ಕ್ರೀಡೆ

ಕೀರ್ತಿ ಆಜಾದ್ ಕುಟುಂಬದಲ್ಲಿ ವಿಷಾದ..ಪತ್ನಿ ಪೂನಂ ಝಾ ಮೃತ್ಯು

ಕೋಲ್ಕತ್ತಾ: ಟೀಂ ಇಂಡಿಯಾ ಮೊದಲ ವಿಶ್ವಕಪ್ ಗೆಲುವಿನಲ್ಲಿ ಕ್ಯಾಪ್ಟನ್​ ಕಪಿಲ್​ದೇವ್​​ಗೆ ಸಹಕರಿಸಿದ್ದ ಕೀರ್ತಿ ಆಜಾದ್ ಅವರ ಪತ್ನಿ ಪೂನಂ ಝಾ ಆಜಾದ್ ಸೋಮವಾರ(ಸೆ.2) ನಿಧನರಾಗಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್ ಮೂಲಕ ಆಜಾದ್ ಈ ವಿಷಯವನ್ನು ತಿಳಿಸಿದ್ದಾರೆ. ಪೂನಂ ಇನ್ನಿಲ್ಲ ಎಂದು ಪೋಸ್ಟ್ ಮಾಡಿ ಭಾವುಕರಾಗಿದ್ದಾರೆ.

ಆಕೆ ನಮ್ಮನ್ನು ಬಿಟ್ಟು ಸ್ವರ್ಗಕ್ಕೆ ಹೋಗಿದ್ದಾಳೆ. ಈ ದುಃಖದ ಸಮಯದಲ್ಲಿ ಸಂತೈಸಿದ ಎಲ್ಲರಿಗೂ, ಇದಕ್ಕೂ ಮುನ್ನ ಆಕೆ ಚೇತರಿಸಿಕೊಳ್ಳಲು ಪ್ರಾರ್ಥಿಸಿದ ಎಲ್ಲರಿಗೆ ನನ್ನ ಧನ್ಯವಾದಗಳು ಎಂದು ಆಜಾದ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಕೀರ್ತಿ ಆಜಾದ್ ಪತ್ನಿ ಅಗಲಿಕೆ ವಿಚಾರ ತಿಳಿದ ಆಟಗಾರರು, ಮಾಜಿ ಆಟಗಾರರು, ಹಲವು ರಾಜಕೀಯ ನಾಯಕರು ಆಘಾತ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳ ಸಿಎಂ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ.

ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ ಕೀರ್ತಿ ಆಜಾದ್ ರಾಜಕೀಯ ಪ್ರವೇಶಿಸಿದರು. ಪ್ರಸ್ತುತ ಅವರು ತೃಣಮೂಲ ಕಾಂಗ್ರೆಸ್ ಸಂಸದರಾಗಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಕೀರ್ತಿ ಆಜಾದ್ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. 142 ಪಂದ್ಯಗಳಲ್ಲಿ 6634 ರನ್ ಗಳಿಸಿ 234 ವಿಕೆಟ್ ಪಡೆದಿದ್ದಾರೆ.