ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್
- ಕ್ಯಾನ್ಸರ್ ಕಾಯಿಲೆ ಬಗ್ಗೆ ಯುವಿ ಮನದಾಳ
- ಅಂದು ಚಿಕಿತ್ಸೆ ನೀಡಿದ ವೈದ್ಯರ ಮಾತೇ ಭರವಸೆಯ ಬೆಳಕು
- ಕ್ಯಾನ್ಸರ್ ವಿರುದ್ಧ ಗೆದ್ದು ಬಂದ ಯುವರಾಜ್ ಸಿಂಗ್ ಮನದಾಳ
Yuvaraj Singh: 2011ರ ಏಕದಿನ ವಿಶ್ವಕಪ್ ಭಾರತದ ಮುಡಿಗೇರಿದ್ದು ಯಾವ ಭಾರತೀಯನೂ ಮರೆಯೋದಿಲ್ಲ. ಟ್ರೋಫಿ ಎತ್ತಿಹಿಡಿಯಲು ವಿನ್ನಿಂಗ್ ಶಾಟ್ ಮಹೇಂದ್ರ ಸಿಂಗ್ ಧೋನಿ ಬಾರಿಸಿದ್ದೇ ಆದರೂ ಇಡೀ ಟೂರ್ನಿಯಲ್ಲಿ ತಂಡದ ಪರ ಅದ್ಭುತ ಆಲ್ರೌಂಡ್ ಪ್ರದರ್ಶನ ನೀಡಿದ್ದು ವಿಶ್ವಕಪ್ ಅನ್ಸಂಗ್ ಹೀರೋ ಯುವರಾಜ್ ಸಿಂಗ್.
ವಿಶ್ವಕಪ್ ಬಳಿಕ ಕ್ಯಾನ್ಸರ್ ಕಾಯಿಲೆ ಕಾಣಿಸಿಕೊಂಡ ಕಾರಣ, ಯುವಿ ಮೈದಾನದಿಂದ ದೂರ ಉಳಿದರು. ಒಂದಷ್ಟು ಪಂದ್ಯಗಳನ್ನಾಡಿದ್ದು ಬಿಟ್ಟರೆ ಇನ್ಯಾವ ಸರಣಿಯಲ್ಲೂ ಅವರ ಇರುವಿಕೆ ತಂಡದಿಂದ ಕಣ್ಮರೆಯಾಯಿತು. ಕ್ಯಾನ್ಸರ್ನಿಂದ ಗೆದ್ದು ಬಂದ ಯುವರಾಜ್ಗೆ ಟೀಮ್ ಇಂಡಿಯಾದಲ್ಲಿ ಅದಾಗಲೇ ತಮಗೆ ಸ್ಥಾನವಿಲ್ಲ ಎಂಬುದು ಖಚಿತವಾಗಿತ್ತು. ಕೇವಲ ಐಪಿಎಲ್ನಲ್ಲಿ ಮಾತ್ರ ಆಡುತ್ತಿದ್ದ ಯುವಿ, ನಂತರ ಅದರಿಂದಲೂ ಹೊರಗೆ ಬಂದರು. ಇದೀಗ ಸಂದರ್ಶನವೊಂದರಲ್ಲಿ ತಮ್ಮ ಸಮಸ್ಯೆ ಬಗ್ಗೆ ತುಟಿ ಬಿಚ್ಚಿರುವ ಯುವರಾಜ್, ಭಾವುಕರಾಗಿ ಕೆಲವು ಸಂಗತಿಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಕ್ಯಾನ್ಸರ್ ಇರುವುದು ಪತ್ತೆಯಾದ ತಕ್ಷಣ ವೈದ್ಯರು ನನಗೆ ಹೇಳಿದ ಮಾತುಗಳು ಈಗಲೂ ನನಗೆ ನೆನಪಿದೆ. "ಶ್ವಾಸಕೋಶ ಮತ್ತು ಹೃದಯದ ನಡುವೆ ದೊಡ್ಡ ಗೆಡ್ಡೆಯಿದೆ. ನಿಮಗೆ ಕೇವಲ ಮೂರರಿಂದ ಆರು ತಿಂಗಳುಗಳು ಮಾತ್ರ ಸಮಯವಿದೆ. ಕೂಡಲೇ ಕಿಮೊಥೆರಪಿಗೆ ಒಳಗಾಗದಿದ್ದರೆ, ಹೃದಯ ಸ್ತಂಭನ ಆಗುವ ಸಾಧ್ಯತೆಯಿದೆ ಎಂದು ವೈದ್ಯರು ಎಚ್ಚರಿಸಿದರು. ಆ ಕ್ಷಣ ಏನು ಮಾಡಬೇಕೆಂದು ತಿಳಿಯಲಿಲ್ಲ. ಮನಸ್ಸಿಗೆ ಬಹಳ ದುಃಖವಾಯಿತು ಎಂದರು.
