ನಾಳೆಯಿಂದ ವಡೋದರದಲ್ಲಿ ಡಬ್ಲ್ಯುಪಿಎಲ್ ಕಾದಾಟ; ಗೆಲುವಿನ ಓಟ ಮುಂದುವರಿಸಲು ಆರ್ಸಿಬಿ ಸಜ್ಜು
ವಡೋದರ: ವುಮೆನ್ಸ್ ಪ್ರೀಮಿಯರ್ ಲೀಗ್ (WPL) ನಾಲ್ಕನೇ ಆವೃತ್ತಿಯ ಎರಡನೇ ಹಾಗೂ ಅಂತಿಮ ಚರಣಕ್ಕೆ ವಡೋದರದ ಕೋಟಂಬಿ ಸ್ಟೇಡಿಯಂನಲ್ಲಿ ವೇದಿಕೆ ಸಜ್ಜಾಗಿದೆ. ಸತತ ನಾಲ್ಕು ಗೆಲುವಿನೊಂದಿಗೆ ನವಿ ಮುಂಬೈನ ಮೊದಲ ಚರಣವನ್ನು ಅಜೇಯವಾಗಿ ಮುಕ್ತಾಯಗೊಳಿಸಿರುವ ಮಾಜಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ವಡೋದರದಲ್ಲೂ ಗೆಲುವಿನ ಆರಂಭ ಕಾಣುವ ತವಕದಲ್ಲಿದೆ. ಸ್ಮೃತಿ ಮಂದನಾ ಬಳಗ ಸೋಮವಾರ ನಡೆಯಲಿರುವ ವಡೋದರ ಚರಣದ ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಆರ್ಸಿಬಿ ತಂಡದ ಪ್ಲೇಆ್ ಪ್ರವೇಶ ಈಗಾಗಲೆ ಬಹುತೇಕ ಪಕ್ಕಾ ಆಗಿದ್ದು, ಉಳಿದ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದರೆ ನೇರವಾಗಿ ಫೈನಲ್ಗೇರುವ ಅವಕಾಶವೂ ಇದೆ.
ಆರ್ಸಿಬಿ ಬ್ಯಾಟಿಂಗ್ ವಿಭಾಗಕ್ಕೆ ಈಗಾಗಲೆ ಗ್ರೇಸ್ ಹ್ಯಾರಿಸ್, ರಿಚಾ ಘೋಷ್, ನಾಡಿನ್ ಡಿ ಕ್ಲರ್ಕ್, ರಾಧಾ ಯಾದವ್ ಬಲ ತುಂಬಿದ್ದರೆ, ಕಳೆದ ಪಂದ್ಯದಲ್ಲಿ ಮಿಂಚಿದ ಸ್ಮೃತಿ ಮಂದನಾ ಮತ್ತು ಜಾರ್ಜಿಯಾ ವೊಲ್ ಮತ್ತಷ್ಟು ವಿಶ್ವಾಸ ಮೂಡಿಸಿದ್ದಾರೆ. ಬೌಲಿಂಗ್ನಲ್ಲಿ ಲಾರೆನ್ ಬೆಲ್, ನಾಡಿನ್, ಶ್ರೇಯಾಂಕಾ ಪಾಟೀಲ್ ಜತೆಗೆ ಸಯಾಲಿ ಸತ್ಗರೆ ಕೂಡ ಕಳೆದ ಪಂದ್ಯದಲ್ಲಿ ಶಕ್ತಿ ಹೆಚ್ಚಿಸಿದ್ದಾರೆ. ಟೂರ್ನಿಯಲ್ಲಿ ಗುಜರಾತ್ ವಿರುದ್ಧದ ಮೊದಲ ಮುಖಾಮುಖಿಯಲ್ಲಿ 32 ರನ್ಗಳಿಂದ ಗೆದ್ದ ಆತ್ಮವಿಶ್ವಾಸವೂ ಆರ್ಸಿಬಿ ತಂಡಕ್ಕಿದೆ. ಆರ್ಸಿಬಿಯ ಹಳೆ ಆಟಗಾರ್ತಿಯರಾದ ಸೋಫಿ ಡಿವೈನ್, ರೇಣುಕಾ ಸಿಂಗ್, ಜಾರ್ಜಿಯಾ ವರೆಹ್ಯಾಂ ಈ ಬಾರಿ ಸವಾಲೊಡ್ಡುವ ನಿರೀಕ್ಷೆ ಇದೆ.
ಪ್ಲೇಆಫ್ ಲೆಕ್ಕಾಚಾರ: ಟೂರ್ನಿಯ 11 ಪಂದ್ಯ ಮುಗಿದಿದ್ದು, ಇನ್ನು 9 ಲೀಗ್ ಪಂದ್ಯಗಳು ಬಾಕಿ ಇವೆ. ಯಾವ ತಂಡವೂ ಇದುವರೆಗೆ ಪ್ಲೇಆಫ್ ಪ್ರವೇಶ ಖಾತ್ರಿಪಡಿಸಿಕೊಂಡಿಲ್ಲ. ಆರ್ಸಿಬಿ ಇನ್ನೊಂದು ಪಂದ್ಯ ಗೆದ್ದರೂ ಪ್ಲೇಆಫ್ಗೇರಬಹುದಾಗಿದೆ. ಆಗ ಉಳಿದ 2 ಸ್ಥಾನಗಳಿಗೆ ಇತರ 4 ತಂಡಗಳು ಪೈಪೋಟಿ ನಡೆಸಬೇಕಾಗುತ್ತದೆ. ಅದರಲ್ಲೂ ಡೆಲ್ಲಿ ತಂಡ ಪ್ಲೇಆಫ್ಗೇರಬೇಕಾದರೆ ಉಳಿದ 4 ಪಂದ್ಯಗಳಲ್ಲೂ ಗೆಲ್ಲಲೇಬೇಕಾಗಿದೆ. ಸತತ 2 ಗೆಲುವಿನೊಂದಿಗೆ ಟೂರ್ನಿ ಆರಂಭಿಸಿದ್ದ ಗುಜರಾತ್ ಈಗ ಸತತ 2 ಸೋಲಿನೊಂದಿಗೆ ಲಯ ತಪ್ಪಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಕೊನೇ 2 ಪಂದ್ಯಗಳಲ್ಲಿ ಗೆದ್ದಿರುವ ಯುಪಿ ವಾರಿಯರ್ಸ್ಗೂ ಉಳಿದ 3 ಲೀಗ್ ಪಂದ್ಯಗಳಲ್ಲೂ ಗೆಲ್ಲುವ ಒತ್ತಡವಿದೆ.
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.