ಕ್ರಿಕೆಟ್

ಪಾಕ್ ಕ್ರಿಕೆಟಿಗರ ಅಭಿಮಾನಿ ಬಳಗಕ್ಕೆ ವಿವೇಚನೆಯೇ ಇಲ್ಲ, ಅವರೆಲ್ಲಾ ಅನಕ್ಷರಸ್ಥರು: ಅಜಮ್ ಖಾನ್ ಶಾಕಿಂಗ್​ ಹೇಳಿಕೆ! | Azam Khan

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಅಜಮ್ ಖಾನ್ (Azam Khan) ತಮ್ಮದೇ ದೇಶದ ಕ್ರಿಕೆಟ್ ಅಭಿಮಾನಿಗಳ ವಿರುದ್ಧ, ಅದರಲ್ಲೂ ಮುಖ್ಯವಾಗಿ ತಂಡದ ತಾರೆ ಬ್ಯಾಟರ್ ಬಾಬರ್ ಅಜಮ್ ಅವರ ಬೆಂಬಲಿಗರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ಪಾಡ್‌ಕಾಸ್ಟ್​​​ವೊಂದರಲ್ಲಿ ಮಾತನಾಡಿರುವ ಖಾನ್​, ಬಾಬರ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ತಮ್ಮನ್ನು ಹಾಗೂ ತಮ್ಮ ಕುಟುಂಬವನ್ನು ಗುರಿಯಾಗಿಸಿಕೊಂಡು ಅತ್ಯಂತ ಕೀಳು ಮಟ್ಟದ ಹಾಗೂ ನಿಂದನೀಯ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

ಮಾಜಿ ಪಾಕಿಸ್ತಾನಿ ಕ್ರಿಕೆಟಿಗ ಮೊಯಿನ್ ಖಾನ್ ಅವರ ಪುತ್ರರಾಗಿರುವ 28 ವರ್ಷದ ಅಜಮ್ ಖಾನ್, ಬ್ಯಾಕ್‌ವರ್ಡ್ ಪಾಯಿಂಟ್ ಕ್ರಿಕೆಟ್ ಪಾಡ್‌ಕಾಸ್ಟ್​​ನಲ್ಲಿ ಭಾಗವಹಿಸಿ ತಮಗೆ ಎದುರಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.

ತಂದೆಗೆ ಕ್ಯಾನ್ಸರ್ ಬರಲಿ ಎಂದಿದ್ದರು!

ಐರ್ಲೆಂಡ್ ವಿರುದ್ಧದ ಪಂದ್ಯವೊಂದನ್ನು ನೆನಪಿಸಿಕೊಂಡ ಅಜಮ್ ಖಾನ್, ನಮ್ಮ ದೇಶದ ಸೋಶಿಯಲ್ ಮೀಡಿಯಾ ವಾತಾವರಣ ನಿಜಕ್ಕೂ ಕಸದಂತಿದೆ. ಒಮ್ಮೆ ನಾನು ಮೈದಾನದಲ್ಲಿ ಬಾಬರ್ ಜೊತೆ ಬ್ಯಾಟಿಂಗ್ ಮಾಡುತ್ತಿದ್ದೆ. ಬಾಬರ್ 75 ರನ್ ಗಳಿಸಿ ಆಡುತ್ತಿದ್ದರು ಮತ್ತು ತಂಡದ ಗೆಲುವಿಗೆ ಇನ್ನು 40 ರನ್‌ಗಳ ಅಗತ್ಯವಿತ್ತು. ಆ ಸಂದರ್ಭದಲ್ಲಿ ನನ್ನ ಇನ್‌ಸ್ಟಾಗ್ರಾಮ್ ಫೋಟೋ ಒಂದಕ್ಕೆ ಕಾಮೆಂಟ್ ಮಾಡಿದ್ದ ಬಾಬರ್ ಅಭಿಮಾನಿಯೊಬ್ಬ, ನೀನೇನಾದರೂ ಬಾಬರ್ ಶತಕಕ್ಕೆ ತಡೆಯೊಡ್ಡಿದರೆ, ನಿನ್ನ ತಾಯಿ ಸತ್ತುಹೋಗಲಿ ಮತ್ತು ನಿನ್ನ ತಂದೆಗೆ ಕ್ಯಾನ್ಸರ್ ಬರಲಿ ಎಂದು ಅತ್ಯಂತ ಕೀಳು ಮಟ್ಟದ ಸಂದೇಶ ಕಳುಹಿಸಿದ್ದ ಎಂದು ಬೇಸರ ತೋಡಿಕೊಂಡಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ನಮ್ಮ ದೇಶದ ಕ್ರಿಕೆಟಿಗರು ತೀರಾ ಅನಕ್ಷರಸ್ಥ ಹಾಗೂ ವಿವೇಚನೆ ಇಲ್ಲದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಬಾಬರ್ ಅಜಮ್ ಅಥವಾ ಅವರ ಆಟದ ಬಗ್ಗೆ ನನಗೆ ಯಾವುದೇ ಅಭ್ಯಂತರವಿಲ್ಲ. ಆದರೆ ಅವರ ಫ್ಯಾನ್ ಬೇಸ್ ಮಾತ್ರ ಅತ್ಯಂತ ಟಾಕ್ಸಿಕ್ (ವಿಷಕಾರಿ) ಆಗಿದೆ. ಇಂತಹ ಸಂದೇಶಗಳನ್ನು ನೋಡಿದಾಗ ಯಾರಾದರೂ ಹೇಗೆ ಸುಮ್ಮನಿರಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ಅಜಮ್ ಖಾನ್ ಕ್ರಿಕೆಟ್ ವೃತ್ತಿಜೀವನ

ಪಾಕಿಸ್ತಾನ ಸೂಪರ್ ಲೀಗ್​ನಲ್ಲಿ ತಮ್ಮ ಬಿರುಸಿನ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ಮೂಲಕ ಗಮನಸೆಳೆದಿದ್ದ ಅಜಮ್ ಖಾನ್ 2021ರಲ್ಲಿ ಪಾಕಿಸ್ತಾನ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಇದುವರೆಗೆ 14 ಟಿ20 ಪಂದ್ಯಗಳನ್ನು ಆಡಿರುವ ಅವರು 88 ರನ್ ಗಳಿಸಿದ್ದಾರೆ. 2024ರ ಟಿ20 ವಿಶ್ವಕಪ್‌ನಲ್ಲಿ ಅಮೆರಿಕ ವಿರುದ್ಧದ ಸೂಪರ್ ಓವರ್ ಸೋಲಿನ ಪಂದ್ಯದಲ್ಲಿ ಆಡಿದ್ದೇ ಇವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ.

ಇನ್ನೊಂದೆಡೆ, 2023ರಲ್ಲಿ ನಾಯಕತ್ವ ತ್ಯಜಿಸಿ, 2024ರ ಟಿ20 ವಿಶ್ವಕಪ್‌ಗೆ ಮರಳಿ ನಾಯಕರಾಗಿದ್ದ ಬಾಬರ್ ಅಜಮ್, ಜುಲೈ 2026ರಲ್ಲಿ ಶಾನ್ ಮಸೂದ್ ಅವರ ಬದಲಿಗೆ ಪಾಕಿಸ್ತಾನ ಟೆಸ್ಟ್ ತಂಡದ ನಾಯಕರಾಗಿ ಮರು ಆಯ್ಕೆಯಾಗಿದ್ದಾರೆ(ಏಜೆನ್ಸೀಸ್​).