎಸ್​ಕೆ: 15, ರದ್ದು: 1.