2007ರ ಟಿ20 ವಿಶ್ವಕಪ್ ಪಂದ್ಯದದಲ್ಲಿ ಇಂಗ್ಲೆಂಡ್ ಆಟಗಾರ ಆ್ಯಂಡ್ರು ಫ್ಲಿಂಟ್ಆಫ್ ಜೊತೆ ಜಗಳದ ದೃಶ್ಯ
- 2007ರ ವಿಶ್ವಕಪ್ ಪಂದ್ಯದಲ್ಲಿ ಯುವಿ ಅಬ್ಬರಕ್ಕೆ ಸುಸ್ತಾಗಿದ್ದ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್
- ಸ್ಟುವರ್ಟ್ ಓವರ್ನ ಆರೂ ಬಾಲ್ಗಳಿಗೆ ಆರು ಸಿಕ್ಸರ್ ಬಾರಿಸುವ ಮೂಲಕ ಕ್ರಿಕೆಟ್ನಲ್ಲಿ ಯುವರಾಜ್ ಸಿಂಗ್ ಹೊಸ ಇತಿಹಾಸ ಸೃಷ್ಟಿಸಿದರು
- ಇದೇ ಬ್ರಾಡ್ ಮಾಡಿದ ಕೆಲಸದ ಬಗ್ಗೆ ಯುವಿ ಓಪನ್ ಟಾಕ್
ನವದೆಹಲಿ: 2007ರ ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅವರ ಅದೊಂದು ಓವರ್‌ಗೆ, ಟೀಮ್ ಇಂಡಿಯಾದ ಅನ್ಸಂಗ್ ಹೀರೋ ಯುವರಾಜ್ ಸಿಂಗ್ ಬಾರಿಸಿದ ಸ್ಫೋಟಕ ಆರು ಸಿಕ್ಸರ್ಗಳು ಇಂದಿಗೂ ಕ್ರಿಕೆಟ್ ಅಭಿಮಾನಿಗಳ ಕಣ್ಣಿನಲ್ಲಿ ಕಟ್ಟಿದಂತಿದೆ. ಆ ಆಮೋಘ ಕ್ಷಣವನ್ನು ಯುವಿ ಫ್ಯಾನ್ಸ್ ಮಾತ್ರವಲ್ಲ, ಜಾಗತಿಕ ಕ್ರೀಡಾಭಿಮಾನಿಗಳು ಮರೆಯಲು ಸಾಧ್ಯವೇ ಇಲ್ಲ. ಕಾರಣ, ಯುವಿಯನ್ನು ಮೈದಾನದಲ್ಲಿ ಕೆಣಕಿ, ಅದಾದ ಕೆಲವೇ ಕ್ಷಣಗಳಲ್ಲಿ ಸಿಕ್ಸರ್ ಹೊಡೆಸಿಕೊಂಡ ಬ್ರಾಡ್ ಮುಖ ನೋಡುವಂತಿರಲಿಲ್ಲ. ಆರು ಬಾಲ್ಗೆ ಆರು ಸಿಕ್ಸರ್ ಬಾರಿಸುವ ಮೂಲಕ ಯುವಿ ಕ್ರಿಕೆಟ್ ಇತಿಹಾಸದಲ್ಲಿ ವಿಶ್ವ ದಾಖಲೆ ಬರೆದರು. ಇದೀಗ ಅದೇ ಬ್ರಾಡ್ ಬಗ್ಗೆ ಮಾತನಾಡಿರುವ 2011ರ ವಿಶ್ವಕಪ್ ಹೀರೋ ಕೆಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಸಿಕ್ಸರ್ ಮಾತ್ರವಲ್ಲದೇ, ಯುವಿ ಕೇವಲ 12 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಗಳಿಸಿದರು. ಈ ಓವರ್‌ಗೆ ಮೊದಲು, ಆಂಡ್ರ್ಯೂ ಪಿಂಟ್ಲಾಫ್ ಮತ್ತು ಯುವರಾಜ್ ನಡುವೆ ಏನೋ ಒಂದು ವಿಷಯದ ಬಗ್ಗೆ ಜಗಳ ಕೂಡ ನಡೆದಿತ್ತು. ಇದೊಂದು ಇನ್ನಿಂಗ್ಸ್ ಯುವರಾಜ್ ಸಿಂಗ್ ಅವರ ಹೆಸರನ್ನು ಕ್ರಿಕೆಟ್ ಜಗತ್ತಿನಲ್ಲಿ ಅಚ್ಚಳಿಯದಂತೆ ಮಾಡಿತು. ಅದೇ ಸಮಯದಲ್ಲಿ, ಸಪ್ಪೆ ಮುಖವನ್ನು ಹೊತ್ತು ಮೈದಾನದ ಮೂಲೆಯಲ್ಲಿ ನಿಂತಿದ್ದ ಸ್ಟುವರ್ಟ್ ಬ್ರಾಡ್ ಅವರ ಕರಿಯರ್ ಅದಾಗಲೇ ಕೊನೆಯ ಹಂತಕ್ಕೆ ತಲುಪಿತು ಎಂದೇ ಬಹುತೇಕರು ಭಾವಿಸಿದ್ದರು. ಆದರೆ, ಇದ್ಯಾವುದಕ್ಕೂ ಕುಗ್ಗದ ಅವರು, ಶ್ರೇಷ್ಠ ಕ್ರಿಕೆಟಿಗರಾಗಿ ಬೆಳೆದಿದ್ದು ಮತ್ತೊಂದು ಇತಿಹಾಸ. ಟೆಸ್ಟ್‌ನಲ್ಲಿ 600 ವಿಕೆಟ್‌ಗಳನ್ನು ಪಡೆದು ಇಂಗ್ಲೆಂಡ್‌ನ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರಾಗಿ ಮಿಂಚಿದರು.
ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಆಸಕ್ತಿದಾಯಕ ವಿಷಯವನ್ನು ಬಹಿರಂಗಪಡಿಸಿದ ಯುವಿ, 2007ರ ಟಿ20 ವಿಶ್ವಕಪ್ ಗೆದ್ದ ಬಳಿಕ ಸ್ಟುವರ್ಟ್ ಬ್ರಾಡ್ ಅವರ ತಂದೆ ಕ್ರಿಸ್ ಬ್ರಾಡ್ ಯುವರಾಜ್ ಅವರನ್ನು ಭೇಟಿಯಾಗಿ, ಜೆರ್ಸಿಯೊಂದಕ್ಕೆ ನಿಮ್ಮ ಸಹಿ ಹಾಕಿ ಕೊಡಿ ಎಂದು ಕೇಳಿಕೊಂಡರಂತೆ. ಇದಕ್ಕೆ ಒಪ್ಪಿಕೊಂಡ ಯುವರಾಜ್ ಸಿಂಗ್, ತಮ್ಮ ಸಿಗ್ನೇಚರ್ ನೀಡಿದ ಜೆರ್ಸಿಯನ್ನು ಬ್ರಾಡ್ ತಂದೆಗೆ ಕೊಟ್ಟರಂತೆ. ಆದರೆ, ಇದನ್ನು ಕಂಡ ಇಂಗ್ಲೆಂಡ್ ವೇಗಿ, ಸಿಟ್ಟಿನಿಂದ ಅದನ್ನು ಸೀದಾ ಕಸದ ಬುಟ್ಟಿಗೆ ಎಸೆದರು ಎಂದು ಯುವಿ ಹೇಳಿದ್ದಾರೆ.
ಅವರ ಕೋಪದಲ್ಲಿ ನ್ಯಾಯವಿದೆ!
"ಆಗ ಸ್ಟುವರ್ಟ್ ಅವರ ತಂದೆ ಕ್ರಿಸ್ ಬ್ರಾಡ್, ಭಾರತ-ಆಸ್ಟ್ರೇಲಿಯಾ ಪಂದ್ಯಕ್ಕೆ ಮ್ಯಾಚ್ ರೆಫರಿಯಾಗಿದ್ದರು. ಅವರು ನನ್ನ ಬಳಿ ಬಂದು, ನೀವು ನನ್ನ ಮಗನ ಕ್ರಿಕೆಟ್ ಕರಿಯರ್ ಅನ್ನು ಬಹುತೇಕ ಕೊನೆಗೊಳಿಸಿದ್ದೀರಿ ಎಂದರು. ಅದಕ್ಕೆ ನಾನು, 'ಸರ್, ನನ್ನ ಬೌಲಿಂಗ್‌ನಲ್ಲಿಯೂ ಸಹ ಯಾರೋ ಐದು ಸಿಕ್ಸರ್‌ಗಳನ್ನು ಹೊಡೆದರು. ಅದೆಷ್ಟು ನೋವುಂಟುಮಾಡುತ್ತದೆ ಎಂಬುದು ನನಗೂ ತಿಳಿದಿದೆ' ಎಂದೆ. ಆಗ ಅವರು, ಜೆರ್ಸಿಗೆ ನಿಮ್ಮ ಸಹಿ ಹಾಕಿಕೊಡಿ ಎಂದು ನನ್ನನ್ನು ಕೇಳಿದರು. ಆ ಸಮಯದಲ್ಲಿ, ನನ್ನ ಮೇಲೆ ವಿಪರೀತ ಕೋಪವಿಟ್ಟುಕೊಂಡಿದ್ದ ಸ್ಟುವರ್ಟ್ಗೆ ತನ್ನ ತಂದೆ ಮಾಡಿದ ಕೆಲಸ ಕಿಂಚಿತ್ತು ಹಿಡಿಸಲಿಲ್ಲ. ಹಾಗಾಗಿ, ನಾನು ಸಹಿ ಮಾಡಿಕೊಟ್ಟಿದ್ದ ಶರ್ಟ್ ಅನ್ನು ಕಸಕ್ಕೆ ಎಸೆದರು. ಅವರ ಕೋಪದಲ್ಲಿಯೂ ನ್ಯಾಯವಿದೆ ಎಂದು ನನಗೆ ಅನಿಸಿತು" ಎಂದು ಯುವಿ ಹೇಳಿದ್ದಾರೆ,(ಏಜೆನ್ಸೀಸ್).