ಹೈದರಾಬಾದ್: ಕ್ರಿಕೆಟ್‌ನಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ಅಪಾರ ಕನಸು ಕಂಡಿದ್ದ 17 ವರ್ಷದ ಯುವ ಆಟಗಾರ್ತಿಯೊಬ್ಬಳು ಆತ್ಮಹತ್ಯೆಗೆ ಶರಣಾಗುವ ಮೂಲಕ ದುರಂತವಾಗಿ ಸಾವಿಗೀಡಾಗಿದ್ದಾಳೆ.
ತೆಲಂಗಾಣದ ವಿಕಾರಾಬಾದ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಯುವತಿಯನ್ನು ನಂದಿನಿ ಎಂದು ಗುರುತಿಸಲಾಗಿದ್ದು, ಇಬ್ಬರು ಯುವಕರ ಕಿರುಕುಳದಿಂದಾಗಿ ಆಕೆ ಇಂತಹ ನಿರ್ಧಾರ ಕೈಗೊಂಡಿರಬಹುದು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ವಿಕಾರಾಬಾದ್‌ನ ಅಜ್ಜಿ ಮನೆಯಲ್ಲಿ ಶುಕ್ರವಾರ ಯುವತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಆಕೆ ಕ್ರಿಕೆಟ್ ಕೋಚಿಂಗ್ ಪಡೆಯುತ್ತಿದ್ದು, 2023-24ನೇ ಸಾಲಿನ ಬಿಸಿಸಿಐ ಅಂಡರ್-15 ಏಕದಿನ ಟ್ರೋಫಿಯಲ್ಲೂ ಪ್ರತಿನಿಧಿಸಿದ್ದಳು. ಸ್ಥಳೀಯ ಕ್ರಿಕೆಟ್ ಪಂದ್ಯಗಳಲ್ಲಿಯೂ ಆಡುತ್ತಿದ್ದ ಯುವ ಪ್ರತಿಭೆ, ಅಂಡರ್-19 ಟೂರ್ನಿಗೂ ಆಯ್ಕೆ ಆಗಿದ್ದಳು. ಇದಕ್ಕಾಗಿ ಮೈದಾನದಲ್ಲಿ ಸಿದ್ಧತೆ ಕೂಡ ನಡೆಸುತ್ತಿದ್ದಳು ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಈ ವರ್ಷ ಪರ್ಗಿಯಲ್ಲಿ ಓಪನ್ ಇಂಟರ್‌ಮೀಡಿಯೇಟ್ ಶಿಕ್ಷಣ ಪೂರ್ಣಗೊಳಿಸಿದ್ದ ಬಾಲಕಿಗೆ, ಅಲ್ಲಿಯೇ ಇಬ್ಬರು ಯುವಕರ ಪರಿಚಯವಾಗಿತ್ತು ಎನ್ನಲಾಗಿದೆ. ಅವರಲ್ಲಿ ಒಬ್ಬಾತ ಪ್ರೀತಿಯ ಹೆಸರಿನಲ್ಲಿ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಇಬ್ಬರು ಯುವಕರು ಆಕೆಗೆ ತೊಂದರೆ ನೀಡುತ್ತಿದ್ದರು ಎಂಬುದು ಕುಟುಂಬಸ್ಥರ ಆರೋಪವೂ ಆಗಿದೆ.
ಇಲ್ಲಿಯವರೆಗೆ ಯುವತಿಯ ಸಾವಿಗೆ ಸಂಬಂಧಿಸಿದಂತೆ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಆಕೆಯ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದಿರುವ ಪೊಲೀಸರು, ಅದರಲ್ಲಿನ ಚಾಟ್, ಫೋನ್ ಕರೆ ಸೇರಿದಂತೆ ಇನ್ನಿತರ ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ. ಸಾವಿಗೆ ಕಾರಣವಾದ ಪರಿಸ್ಥಿತಿಗಳನ್ನು ಪತ್ತೆಹಚ್ಚಲು ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬೆನ್ನತ್ತಿದ ಪೊಲೀಸರು ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ವರದಿಯಾಗಿದೆ. ಮತ್ತೊಂದೆಡೆ, ಮೃತ ಬಾಲಕಿಯ ಪೋಷಕರು ಮತ್ತು ಸಂಬಂಧಿಕರು ಆಕೆಯ ಸಾವಿಗೆ ನ್ಯಾಯ ಕೊಡಿಸುವಂತೆ ರಸ್ತೆಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ, ನಗರದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿಯೂ ಕುಟುಂಬಸ್ಥರು ಎಚ್ಚರಿಕೆ ನೀಡಿದ್ದಾರೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ಕುಟುಂಬಸ್ಥರು ಮಾಡಿರುವ ಕಿರುಕುಳದ ಆರೋಪಗಳು ಇನ್ನೂ ತನಿಖೆಯ ಹಂತದಲ್ಲಿವೆ ಎಂದು ವರದಿಗಳು ಉಲ್ಲೇಖಿಸಿವೆ,(ಏಜೆನ್ಸೀಸ್).