- ಫುಡ್ ಪಾಯ್ಸನಿಂಗ್ನಿಂದ ಆಸ್ಪತ್ರೆಗೆ ದಾಖಲಾದ ಯಶಸ್ವಿ ಜೈಸ್ವಾಲ್
- ವಿಪರೀತ ಹೊಟ್ಟೆ ನೋವಿನ ಬೆನ್ನಲ್ಲೇ ಆಸ್ಪತ್ರೆಗೆ
- ಕಳೆದ 2 ದಿನಗಳಲ್ಲಿ 2 ಕೆಜಿ ತೂಕ ಇಳಿಕೆ
ಮುಂಬೈ: ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾಗಿಯಾದ ಟೀಮ್ ಇಂಡಿಯಾದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್,ಇದೀಗ ವಿಪರೀತ ಹೊಟ್ಟೆ ನೋವಿನಿಂದ ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಅಭಿಮಾನಿಗಳಲ್ಲಿ ತೀರ ಆತಂಕ ಮೂಡಿಸಿದೆ.
ಮುಂಬೈ ಮತ್ತು ರಾಜಸ್ಥಾನ ನಡುವಿನ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಪಂದ್ಯದ ವೇಳೆ ತೀವ್ರ ಹೊಟ್ಟೆ ನೋವಿನಿಂದ ಬಳಲಿದ ಜೈಸ್ವಾಲ್, ಹೆಚ್ಚಿನ ಚಿಕಿತ್ಸೆಗೆಂದು ಆದಿತ್ಯ ಬಿರ್ಲಾ ಆಸ್ಪತ್ರೆಗೆ ದಾಖಲಾದರು. ಹೋಟೆಲ್ವೊಂದರಲ್ಲಿ ಯಶಸ್ವಿ ತಿಂದ ಆಹಾರವೇ ಈ ಸಮಸ್ಯೆಗೆ ಕಾರಣವಾಯಿತು ಎನ್ನಲಾಗಿದೆ. ಎನ್ಡಿಟಿವಿ ವರದಿ ಪ್ರಕಾರ, ಹೋಟೆಲ್ನಲ್ಲಿ ಆಹಾರ ತಿಂದ ಕಾರಣ, ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ವೈದ್ಯರ ಸೂಕ್ತ ಚಿಕಿತ್ಸೆಯಿಂದ ಸದ್ಯ ಜೈಸ್ವಾಲ್ ಚೇತರಿಸಿಕೊಳ್ಳುತ್ತಿದ್ದಾರೆ.
ಫುಡ್ ಪಾಯ್ಸನಿಂಗ್ ಅವರ ಅನಾರೋಗ್ಯ ಸಮಸ್ಯೆಗೆ ಕಾರಣ. ಔಷಧ ಮತ್ತು ವೈದ್ಯರ ಚಿಕಿತ್ಸೆಯಿಂದ ನೋವು ಕಡಿಮೆಯಾಗಿದೆ. ಕಳೆದ ಎರಡು ದಿನಗಳಲ್ಲಿ ಜೈಸ್ವಾಲ್ 2 ಕೆಜಿ ತೂಕ ಕಳೆದುಕೊಂಡಿದ್ದಾರೆ. ಕನಿಷ್ಠ 7ರಿಂದ 10 ದಿನಗಳ ವಿಶ್ರಾಂತಿ ಪಡೆಯುವುದು ಅಗತ್ಯ ಎಂದು ವೈದ್ಯರು ತಿಳಿಸಿದ್ದಾಗಿ ವರದಿಯಾಗಿದೆ. ಇನ್ನು ಯಶಸ್ವಿ ಪರಿಸ್ಥಿತಿ ಹೀಗಿರುವಾಗ, ಡಿ.24ರಿಂದ ಆರಂಭಗೊಳ್ಳಲಿರುವ ವಿಜಯ್ ಹಜಾರೆ ಟ್ರೋಫಿಗೆ ತಂಡದಲ್ಲಿ ಅವರ ಅನುಪಸ್ಥಿತಿ ಕಾಡಲಿದೆ. ಇದರೊಟ್ಟಿಗೆ, ನ್ಯೂಜಿಲೆಂಡ್ ವಿರುದ್ಧದ ಮೂರು ಏಕದಿನ ಪಂದ್ಯಗಳನ್ನು ಭಾರತ ಆಡಲಿದ್ದು, ಈ ತಂಡದಲ್ಲಿ ಜೈಸ್ವಾಲ್ ಇರುವುದು ಗಮನಾರ್ಹ,(ಏಜೆನ್ಸೀಸ್).