ರಾಷ್ಟ್ರೀಯ ಕ್ರಿಕೆಟ್​ ಆಯ್ಕೆ ಸಮಿತಿಗೆ ಅಜಿತ್​ ಅಗರ್ಕರ್​ ಬದಲು ಜಹೀರ್ ಖಾನ್​​ ಅಧ್ಯಕ್ಷ? 
ಕ್ರಿಕೆಟ್

ರಾಷ್ಟ್ರೀಯ ಕ್ರಿಕೆಟ್​ ಆಯ್ಕೆ ಸಮಿತಿಗೆ ಅಜಿತ್​ ಅಗರ್ಕರ್​ ಬದಲು ಜಹೀರ್ ಖಾನ್​​ ಅಧ್ಯಕ್ಷ?

ನವದೆಹಲಿ: ಅನುಭವಿ ಬ್ಯಾಟರ್​ ರೋಹಿತ್​ ಶರ್ಮ ಅವರನ್ನು ಇತ್ತೀಚೆಗೆ ಭಾರತ ಏಕದಿನ ತಂಡದಿಂದ ಕೈಬಿಡಲು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್​ ಅಗರ್ಕರ್​ ಚಿಂತನೆ ನಡೆಸಿದ್ದರು. ಇದೀಗ ಅವರ ಹುದ್ದೆಯೇ ಆಪತ್ತಿಗೆ ಸಿಲುಕಿದೆ. ಅಗರ್ಕರ್​ ಅವರನ್ನು ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಮುಂದುವರಿಸಲು ಬಿಸಿಸಿಐಗೆ ಮನಸ್ಸಿಲ್ಲ. ಹೀಗಾಗಿ ಶ್ರೀಲಂಕಾ ಪ್ರವಾಸದ ಟೆಸ್ಟ್​ ಸರಣಿಯ ಬಳಿಕ ಅಗರ್ಕರ್​ ಭವಿಷ್ಯದ ಬಗ್ಗೆ ಚರ್ಚಿಸಲು ಬಿಸಿಸಿಐ ಸಭೆ ಸೇರಲಿದೆ. ಇದೇ ವೇಳೆ ಅಗರ್ಕರ್​ ಬದಲಿಗೆ ಮತ್ತೋರ್ವ ಮಾಜಿ ವೇಗಿ ಜಹೀರ್​ ಖಾನ್ (

Zaheer Khan

)​ ಅವರನ್ನು ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಲು ಬಿಸಿಸಿಐ ವಲಯದಲ್ಲಿ ಚಿಂತನೆ ನಡೆದಿದೆ ಎನ್ನಲಾಗಿದೆ.

ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಮುಖ್ಯಸ್ಥ ವಿವಿಎಸ್​ ಲಕ್ಷ್ಮಣ್​, ಅಗರ್ಕರ್​ ಸ್ಥಾನವನ್ನು ತುಂಬಲಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಆದರೆ ಲಕ್ಷ್ಮಣ್​ ಆಯ್ಕೆಗಾರರಾಗುವ ಆಸಕ್ತಿ ತೋರಿಸಿಲ್ಲ ಎನ್ನಲಾಗಿದೆ. ಅಲ್ಲದೆ ಲಕ್ಷ್ಮಣ್​ಗೆ ಇದಕ್ಕಿಂತ ಉನ್ನತವಾದ ಮಂಡಳಿಯ ಕ್ರಿಕೆಟ್​ ನಿರ್ದೇಶಕನ ಹುದ್ದೆ ವಹಿಸಲು ಬಿಸಿಸಿಐ ಆಸಕ್ತಿ ತೋರಿಸಿದೆ ಎಂದೂ ವರದಿಯಾಗಿದೆ.

ಇದೀಗ ಅಗರ್ಕರ್​ ಉತ್ತರಾಧಿಕಾರಿಯ ಸ್ಥಾನಕ್ಕೆ ಜಹೀರ್​ ಖಾನ್​ ಹೆಸರು ಮುಂಚೂಣಿಗೆ ಬಂದಿದೆ. ರೋಹಿತ್​ ಶರ್ಮ ಭವಿಷ್ಯದ ವಿಚಾರಕ್ಕೆ ಸಂಬಂಧಿಸಿದಂತೆ ಅಗರ್ಕರ್​ ಮತ್ತು ಬಿಸಿಸಿಐ ಪದಾಧಿಕಾರಿಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಇದೇ ಈಗ ಅಗರ್ಕರ್​ ಹುದ್ದೆಯಲ್ಲಿ ಮುಂದುವರಿಯಲು ಅಡ್ಡಿಯಾಗಿದೆ ಎನ್ನಲಾಗಿದೆ.

47 ವರ್ಷದ ಜಹೀರ್​ ಖಾನ್​ ಭಾರತ ಪರ 92 ಟೆಸ್ಟ್​, 200 ಏಕದಿನ ಮತ್ತು 17 ಟಿ20 ಪಂದ್ಯ ಆಡಿರುವ ಅನುಭವಿಯಾಗಿದ್ದಾರೆ. ಅಲ್ಲದೆ 2011ರ ಏಕದಿನ ವಿಶ್ವಕಪ್​ ವಿಜೇತ ತಂಡದ ಸದಸ್ಯರಾಗಿದ್ದಾರೆ.