ಉತ್ತುಂಗದಲ್ಲಿದ್ದಾಗಲೇ ವೃತ್ತಿಗೆ ಪೆಟ್ಟು
ಅಂತಾರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿದ್ದ ಯುವಿ, ಟೆಸ್ಟ್, ಟಿ20 ಮತ್ತು ಏಕದಿನ ಟೀಮ್ನಲ್ಲಿ ಸ್ಥಾನ ಭದ್ರ ಪಡಿಸಿಕೊಂಡಿದ್ದರು. ವಿಶ್ವಕಪ್ ಗೆದ್ದ ಬಳಿಕ ಒಂದೆರೆಡು ವರ್ಷಗಳ ನಂತರ ಹಂತ ಹಂತವಾಗಿ ಕ್ರಿಕೆಟ್ನಿಂದ ಹಿಂದೆ ಸರಿದ ಯುವರಾಜ್, ತಮ್ಮ ಕರಿಯರ್ನ ಉತ್ತುಂಗದಲ್ಲಿದ್ದಾಗಲೇ ಕ್ರಿಕೆಟ್ ಲೋಕಕ್ಕೆ ಗುಡ್ಬೈ ಹೇಳುವಂತ ಸನ್ನಿವೇಶ ಎದುರಾಗಿದ್ದು ಇಂದಿಗೂ ಅವರ ಅಭಿಮಾನಿಗಳಲ್ಲಿ ಭಾರೀ ನೋವುಂಟು ಮಾಡುತ್ತದೆ.
ಮಾನಸಿಕ ಶಕ್ತಿಯೇ ಔಷಧ
ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವರಾಜ್, ತಮ್ಮನ್ನು ನೋಡಿಕೊಳ್ಳುತ್ತಿದ್ದ ಡಾ. ಲಾರೆನ್ಸ್ ಐನ್‌ಹಾರ್ನ್ ಅವರ ಮಾತುಗಳಿಂದ ಬಹಳ ಉತ್ತೇಜಿತರಾಗಿದ್ದರಂತೆ. ನೀವು ಈ ಆಸ್ಪತ್ರೆಯಿಂದ ಹೊರಬಂದಾಗ, ನನಗೆ ಕ್ಯಾನ್ಸರ್ ಎಂಬ ಕಾಯಿಲೆಯೇ ಇರಲಿಲ್ಲ ಎಂದು ಆರೋಗ್ಯವಾಗಿರುತ್ತೀರಿ" ಎಂದು ವೈದ್ಯರು ಭರವಸೆಯ ಮಾತುಗಳನ್ನಾಡುತ್ತಿದ್ದರಂತೆ. ಇಂತಹ ಮಾತುಗಳಿಂದ ಯುವರಾಜ್ ಅವರಿಗೆ ಕ್ಯಾನ್ಸರ್ ವಿರುದ್ಧ ಹೋರಾಡಲು ಇನ್ನಷ್ಟು ಧೈರ್ಯ ಸಿಕ್ಕಿದಂತಾಯಿತು ಎಂದು ಯುವಿ ಹೇಳಿಕೊಂಡಿದ್ದಾರೆ.
2012ರಲ್ಲಿ, ಕ್ಯಾನ್ಸರ್ ಮಣಿಸಿ ಬಂದ ಯುವಿ, ಭಾರತೀಯ ತಂಡಕ್ಕೆ ಮರುಪ್ರವೇಶಿಸುವ ಮೂಲಕ ತಮ್ಮ ಅಭಿಮಾನಿಗಳಲ್ಲಿ ಖುಷಿ ತಂದರು. 2017ರಲ್ಲಿ, ಇಂಗ್ಲೆಂಡ್ ವಿರುದ್ಧ ತಮ್ಮ ವೃತ್ತಿಜೀವನದ ಅತ್ಯುನ್ನತ ಸ್ಕೋರ್ (150) ಗಳಿಸುವ ಮೂಲಕ ತಾನೊಬ್ಬ ಹಠವಾದಿ, ಹುಟ್ಟು ಹೋರಾಟಗಾರ ಎಂಬುದನ್ನು ಸಾಬೀತುಪಡಿಸಿದರು. ಇಂದು, ತಮ್ಮ YouWeCan ಫೌಂಡೇಶನ್ ಮೂಲಕ ಸಾವಿರಾರು ಕ್ಯಾನ್ಸರ್ ರೋಗಿಗಳಿಗೆ ಯುವಿ ಭರವಸೆಯ ಬೆಳಕಾಗಿದ್ದಾರೆ,(ಏಜೆನ್ಸೀಸ್).