ನವದೆಹಲಿ: ಮಂಗಳವಾರ (ಡಿ.09) ಕಟಕ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ಭಾರತ ತಂಡ 101 ರನ್ಗಳ ಭರ್ಜರಿ ಜಯ ಸಾಧಿಸಿದ್ದು, ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮತ್ತು ಬೌಲಿಂಗ್ನ ಅದ್ಭುತ ಪ್ರದರ್ಶನ ನೀಡಿದರು. 28 ಎಸೆತಗಳನ್ನು ಎದುರಿಸಿದ ಪಾಂಡ್ಯ 59 ರನ್ ಗಳಿಸಿ ಅಜೇಯರಾಗಿ ಉಳಿದರು. ಬೌಲಿಂಗ್ನಲ್ಲಿ ಒಂದು ವಿಕೆಟ್ ಕೂಡ ಪಡೆದರು. ಉತ್ತಮ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ (Hardik Pandya) ಭಾಜನರಾದರು.
ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ 100 ಟಿ20 ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ಸಹ ಬರೆದರು. ಏಷ್ಯಾಕಪ್ ಟೂರ್ನಿಯ ಸಮಯದಲ್ಲಿ ಗಾಯಕ್ಕೆ ತುತ್ತಾಗಿದ್ದ ಪಾಂಡ್ಯ, ಎರಡು ತಿಂಗಳಿಗೂ ಹೆಚ್ಚು ಕಾಲ ಕ್ರಿಕೆಟ್‌ನಿಂದ ದೂರವಿದ್ದು, ಈಗ ಅದ್ಭುತ ಕಮ್ಬ್ಯಾಕ್ ಮಾಡಿದ್ದಾರೆ.
ವಿಶ್ರಾಂತಿಯ ವೇಳೆ ಪಾಂಡ್ಯ ತಮಗೆ ನೆರವಾದವರ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದರ ಕುರಿತಾದ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದೆ.
ಕೆಲವೊಮ್ಮೆ ನೀವು ಗಾಯಗೊಂಡಾಗ, ಪರಿಸ್ಥಿತಿ ನಿಮ್ಮನ್ನು ಪರೀಕ್ಷಿಸುತ್ತದೆ. ಇದು ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸುವಂತೆ ಮಾಡುತ್ತದೆ. ಆದರೆ, ಈ ಸಂದರ್ಭದಲ್ಲಿ ನನ್ನೊಂದಿಗೆ ಇದ್ದ ಪ್ರೀತಿ ಪಾತ್ರರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಕಟಕ್ ಟಿ20 ಪಂದ್ಯ ನಡೆದ ನಂತರ ಹಾರ್ದಿಕ್ ತಿಳಿಸಿದರು.
ಮುಂದಿನ ಸಾಲುಗಳಲ್ಲಿ, ನಾನು ನನ್ನ ಸಂಗಾತಿಯನ್ನು ವಿಶೇಷವಾಗಿ ಉಲ್ಲೇಖಿಸಲು ಬಯಸುತ್ತೇನೆ. ಆಕೆ ನನ್ನ ಜೀವನದಲ್ಲಿ ಬಂದಾಗಿನಿಂದ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎಂದು ಬರೆದಿದ್ದಾರೆ.
ಹಾರ್ದಿಕ್ ವೀಡಿಯೊಗೆ ಪ್ರತಿಕ್ರಿಯಿಸಿದ ಮಹಿಕಾ
ಮಹಿಕಾ ಬಿಸಿಸಿಐ ಪೋಸ್ಟ್‌ನಲ್ಲಿ ಹಾರ್ದಿಕ್ "ನಿನ್ನಂತೆ ಯಾರೂ ಇಲ್ಲ ರಾಜಾ..." ಎಂದು ಬರೆದಿದ್ದಾರೆ. ಇದು ಅವರಿಬ್ಬರ ನಡುವಿನ ಆತ್ಮೀಯತೆಯನ್ನು ದೃಢಪಡಿಸುತ್ತದೆ. ಹಾರ್ದಿಕ್ ಮತ್ತು ಮಹಿಕಾ ಇತ್ತೀಚೆಗೆ ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಹಾರ್ದಿಕ್ ಸ್ವತಃ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಮಹಿಕಾ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಮಹಿಕಾ ಶರ್ಮಾ ಯಾರು?
ಮಹಿಕಾ ಶರ್ಮಾ ಒಬ್ಬರು ಭಾರತೀಯ ನಟಿ ಹಾಗೂ ಮಾಡೆಲ್ ಆಗಿದ್ದಾರೆ. ಹರಿಯಾಣದಲ್ಲಿ ಜನಿಸಿದ ಇವರು ಮಿಸ್ ಟೀನ್ ನಾರ್ಥ್ ಈಸ್ಟ್ನಲ್ಲಿ ಗೆದ್ದ ನಂತರ ಅಸ್ಸಾಂನ ಫೇಸ್ ಆಗಿ ಖ್ಯಾತಿಯನ್ನು ಪಡೆದರು. ಟಿವಿ ಸೀರಿಯಲ್‌ಗಳಾದ ಎಫ್.ಐ.ಆರ್, ರಾಮಾಯಣ ಮತ್ತು ಕ್ಯುನ್ಕಿ ಸಾಸ್ ಭಿ ಕಭಿ ಬಾಹು ಥಿ ಯಲ್ಲಿ ನಟಿಸಿದ್ದಾರೆ. ಇನ್ನು ಮಹಿಕಾ ಸೆಕ್ಸ್ ವರ್ಕರ್ ರಿಹ್ಯಾಬ್, ಕ್ಯಾನ್ಸರ್ ರೋಗಿಗಳಿಗೆ ಸಹಾಯ, ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿದ್ದಾರೆ. ಅನೇಕ ಪ್ರಸಿದ್ಧ ಫ್ಯಾಷನ್ ನಿಯತಕಾಲಿಕೆಗಳು ಉದಯೋನ್ಮುಖ ಫ್ಯಾಷನ್ ತಾರೆ ಎಂದು ಬಣ್ಣಿಸಿವೆ (ಏಜೆನ್ಸೀಸ್).