ಜ್ವೆರೆವ್‌ಗೆ ಚೊಚ್ಚಲ ಗ್ರಾಂಡ್ ಸ್ಲಾಂ ಕಿರೀಟ: ಮುಕ್ತ ಟೆನಿಸ್ ಯುಗದಲ್ಲಿ ಫ್ರೆಂಚ್ ಓಪನ್ ಗೆದ್ದ ಜರ್ಮನಿಯ ಮೊದಲ ಆಟಗಾರ
ಪ್ಯಾರಿಸ್: ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಗ್ರಾಂಡ್ ಸ್ಲಾಂ ಟೂರ್ನಿಯ ನೂತನ ಚಾಂಪಿಯನ್ ಎನಿಸಿದರು. ವಿಶ್ವ ನಂ.3 ಜ್ವೆರೆವ್ ಭಾನುವಾರ ನಡೆದ ವರ್ಷದ ಎರಡನೇ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಫೈನಲ್‌ನ ಮ್ಯಾರಥಾನ್ ಹೋರಾಟದಲ್ಲಿ 10ನೇ ಶ್ರೇಯಾಂಕಿತ ಫ್ಲಾವಿಯೊ ಕೊಬೊಲ್ಲಿ ವಿರುದ್ಧ ಗೆದ್ದು ಬೀಗಿದರು. ಈ ಮೂಲಕ 29 ವರ್ಷದ ಜ್ವೆರೆವ್ ಆವೆ ಮಣ್ಣಿನ ಅಂಕಣದಲ್ಲಿ ಚೊಚ್ಚಲ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದರು. 10ನೇ ಶ್ರೇಯಾಂಕಿತ, ಇಟಲಿಯ ಫ್ಲಾವಿಯೊ ಕೊಬಲ್ಲಿ ರನ್ನರ್ ಅಪ್‌ಗೆ ತೃಪ್ತಿಪಟ್ಟರು.
ರೋಲ್ಯಾಂಡ್-ಗ್ಯಾರಸ್‌ನಲ್ಲಿ ನಡೆದ ಪ್ರಶಸ್ತಿ ಕಾದಾಟದಲ್ಲಿ ಎರಡನೇ ಶ್ರೇಯಾಂಕಿತ ಅಲೆಕ್ಸಾಂಡರ್ ಜ್ವೆರೆವ್ 6-1, 4-6, 6-4, 6-7, 6-1 ರಿಂದ ಇಟಲಿಯ ಕೊಬೊಲ್ಲಿಗೆ ಸೋಲುಣಿಸಿದರು. 4 ಗಂಟೆ 16 ನಿಮಿಷಗಳ ಹೋರಾಟದಲ್ಲಿ 6-1 ಮತ್ತು 6-4 ರಿಂದ ಮೊದಲ ಹಾಗೂ ಮೂರನೇ ಸೆಟ್ ಒಲಿಸಿಕೊಂಡ ಜ್ವೆರವ್ ಮೇಲುಗೈ ಸಾಧಿಸಿದರು.
4-6 ರಿಂದ ಎರಡನೇ ಸೆಟ್ ಗೆದ್ದ ಕೊಬೊಲ್ಲಿ 4ನೇ ಸೆಟ್ ಅನ್ನು ಟೈ ಬ್ರೇಕರ್‌ನಲ್ಲಿ ಒಲಿಸಿಕೊಂಡು ಪಂದ್ಯವನ್ನು ನಿರ್ಣಾಯಕ ಐದನೇ ಸೆಟ್‌ಗೆ ವಿಸ್ತರಿಸಿದರು. ತನ್ನ ಹಿಂದಿನ ಮೂರು ಗ್ರಾಂಡ್ ಸ್ಲಾಂ ಫೈನಲ್‌ಗಳಲ್ಲಿ ರನ್ನರ್ ಅಪ್ ಆಗಿದ್ದ ಜ್ವೆರೆವ್ ಐದನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ 6-1 ರಿಂದ ಪ್ರಾಬಲ್ಯ ಸಾಧಿಸಿ ಗ್ರಾಂಡ್ ಸ್ಲಾಂ ಗೆದ್ದ ಹೊಸ ತಾರೆ ಎನಿಸಿದರು. ಇದರೊಂದಿಗೆ ಮುಕ್ತ ಟೆನಿಸ್ ಯುಗದಲ್ಲಿ ಫ್ರೆಂಚ್ ಓಪನ್ ಜಯಿಸಿದ ಜರ್ಮನಿಯ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2024ರಲ್ಲಿ ಜ್ವೆರೆವ್ ರನ್ನರ್ ಅಪ್ ಆಗಿದ್ದರು.
1. ಅಲೆಕ್ಸಾಂಡರ್ ಜ್ವೆರೆವ್ 1996ರ ನಂತರ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದ ಜರ್ಮನಿಯ ಮೊದಲ ಆಟಗಾರ. ಬೊರಿಸ್ ಬೆಕರ್ ಕೊನೇ ಸಾಧಕ.
30: ಚಾಂಪಿಯನ್ ಅಲೆಕ್ಸಾಂಡರ್ ಜ್ವೆರೆವ್ 30.85 ಕೋಟಿ ರೂ. ಬಹುಮಾನ ಪಡೆದರೆ, ರನ್ನರ್‌ಅಪ್ ಕೊಬೊಲ್ಲಿ 15.26 ಕೋಟಿ ರೂ.ಗಳಿಸಿದರು.