ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಯಶಸ್ವಿ ಜೈಸ್ವಾಲ್
- ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಯಶಸ್ವಿ ಜೈಸ್ವಾಲ್ ಆಸ್ಪತ್ರೆಗೆ ದಾಖಲು
- ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಪಂದ್ಯದ ಬೆನ್ನಲ್ಲೇ ಹದಗೆಟ್ಟ ಆರೋಗ್ಯ
- ಪುಣೆಯ ಆದಿತ್ಯ ಬಿರ್ಲಾ ಆಸ್ಪತ್ರೆಗೆ ಯಶಸ್ವಿ ಜೈಸ್ವಾಲ್ ಸ್ಥಳಾಂತರ
ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಯಶಸ್ವಿ ಜೈಸ್ವಾಲ್ ( Yashasvi Jaiswal ) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ 2025ರ ಭಾಗವಾಗಿ ಮಂಗಳವಾರ (ಡಿ.16) ರಾಜಸ್ಥಾನ ಮತ್ತು ಮುಂಬೈ ನಡುವಿನ ಪಂದ್ಯ ನಡೆಯಿತು. ಈ ವೇಳೆ ಅನಾರೋಗ್ಯಕ್ಕೆ ಒಳಗಾದ ಬೆನ್ನಲ್ಲೇ ಜೈಸ್ವಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ತಿಳಿದುಬಂದಿರುವ ಮಾಹಿತಿ ಪ್ರಕಾರ, ಜೈಸ್ವಾಲ್ ಅವರು ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ.
ಜೈಸ್ವಾಲ್ ಅವರನ್ನು ಪುಣೆಯ ಆದಿತ್ಯ ಬಿರ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಜೈಸ್ವಾಲ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯಕ್ಕೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಇನ್ನು ಪಂದ್ಯದ ಉದ್ದಕ್ಕೂ ಜೈಸ್ವಾಲ್ ಅವರು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು ಎಂದು ಹಲವಾರು ವರದಿಗಳು ತಿಳಿಸಿವೆ. ಪಂದ್ಯದ ನಂತರ ಅವರ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 216 ರನ್ ಗಳಿಸಿತು. ರಾಜಸ್ಥಾನ ತಂಡದ ಬ್ಯಾಟ್ಸ್‌ಮನ್‌ಗಳಲ್ಲಿ ಮುಕುಲ್ ಚೌಧರಿ (54 ರನ್, 28 ಎಸೆತ, 4 ಬೌಂಡರಿ, 3 ಸಿಕ್ಸರ್) ಮತ್ತು ದೀಪಕ್ ಹೂಡಾ (51 ರನ್, 31 ಎಸೆತ, 4 ಬೌಂಡರಿ, 3 ಸಿಕ್ಸರ್) ಅರ್ಧಶತಕಗಳನ್ನು ಗಳಿಸಿದರು. ರಾಮ್‌ನಿವಾಸ್ ಗೋಲ್ಡಾ (48 ರನ್, 29 ಎಸೆತ, 3 ಬೌಂಡರಿ ಮತ್ತು 3 ಸಿಕ್ಸರ್) ಅತ್ಯುತ್ತಮ ಪ್ರದರ್ಶನ ನೀಡಿದರು.
ನಂತರ ಮುಂಬೈ ತಂಡವು 18.1 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 217 ರನ್‌ಗಳ ಗುರಿಯನ್ನು ತಲುಪಿತು. ಅಜಿಂಕ್ಯ ರಹಾನೆ (72 ರನ್, 41 ಎಸೆತ 7 ಬೌಂಡರಿ, 3 ಸಿಕ್ಸರ್) ಮತ್ತು ಸರ್ಫರಾಜ್ ಖಾನ್ (73 ರನ್, 22 ಎಸೆತ 6 ಬೌಂಡರಿ, 7 ಸಿಕ್ಸರ್) ಮುಂಬೈ ಪರ ಅದ್ಭುತ ಅರ್ಧಶತಕಗಳನ್ನು ಗಳಿಸಿದರು. ಜೈಸ್ವಾಲ್ ಅನಾರೋಗ್ಯದ ನಡುವೆಯೂ ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿದು, 16 ಎಸೆತಗಳಲ್ಲಿ 15 ರನ್ ಗಳಿಸಿದರು.
ಭಾರತೀಯ ಕ್ರಿಕೆಟ್‌ನಲ್ಲಿ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಜೈಸ್ವಾಲ್ ತುಂಬಾ ಬಳಲಿದ್ದಾರೆ. ಇದೀಗ ಜೈಸ್ವಾಲ್ ಅವರು ಆಸ್ಪತ್ರೆಗೆ ದಾಖಲಾಗಿರುವುದು ಕಳವಳವನ್ನು ಹೆಚ್ಚಿಸಿದೆ. ಏಕೆಂದರೆ, ಭಾರತಕ್ಕಾಗಿ ಎಲ್ಲಾ ಮಾದರಿಗಳ ಕ್ರಿಕೆಟ್‌ಗೆ ಜೈಸ್ವಾಲ್ ಅವರ ಪ್ರಾಮುಖ್ಯತೆ ತುಂಬಾ ಹೆಚ್ಚುತ್ತಿದೆ. ಹೀಗಾಗಿ ಜೈಸ್ವಾಲ್ ಅವರು ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕಿದೆ, (ಏಜೆನ್ಸೀಸ್).